ತುಮಕೂರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮೃತ ಪತ್ರಕರ್ತ ಈಶ್ವರ್ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಪತ್ನಿ ಅನಿತ ಆರ್. ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಕುಟುಂಬದೊಂದಿಗೆ ಕೆಲಕಾಲ ಆತ್ಮೀಯವಾಗಿ ಮಾತುಕತೆ ನಡೆಸಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಈಶ್ವರ್ ಅವರ ಪುತ್ರಿ ಆದ್ಯಶ್ರೀಯೊಂದಿಗೆ ವಿಶೇಷವಾಗಿ ಸಮಯ ಕಳೆದ ಜಿಲ್ಲಾಧಿಕಾರಿಗಳು, ಆಕೆಯೊಂದಿಗೆ ಆತ್ಮೀಯವಾಗಿ ಮಾತನಾಡಿ ಸಂತಸದ ಕ್ಷಣಗಳನ್ನು ಹಂಚಿಕೊಂಡರು. ಬಳಿಕ ತಮ್ಮ ಪುತ್ರಿ ಶಿವಾಂಕಿನಿಯೊಂದಿಗೆ ತುಮಕೂರಿನ ಅಮಾನಿಕೆರೆಯಲ್ಲಿ ಬೋಟಿಂಗ್ಗೆ ತೆರಳಿದ ಅವರು, ಆದ್ಯಶ್ರೀಯನ್ನೂ ಜೊತೆಯಲ್ಲಿ ಕರೆದುಕೊಂಡು ಬೋಟಿಂಗ್ ಮಾಡಿಸಿ ಖುಷಿಯ ಕ್ಷಣಗಳನ್ನು ಅನುಭವಿಸಿದರು.
ಬೋಟಿಂಗ್ ವೇಳೆ ಮಕ್ಕಳೊಂದಿಗೆ ಬೆರೆತು ಮಾತನಾಡಿದ ಜಿಲ್ಲಾಧಿಕಾರಿಗಳಿಗೆ ಆದ್ಯಶ್ರೀ ತಾನು ಚೆನ್ನಾಗಿ ಓದಿ ವೈದ್ಯೆಯಾಗುವ ಕನಸು ಹೊಂದಿರುವುದಾಗಿ ತಿಳಿಸಿದಳು. ತನ್ನ ಶಾಲೆಯ ನೋಟ್ ಪುಸ್ತಕಗಳನ್ನು ತೋರಿಸಿದಾಗ ಜಿಲ್ಲಾಧಿಕಾರಿಗಳು ಆಕೆಯನ್ನು ಮೆಚ್ಚಿ ಉತ್ತಮವಾಗಿ ಓದುವಂತೆ ಪ್ರೋತ್ಸಾಹಿಸಿದರು.

ಆಡಳಿತಾತ್ಮಕ ಜವಾಬ್ದಾರಿಗಳ ನಡುವೆಯೂ ದುಃಖದಲ್ಲಿರುವ ಕುಟುಂಬಕ್ಕೆ ಸಾಂತ್ವನ ಹೇಳುವುದರ ಜೊತೆಗೆ ಪುಟ್ಟ ಬಾಲಕಿಯ ಮನದಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿದ ಜಿಲ್ಲಾಧಿಕಾರಿಯ ನಡೆ ಮೆಚ್ಚುಗೆಗೆ ಪಾತ್ರವಾಯಿತು. ಅಮಾನಿಕೆರೆಯ ಸುಂದರ ವಾತಾವರಣದಲ್ಲಿ ಕಳೆದ ಈ ಆತ್ಮೀಯ ಕ್ಷಣಗಳು ಕುಟುಂಬದ ಸದಸ್ಯರು ಹಾಗೂ ನೆರೆದವರ ಮನದಲ್ಲಿ ವಿಶೇಷ ನೆನಪಾಗಿ ಉಳಿದವು.
ಇದೇ ವೇಳೆ ಗುಬ್ಬಿಯ ಚಾಲುಕ್ಯ ಆಸ್ಪತ್ರೆಯ ವೈದ್ಯರಾದ ಡಾ.ನಾಗಭೂಷಣ್ ಅವರು ಈಶ್ವರ್ ಮಗಳ ವಿದ್ಯಾಭ್ಯಾಸಕ್ಕಾಗಿ 10 ಸಾವಿರ ರೂ ಚೆಕ್ ನೀಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಜಿಲ್ಲಾಧ್ಯಕ್ಷ ಎಲ್. ಯೋಗೀಶ್ ಅವರು, ಮೃತ ಪತ್ರಕರ್ತ ಈಶ್ವರ್ ಅವರ ಪತ್ನಿ ಅನಿತ ಆರ್. ಅವರಿಗೆ ಜೀವನೋಪಾಯಕ್ಕಾಗಿ ಸೂಕ್ತ ಉದ್ಯೋಗಾವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಅನಿತ ಆರ್. ಅವರಿಗೆ ಉದ್ಯೋಗ ಕಲ್ಪಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಪ್ರಸನ್ನ ದೊಡ್ಡಗುಣಿ, ಖಜಾಂಚಿ ಸತೀಶ್, ನಿರ್ದೇಶಕರಾದ ಜಗನ್ನಾಥ್ ಕಾಳೇನಹಳ್ಳಿ, ಸುರೇಶ್ ವತ್ಸ, ಮಧು.ಆರ್.ಎಲ್, ರಘು.ಎ.ಎನ್ ಸೇರಿದಂತೆ ಕುಟುಂಬದವರು ಇದ್ದರು.
