ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ ಬಿ.ವಿ ತಾಲ್ಲೂಕಿನ ಅಂಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂವಿನ ಕಟ್ಟೆ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದರಿ ವಸತಿ ಶಾಲೆಯ ಕುಡಿಯುವ ನೀರಿಗಾಗಿ ಇತ್ತೀಚಿಗೆ ಕೊರೆಸಿರುವ ಕೊಳವೆಬಾವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಸತಿ ಶಾಲೆಗೆ ಭೇಟಿ ನೀಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕಂಪ್ಯೂಟರ್ ಲ್ಯಾಬ್ ಗೆ ಭೇಟಿ ನೀಡಿ ಕುದ್ದು ಮಕ್ಕಳ ಕಂಪ್ಯೂಟರ್ ಕಲಿಕೆಯನ್ನು ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರಸ್ತುತ ಎಐ ತಂತ್ರಜ್ಞಾನ ಇರುವುದರಿಂದ ಅದಕ್ಕೆ ಹೊಂದಿಕೊಳ್ಳುವಂತೆ ಮಕ್ಕಳ ಜ್ಞಾನ ವೃದ್ಧಿ ಆಗಬೇಕು ಹಾಗೂ ತಂತ್ರಜ್ಞಾನದ ಅರಿವು ಇರಬೇಕು ಎಂದರು. ವಸತಿ ಶಾಲೆಯ ಅಡುಗೆ ಕೋಣೆ, ಹಾಜರಾತಿ ಹಾಗೂ ದಾಸ್ತಾನುವಹಿಗಳನ್ನು ಪರಿಶೀಲಿಸಿದರು.
ರೈತರೊಂದಿಗೆ ಮಾತುಕತೆ : ಹೂವಿನ ಕಟ್ಟೆ ಗ್ರಾಮದ ಈಶ್ವರ್ ರವರ ಮಿಡಿ ಸೌತೆಕಾಯಿ ತೋಟಕ್ಕೆ ಭೇಟಿ ನೀಡಿ ಮಿಶ್ರಬೆಳೆ ಬೆಳೆದಿರುವ ಬಗ್ಗೆ ಖುದ್ದು ಪರಿಶೀಲಿಸಿ, ರೈತರೊಂದಿಗೆ ಸಂವಾದ ನಡೆಸಿದರು. ಮಿಡಿ ಸೌತೆಕಾಯಿಯ ಕೃಷಿ ಹಾಗೂ ಮಾರುಕಟ್ಟೆಯ ಬಗ್ಗೆ ರೈತರೊಂದಿಗೆ ಚರ್ಚಿಸಿ, ಸರ್ಕಾರದ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳ ಅನುಕೂಲ ಪಡೆಯಲು ತಿಳಿಸಲಾಯಿತು.
ಜೆಜೆಎಂ ಕಾಮಗಾರಿ ಪರಿಶೀಲನೆ : ಹೂವಿನ ಕಟ್ಟೆ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಜಲಜೀವನ್ ಮಿಷನ್ ಕಾಮಗಾರಿಯನ್ನು ಪರಿಶೀಲಿಸಿ ಶೀಘ್ರದಲ್ಲಿ ಕಾಮಗಾರಿಯನ್ನು ಮುಕ್ತಾಯಗೊಳಿಸಿ ಗ್ರಾಮದ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಸೂಚಿಸಲಾಯಿತು.

ಕ್ಷೇತ್ರ ಭೇಟಿ ವೇಳೆ ಕಾರ್ಯಪಾಲಕ ಅಭಿಯಂತರು, ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.
