breaking news

ಕುರಿ-ಮೇಕೆ ಮಾಂಸ ಮಾರಾಟಗಾರರ ಹಕ್ಕುಗಳಿಗಾಗಿ ಹೊಸ ಸಂಘಟನೆ: ತುಮಕೂರಿನಲ್ಲಿ ಖುರೇಷಿ ಅಸೋಸಿಯೇಷನ್‌ಗೆ ಚಾಲನೆ

ಕುರಿ-ಮೇಕೆ ಮಾಂಸ ಮಾರಾಟಗಾರರ ಹಕ್ಕುಗಳಿಗಾಗಿ ಹೊಸ ಸಂಘಟನೆ: ತುಮಕೂರಿನಲ್ಲಿ ಖುರೇಷಿ ಅಸೋಸಿಯೇಷನ್‌ಗೆ ಚಾಲನೆ

ತುಮಕೂರು: ತುಮಕೂರು ಜಿಲ್ಲೆಯ ಕುರಿ ಮತ್ತು ಮೇಕೆ ಮಾಂಸ ಮಾರಾಟಗಾರರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಸರ್ಕಾರ ಮತ್ತು ಸಂಘ-ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಲು ಸಂಘವೊಂದನ್ನು ಸ್ಥಾಪಿಸಿದ್ದು, ‘ಖುರೇಷಿ ಅಸೋಸಿಯೇಷನ್, ತುಮಕೂರು ಜಿಲ್ಲೆ’ ಇಂದಿನಿಂದ ಕಾರ್ಯನಿರ್ವಹಿಸಲಿದೆ ಎಂದು ಮಾಜಿ ಶಾಸಕ ಡಾ. ರಫೀಕ್ ಅಹಮದ್ ತಿಳಿಸಿದ್ದಾರೆ.

ನಗರದ ಬಿ.ಜಿ.ಪಾಳ್ಯ ವೃತ್ತ, ಸುಬ್ರಮಣ್ಯಸ್ವಾಮಿ ದೇವಸ್ಥಾನ ರಸ್ತೆ ಬಳಿ ‘ಖುರೇಷಿ ಅಸೋಸಿಯೇಷನ್, ತುಮಕೂರು ಜಿಲ್ಲೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇದು ಕುರಿ ಮತ್ತು ಮೇಕೆ ಮಾಂಸ ಮಾರಾಟಗಾರರ ಬಹುದಿನಗಳ ಬೇಡಿಕೆಯಾಗಿತ್ತು. ಉದ್ಯಮದಲ್ಲಿ ಉಂಟಾಗುವ ಸಮಸ್ಯೆಗಳ ಚರ್ಚೆ, ಪರಿಹಾರ ಹಾಗೂ ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸುವುದಲ್ಲದೆ, ಭವಿಷ್ಯದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ಖುರೇಷಿ ಅಸೋಸಿಯೇಷನ್ ಮಹತ್ವದ ಪಾತ್ರ ವಹಿಸಲಿದೆ.ಹತ್ತಾರು ವರ್ಷಗಳಿಂದ ಈ ಸಮುದಾಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವುಗಳನ್ನು ಸರ್ಕಾರ ಹಾಗೂ ಸಂಬಂಧಪಟ್ಟ ಸಂಸ್ಥೆಗಳ ಮುಂದಿಡಲು ಇಂತಹ ಸಂಘದ ಅಗತ್ಯವಿತ್ತು. ಅದು ಇಂದು ಈಡೇರಿದೆ.

ಸಂಘದ ಅಧ್ಯಕ್ಷರಾಗಿ ಅನ್ಸರ್ ಪಾಷ, ಕಾರ್ಯದರ್ಶಿಯಾಗಿ ನೂರುಲ್ಲಾ, ಜಂಟಿ ಕಾರ್ಯದರ್ಶಿಯಾಗಿ ತಬ್ರೇಶ್ ಖುರೇಷಿ ಹಾಗೂ ಹಲವರು ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಉದ್ದೇಶ ಈಡೇರಲಿ ಎಂದು ಡಾ. ರಫೀಕ್ ಅಹಮದ್ ಶುಭ ಹಾರೈಸಿದರು.

ಖುರೇಷಿ ಅಸೋಸಿಯೇಷನ್, ತುಮಕೂರು ಜಿಲ್ಲೆಯ ಅಧ್ಯಕ್ಷ ಅನ್ಸರ್ ಪಾಷ ಮಾತನಾಡಿ, ನಮ್ಮ ಸಂಘದಲ್ಲಿ ಇದುವರೆಗೆ ಸುಮಾರು 68 ಅಂಗಡಿಗಳ ಮಾಲೀಕರು ಸದಸ್ಯರಾಗಿದ್ದಾರೆ. ಇಂದು 28 ಜನರು ಸೇರಿ ಸಂಘವನ್ನು ಅಸ್ತಿತ್ವಕ್ಕೆ ತಂದಿದ್ದೇವೆ. ಇದರ ಮೂಲಕ ನಾವು ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉತ್ಸುಕತೆಯಲ್ಲಿದ್ದೇವೆ.ಪ್ರಮುಖವಾಗಿ ದರಗಳ ವ್ಯತ್ಯಾಸ, ಕಸ ವಿಲೇವಾರಿ, ತೂಕ-ಅಳತೆಯಲ್ಲಿನ ಗೊಂದಲ, ಕುರಿ-ಮೇಕೆಗಳಿಗೆ ರೋಗ ಬಂದಾಗ ಸರ್ಕಾರದ ನೆರವು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇವೆ. ಅಲ್ಲದೆ, ಪಾಲಿಕೆ ವತಿಯಿಂದ ಇದುವರೆಗೆ ಅಂಗಡಿಗೆ ₹2 ಸಾವಿರ ಇದ್ದ ಶುಲ್ಕವನ್ನು ಏಕಾಏಕಿ ₹11 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅದನ್ನು ಕಡಿಮೆ ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಜಿಲ್ಲಾಡಳಿತ ಮತ್ತು ನಗರಪಾಲಿಕೆ ನಮ್ಮ ಮನವಿಗೆ ಸ್ಪಂದಿಸಲಿದೆ ಎಂಬ ವಿಶ್ವಾಸವಿದೆ ಎಂದರು.

ಮಾಜಿ ಶಾಸಕ ಡಾ. ಶಫಿ ಅಹಮದ್ ಮಾತನಾಡಿ, ಒಳ್ಳೆಯ ಉದ್ದೇಶದಿಂದ ಕುರಿ ಮತ್ತು ಮೇಕೆ ಮಾಂಸ ಮಾರಾಟಗಾರರು ‘ಖುರೇಷಿ ಅಸೋಸಿಯೇಷನ್, ತುಮಕೂರು ಜಿಲ್ಲೆ’ ಎಂಬ ಸಂಘವನ್ನು ಸ್ಥಾಪಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ತಮ್ಮ ವೃತ್ತಿಯಲ್ಲಿ ಎದುರಾಗುವ ಸಮಸ್ಯೆಗಳಾದ ದರ ವ್ಯತ್ಯಾಸ, ಸ್ವಚ್ಛತೆ, ರೋಗರುಜಿನದಂತಹ ಸಂದರ್ಭಗಳಲ್ಲಿ ಆರ್ಥಿಕ ನೆರವು, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಹಲವು ವಿಚಾರಗಳು ಸಂಘದ ಮುಂದಿವೆ. ಅವುಗಳ ಪರಿಹಾರಕ್ಕೆ ಸಂಘ ಸಶಕ್ತವಾಗಿ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಕುರಿ ಮತ್ತು ಮೇಕೆ ಮಾರಾಟಗಾರರು ಒಂದೆಡೆ ಸೇರಿ ಖುರೇಷಿ ಅಸೋಸಿಯೇಷನ್ ಸ್ಥಾಪಿಸುವ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ. ಅಸಂಘಟಿತರಾಗಿದ್ದ ಮಾಂಸ ಮಾರಾಟಗಾರರು ಸಂಘಟಿತರಾಗಿ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಒಂದಾಗಿರುವುದು ಸಂತೋಷದ ವಿಚಾರ. ಸ್ವಚ್ಛತೆ, ಮಾರುಕಟ್ಟೆ, ಸರ್ಕಾರದ ಇಲಾಖೆಗಳೊಂದಿಗೆ ಸಂಪರ್ಕ ಸೇರಿದಂತೆ ಹಲವು ವಿಷಯಗಳು ಇಲ್ಲಿ ಚರ್ಚೆಯಾಗಿವೆ.ಪ್ರಮುಖವಾಗಿ ಕಸ ವಿಲೇವಾರಿ ಆಯಾ ದಿನವೇ ಆಗಬೇಕಿದೆ. ಈ ನಿಟ್ಟಿನಲ್ಲಿ ತುಮಕೂರು ಪಾಲಿಕೆಯ ಆಯುಕ್ತರು ಸ್ಥಳಕ್ಕೆ ಆಗಮಿಸುವ ಭರವಸೆ ನೀಡಿದ್ದಾರೆ. ಹಾಗೆಯೇ ಪರಿಸರ ಇಂಜಿನಿಯರ್ ಅವರೂ ಸಹ ಭೇಟಿ ನೀಡಿ ಸ್ವಚ್ಛತೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.

ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ, ಕುರಿ ಮತ್ತು ಮೇಕೆ ಮಾಂಸ ಮಾರಾಟಗಾರರು ಈ ಕೆಲಸವನ್ನು ವಂಶಪಾರಂಪರ್ಯವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಈ ಹಿಂದೆ ಅವರಿಗೆ ಶೇ. 4ರಷ್ಟು ಮೀಸಲಾತಿ ಇತ್ತು. ಅದನ್ನು ಈಗ ತೆಗೆದುಹಾಕಿರುವುದರಿಂದ ಅವರಿಗೆ ಬಹಳ ಅನ್ಯಾಯವಾಗಿದೆ.ಇವರಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಇದೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಂಘವನ್ನು ಸ್ಥಾಪಿಸಲಾಗಿದೆ. ವಿದ್ಯಾಭ್ಯಾಸ ಮತ್ತು ಆರ್ಥಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಸಂಘಟನೆ ಮಾಡಿದ್ದು, ತಡವಾಗಿಯಾದರೂ ಎಚ್ಚೆತ್ತುಕೊಂಡಿದ್ದಾರೆ. ಇವರೊಂದಿಗೆ ನಾವು ಸದಾ ಇರುತ್ತೇವೆ ಎಂದರು.

ಈ ವೇಳೆ ಮುಖಂಡರಾದ ಅಸ್ಲಾಂ ಪಾಷಾ, ಮೆಹಬೂಬ್ ಪಾಷ, ಉಬೇದುಲ್ಲಾ, ಜೀಯಾಉಲ್ಲಾ, ಆಡಿಟರ್ ಸುಲ್ತಾನ್, ಎ.ಒನ್ ಶಹವಾಜ್ ಸೇರಿದಂತೆ ಖುರೇಷಿ ಅಸೋಸಿಯೇಷನ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Qureshi Association Launched in Tumakuru to Safeguard Rights of Goat and Sheep Meat Traders

Share this post

About the author

Leave a Reply

Your email address will not be published. Required fields are marked *