ತುಮಕೂರು:ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಅಮಾನುಷ ಹತ್ಯೆ ಖಂಡಿಸಿ ಶ್ರೀದಿಗಂಬರ ಜೈನ ಶ್ರೀಪಾಶ್ರ್ವನಾಥಸ್ವಾಮಿ ಜೀನ ಮಂದಿರ(ರಿ),ತುಮಕೂರು ಜಿಲ್ಲಾ ಜೈನ ಒಕ್ಕೂಟ ಹಾಗೂ ಜೈನ ಸಮುದಾಯದ ವತಿಯಿಂದ ನಗರದಲ್ಲಿಂದು ಮೌನ ಪ್ರತಿಭಟನೆ ನಡೆಸಿ, ಕೊಲೆಗಡುಕರನ್ನು ಬಂಧಿಸುವಂತೆ ಒತ್ತಾಯಿಸಿದ ಮನವಿಯನ್ನು ಸಲ್ಲಿಸಲಾಯಿತು.
ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಮಹಾವೀರ ಭವನದ ಮುಂಭಾಗದಲ್ಲಿ ಜಮಾಯಿಸಿದ ಜೈನ ಸಮುದಾಯದ ನರಸಿಂಹರಾಜಪುರದ ಶ್ರೀಲಕ್ಷ್ಮಿಸೇನ ಭಟ್ಟಾಕರಸ್ವಾಮಿಗಳ ನೇತೃತ್ವದಲ್ಲಿ ನಗರದ ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರಗೆ ಮೌನ ಮೆರವಣಿಗೆ ನಡೆಸಿ,ಶ್ರೀಕಾಮಕುಮಾರ ನಂದಿ ಸ್ವಾಮೀಜಿಗಳ ಹತ್ಯೆಯನ್ನು ಖಂಡಿಸಿ, ಕೂಡಲೇ ಕೊಲೆ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾವೇಶಗೊಂಡ ಜೈನ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ನರಸಿಂಹರಾಜಪುರದ ಶ್ರೀಲಕ್ಷ್ಮಿಸೇನ ಭಟ್ಟಾಕರ ಸ್ವಾಮಿಗಳು,ಅತ್ಯಂತ ಅಹಿಂಸಾತ್ಮಕ ರೀತಿಯಲ್ಲಿ ಮುನಿಶ್ರೀಗಳ ಶರೀರವನ್ನು ವಿಕೃತಗೊಳಿಸಿ ಕೊಲೆ ಮಾಡಿರುವುದು ಅತ್ಯಂತ ಹೇಯ ಕೃತ್ಯ. ಇಂತಹ ಕೃತ್ಯವನ್ನು ಜೈನ ಸಮಾಜ ಹಾಗೂ ಜೈನಮಠಗಳು ತೀವ್ರವಾಗಿ ಖಂಡಿಸುತ್ತವೆ.ಇಡೀ ಮನುಕುಲವೇ ತಲೆತಗ್ಗಿಸುವ ವಿಚಾರವಾಗಿದೆ.
ಸರ್ವಜನಾಂಗದ ಶಾಂತಿಯ ತೋಟಕ್ಕೆ ಕಪ್ಪುಚುಕ್ಕೆಯಾಗಿದೆ.ಇಂದು ಜೈನಮುಖಿಗಳಿಗೆ ಆಗಿರುವ ಕೆಲಸ, ಬೇರೆ ಸಮುದಾಯದ ಸ್ವಾಮೀಜಿಗಳಿಗೂ ಆಗಬಹುದು.ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹಂತಕರನ್ನು ಬಂಧಿಸಿ,ಕಾನೂನಾತ್ಮಕ ವಾದಂತಹ ಕಾರ್ಯಾಚರಣೆ ಮುಂದುವರೆಸಿರುವುದು ಸ್ವಾಗತಾರ್ಹ.ಆದರೆ ಹಂತಕರಿಗೆ ಅತ್ಯಧಿಕ ಶಿಕ್ಷೆಯನ್ನು ವಿಧಿಸಲೇಬೇಕು. ಹಂತಕರಿಗೆ ಯಾವುದೇ ರೀತಿಯ ಕರುಣೆ ತೋರಬಾರದು ಎಂದು ಸರಕಾರವನ್ನು ಆಗ್ರಹಿಸಿದರು.ಶ್ರೀ ದಿಗಂಬರ ಜೈನ ಶ್ರೀಪಾಶ್ರ್ವನಾಥಸ್ವಾಮಿ ಜಿನ ಮಂದಿರ ಅಧ್ಯಕ್ಷ ಎಸ್.ಜೆ.ನಾಗರಾಜು ಮಾತನಾಡಿ,ಜೈನ ಸಮುದಾಯಕ್ಕೆ ಕರಾಳದಿನ.
ಇಂದೊಂದು ಎಚ್ಚರಿಕೆ ಗಂಟೆ.ಮುಂಬರುವ ದಿನಗಳಲ್ಲಿ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದಂತಹ ಜೈನ ಧರ್ಮದ ಸಾಧು-ಸಂತರಿಗೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜತೆಗೆ ಜೈನ ಸಮಾಜಕ್ಕೆ ಸೂಕ್ತ ನ್ಯಾಯ,ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದ ಅವರು, ವಕೀಲರು ಆರೋಪಿಗಳಿಗೆ ಬೆಲ್ ವಕಾಲತ್ತು ಹಾಕಬಾರದೆಂದು ಮನವಿ ಮಾಡಿದರು.
ಮೌನ ಪ್ರತಿಭಟನಾ ಮೆರವಣಿಗೆಯ ವೇಳೆ ಆಗಮಿಸಿ,ಬೆಂಬಲ ಸೂಚಿಸಿದ ಮಾತನಾಡಿದ ಶಾಸಕ ಜೋತಿಗಣೇಶ್,ಆಲಿಸಿ, ಜೈನ ಮುನಿಗಳ ಭಯಾನಕ ಹತ್ಯೆ ಖಂಡನೀಯ.ಇದು ಕೃತ್ಯ ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು.ಮುನಿಶ್ರೀಗಳನ್ನು ಕೊಲೆಗೈದಿರುವ ಆರೋಪಿಗಳಿಗೆ ಯಾವುದೇ ದಯಾ ದಾಕ್ಷಿಣ್ಯ ತೋರಿಸದೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು.
ಈ ನಿಟ್ಟಿನಲ್ಲಿ ಇಂದು ಸದನದಲ್ಲಿ ಪ್ರಾಸ್ತಾಪಿಸುವುದಾಗಿ ಭರವಸೆ ನೀಡಿದರು.ಸಂಸದ ಜಿ.ಎಸ್.ಬಸವರಾಜು ಮಾತನಾಡಿ,ಜೈನಮುನಿಗಳ ಹತ್ಯೆಯನ್ನು ಇಡೀ ದೇಶವೇ ಖಂಡಿಸಿದೆ.ಅತ್ಯಂತ ಕ್ರೂರ ರೀತಿಯಲ್ಲಿ ಕೊಲೆ ಮಾಡಿರುವ ಪ್ರಕರಣವನ್ನು ಸರಕಾರ ಸಿಬಿಐ ತನಿಖೆಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ,ಇಡೀ ಘಟನೆಯನ್ನು ಅವಲೋಕಿಸಿದರೆ ನಿಜಕ್ಕೂ ಆತಂಕಕಾರಿಯಾಗಿದೆ.
ಒಬ್ಬರು ಬದುಕಲು ಇನ್ನೊಬ್ಬರ ಕೊಲ್ಲುವುದು ಮಹಾಪರಾಧ.ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಸಮಾಜವನ್ನು ತಿದ್ದುವ ಕೆಲಸ ಆಗಬೇಕು ಎಂದರು.ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಸ್ಪೂರ್ತಿ ಚಿದಾನಂದ ಮಾತನಾಡಿ,ಜೈನಮುನಿ ಶ್ರೀಕಾಮಕುಮಾರ ನಂದಿ ಸ್ವಾಮೀಜಿಗಳ ಹತ್ಯೆ ಖಂಡನೀಯ. ಸಮುದಾಯದ ಎಲ್ಲಾ ರೀತಿಯ ಹೋರಾಟಕ್ಕೂ ನಮ್ಮ ಬೆಂಬಲವಿದೆ.
ನ್ಯಾಯ ಸಿಗುವವರೆಗೂ ಅವರೊಂದಿಗೆ ಹೊರಾಟದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು. ಈ ಸಂಬಂಧ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ, ಸಂಸದ ಜಿ.ಎಸ್.ಬಸವರಾಜು,ಮಾಜಿ ಸಚಿವ ಸೊಗಡು ಶಿವಣ್ಣ,ಜೈನ ಸಮುದಾಯದ ಬಾಹುಬಲಿ ಬಾಬು, ಜಿನೇಶ್,ಬಾಹುಬಲಿ ಎಂ.ಎ.,ಚಂದ್ರಕೀರ್ತಿ,ನಾಗೇಂದ್ರ,ಆರ್.ಎ.ಸುರೇಶ್‍ಕುಮಾರ್,ನಾಗರಾಜು ಟಿ.ಜೆ.,ಸುಭೋದ್ ಕುಮಾರ್,ಪದ್ಮಪ್ರಸಾದ್, ಜೈನ್ ಮಿಲನ್, ಜೈನ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.