ತುಮಕೂರು:ಮನುಷ್ಯ ಹುಟ್ಟುವಾಗಲೇ ಆರೋಗ್ಯ ಮತ್ತು ಆಯುಷ್ ಎರಡನ್ನು ಪಡೆದಿರುತ್ತಾನೆ. ಆದರೆ ನಮ್ಮ ಜೀವನಶೈಲಿಯ ಫಲವಾಗಿ ಇಂದು ಆರೋಗ್ಯವನ್ನು ವೈದ್ಯರ ಕೈಗೆ,ಆಯುಷ್‍ನ್ನು ದೇವರ ಕೈಗೆ ನೀಡಿ,ಇತಿ, ಮಿತಿಯಿಲ್ಲದ ನಡೆವಳಿಕೆಯಿಂದ ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತಿದ್ದೇವೆ ಎಂದು ಹಿರೇಮಠದ ಡಾ.ಶ್ರೀಶಿವಾನಂದ ಶಿವಾಚಾರ್ಯ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಚಿಕ್ಕಪೇಟೆಯ ಜೈನ ದೇವಾಲಯದ ರಸ್ತೆಯಲ್ಲಿರುವ ಅತಿಮಬ್ಬೆ ವಿದ್ಯಾಮಂದಿರದಲ್ಲಿ ಜಯಕರ್ನಾಟಕ ಜನಪರ ವೇದಿಕೆ,ಡಾ.ಶ್ರೀಶ್ರೀಶಿವಕುಮಾರಸ್ವಾಮೀಜಿಗಳು ಹಾಗೂ ಧಾರ್ಮಿಕ ಗುರುಗಳಾದ ಅಲ್-ಹಾಜ್ ಹಾಫೀಜ್-ಓ-ಖಾರಿ ಮೊಹಮದ್ ಆಜ್ಹ ಶಾ ಖಾದ್ರಿ ಅವರುಗಳ ಸ್ಮರಣಾರ್ಥ,ಟಿ.ಹೆಚ್‍ಎಸ್ ಆಸ್ಪತ್ರೆ,ಟಿಹೆಚ್‍ಎಸ್ ಡ್ಯಾಯಾಗ್ನಾಸ್ಟಿಕ್ ಸೆಂಟರ್ ಹಾಗೂ ನೇತ್ರದೀಪ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಬೃಹತ್ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಅತಿಯಾದ ವ್ಯಸನದಿಂದ ಯೌವನದಲ್ಲಿಯೇ ವೃದ್ಧಾಪ್ಯವನ್ನು ತಂದುಕೊಳ್ಳುತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಇಂದು ಎಲ್ಲರೂ ದೇವರ ಮುಂದೆ ಐಶ್ಚರ್ಯಕ್ಕಿಂತ ಆರೋಗ್ಯಕ್ಕೆ ಹೆಚ್ಚಿನ ಬೇಡಿಕೆ ಇಡುತ್ತಿದ್ದಾರೆ.ಪರಾವಲಂಬಿಯಾಗಿ ಬದುಕುವುದಕ್ಕಿಂತ ಮೊದಲೇ ನಮಗೆ ಸಾವು ಬರಲಿ ಎಂಬ ಕೋರಿಕೆಗಳು ಹೆಚ್ಚಾಗಿವೆ.ಇದಾಗಬಾರದು ಎಂಬ ಮನಸ್ಸು ನಮ್ಮಲ್ಲಿದ್ದರೆ ಮೊದಲು ಮಾಡಬೇಕಾಗಿರುವುದು ಮಾನವೀಯ ಗುಣ ಮತ್ತು ಪರೋಪಕಾರವನ್ನು ನಾವೆಲ್ಲರೂ ಬೆಳೆಸಿಕೊಳ್ಳ ಬೇಕಿದೆ.ಇಂದು ಅತಿ ಚಿಕ್ಕ ವಯಸ್ಸಿನ ಯುವಕರು ಇಂತಹದೊಂದು ಮಾನವೀಯ ಕಾರ್ಯ ಮಾಡುತ್ತಿರು ವುದನ್ನು ನೋಡಿದರೆ,ಇವರಿಗೆ ಒಳ್ಳೆಯ ಭವಿಷ್ಯವಿದೆ ಎಂದು ಹೇಳಬಹುದು.ಈಗಾಗಲೇ ಬಿ.ಪಿ.,ಶುಗರ್‍ನಂತಹ ರೋಗಕ್ಕೆ ತುತ್ತಾದವರು ವೈದ್ಯರ ಸಲಹೆಯಂತೆ ನಡೆದುಕೊಳ್ಳಿ,ರೋಗಕ್ಕೆ ತುತ್ತಾಗದಿರುವವರು ಅದು ಬಾರದಂತೆ ಎಚ್ಚರಿಕೆ ವಹಿಸಿ ಎಂದು ಡಾ.ಶ್ರೀಶಿವಾನಂದಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,ನಮ್ಮ ಅತಿಯಾದ ಒತ್ತಡದ ಜೀವನ ಶೈಲಿಯಿಂದ ಬಹುಬೇಗ ಮಾರಾಣಾಂತಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.ಹಾಗಾಗಿ ರೋಗವನ್ನು ಶೀಘ್ರವಾಗಿ ಪತ್ತೆ ಹಚ್ಚುವಂತಹ ಕೆಲಸಕ್ಕೆ ಇಂತಹ ಶಿಬಿರಗಳು ಸಹಕಾರಿಯಾಗಿವೆ.ಜನರು ಇಂತಹ ವೈದ್ಯಕೀಯ ಸೇವೆಯನ್ನು ಉಪಯೋಗಿಸಿಕೊಂಡು ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.
ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ,ಮನುಷ್ಯ ದಿನನಿತ್ಯದ ದೈಹಿಕ ಚಟುವಟಿಕೆಯಿಂದ ವಿಮುಖನಾಗಿರುವುದೇ ಇಂದು ರೋಗ,ರುಜಿನಗಳು ಹೆಚ್ಚಾಗಲು ಕಾರಣ.ಜೀವನ ಶೈಲಿಯನ್ನು ಬದಲಾವಣೆಗೆ ತಂದುಕೊಂಡರೆ, ಹೆಚ್ಚು ದಿನ ಆರೋಗ್ಯವಂತರಾಗಿ ಜೀವನದ ಜೊತೆಗೆ, ಸಧೃಢ ಭಾರತವನ್ನು ಕಟ್ಟಬಹುದು. ಈ ನಿಟ್ಟಿನಲ್ಲಿ ಯುವಜನತೆ ಯೋಚಿಸಬೇಕೆಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ್ ಹಾಲಪ್ಪ ಮಾತನಾಡಿ,ಮನುಷ್ಯನಿಗೆ ದೈಹಿಕ ಆರೋಗ್ಯದ ಜೊತೆಗೆ, ಮಾನಸಿಕ ಆರೋಗ್ಯವೂ ಮುಖ್ಯ. ನೋಡಲು ದೈಹಿಕವಾಗಿ ಚನ್ನಾಗಿ ಕಂಡರೂ,ಮಾನಸಿಕ ಆರೋಗ್ಯ ಕೆಳಮಟ್ಟದಲ್ಲಿ ರುತ್ತದೆ.ಸರಕಾರ ಜನರಿಗೆ ಆರೋಗ್ಯ ಸೇವೆ ಕೈಗೆಟುಕಬೇಕು ಎಂಬ ಮನೋಭಾವದಿಂದ ಆಭಾ ಕಾರ್ಡು ಜಾರಿಗೆ ತಂದಿದೆ. ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಅತಿಮಬ್ಬೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಜಲಜಜೈನ್,ಟಿ.ಹೆಚ್.ಎಸ್.ಅಸ್ಪತ್ರೆಯ ವೈದ್ಯರಾದ ಡಾ.ಸುರೇಶ್, ಪಿ.ಎಸ್.ಐ ಭಾರತಿ,ಕೌನ್ಸಿಲರ್ ಮಹೇಶ್‍ಬಾಬು,ನಟರಾಜಶೆಟ್ಟಿ,ಯುವ ಮುಖಂಡರಾದ ಜಿಮ್ ಜೆಪಿ(ಜಯಪ್ರಕಾಶ್) ಶ್ರೀಧರ್.ಟಿ.ಎಂ.,ಮೊಹಮದ್ ಯುನುಸ್,ಕಿರಣ್ ಕೀರ್ತಿ.ಎ,ಜುನೇದ್ ಪಾಷ,ಸಿಂಧ್ಯ,ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
ಟಿ.ಹೆಚ್.ಎಸ್.ಆಸ್ಪತ್ರೆಯ ನುರಿತ ವೈದ್ಯರ ತಂಡ ರೋಗಿಗಳನ್ನು ಪರೀಕ್ಷಿಸಿ,ಸೂಕ್ತ ಸಲಹೆ,ಸೂಚನೆಯೊಂದಿಗೆ ಔಷಧಿ ವಿತರಿಸಿದರು.