breaking news

SIR Process: ಮತಗಟ್ಟೆ ಏಜೆಂಟರನ್ನು ಚುರುಕುಗೊಳಿಸಲು ರಾಜಕೀಯ ಪಕ್ಷಗಳಿಗೆ ಜಿಲ್ಲಾಧಿಕಾರಿ ಕರೆ

SIR Process: ಮತಗಟ್ಟೆ ಏಜೆಂಟರನ್ನು ಚುರುಕುಗೊಳಿಸಲು ರಾಜಕೀಯ ಪಕ್ಷಗಳಿಗೆ ಜಿಲ್ಲಾಧಿಕಾರಿ ಕರೆ

ತುಮಕೂರು (ಕ.ವಾ.) ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ-2026 ಪ್ರಕ್ರಿಯೆ ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ಶೇ.100ರಷ್ಟು ಶುದ್ಧ ಮತದಾರರ ಪಟ್ಟಿಗಾಗಿ ರಾಜಕೀಯ ಪಕ್ಷಗಳು ತಮ್ಮ ಮತಗಟ್ಟೆ ಏಜೆಂಟರನ್ನು ಮತ್ತಷ್ಟು ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ಸಂಬಂಧಿಸಿದಂತೆ ನೋಂದಾಯಿತ ರಾಜಕೀಯ ಪಕ್ಷಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿದೆ. ಪ್ರಸ್ತುತ ಪರಿಷ್ಕರಿಸಿದ ಮತದಾರರ ಪಟ್ಟಿ ಪರಿಪಕ್ವವಾಗಲು ರಾಜಕೀಯ ಪಕ್ಷಗಳು ತಮ್ಮ ಮತಗಟ್ಟೆ ಏಜೆಂಟರನ್ನು ಮತ್ತಷ್ಟು ಚುರುಕುಗೊಳಿಸಿ ಮತಗಟ್ಟೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಬೇಕು ಎಂದು ತಿಳಿಸಿದರು.

2025ರ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 22 ಲಕ್ಷ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಇಂದಿನ ಮಾಹಿತಿಯಂತೆ ಜಿಲ್ಲೆಯಲ್ಲಿ ಶೇ.77.18ರಷ್ಟು ಗಣಕೀಕರಣಗೊಳಿಸಲಾಗಿದೆ. ಆಗಸ್ಟ್ 8ರವರೆಗೆ ಕಾಲಾವಕಾಶ ವಿಸ್ತರಿಸಲಾಗಿರುವುದರಿಂದ ರಾಜಕೀಯ ಪಕ್ಷಗಳು ತಮ್ಮ ಏಜೆಂಟರಿಗೆ ತಿಳಿಸಿ, ಪ್ರಸ್ತುತ ಮತಗಟ್ಟೆ ಅಧಿಕಾರಿಗಳು ಗಣತಿ ನಮೂನೆಗಳನ್ನು ಹಿಂಪಡೆದು ಗಣಕೀಕರಣಗೊಳಿಸಿರುವ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.

ಪ್ರಸ್ತುತ ಮಾಹಿತಿಯಂತೆ ಜಿಲ್ಲೆಯ ಮತದಾರರ ಪಟ್ಟಿಯಲ್ಲಿನ 24,562 ಮತದಾರರು ಮೃತಪಟ್ಟಿರುವ ಬಗ್ಗೆ, 7,768 ಮತದಾರರು ಲಭ್ಯವಿಲ್ಲದಿರುವ ಬಗ್ಗೆ ಹಾಗೂ 35,558 ಮತದಾರರು ಶಾಶ್ವತವಾಗಿ ಸ್ಥಳಾಂತರಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದಲ್ಲದೆ ಶೇ.19.61ರಷ್ಟು ಮತದಾರರು ಗಣತಿ ನಮೂನೆಯನ್ನು ಪಡೆದು ಹಿಂತಿರುಗಿಸಿಲ್ಲ. ಈ ಮಾಹಿತಿ ಸರಿಯಾಗಿರುವ ಬಗ್ಗೆ ರಾಜಕೀಯ ಪಕ್ಷಗಳು ತಮ್ಮ ಏಜೆಂಟರ ಮೂಲಕ ಖಾತ್ರಿಪಡಿಸಿಕೊಳ್ಳಬೇಕು.

ಒಮ್ಮೆ ಗಣತಿ ನಮೂನೆ ಹಿಂತಿರುಗಿಸದ ಮತದಾರರು ಅಲಭ್ಯ ಎಂಬ ಬಗ್ಗೆ ಹಾಗೂ ಯಾವ ಕಾರಣಕ್ಕೆ ಲಭ್ಯವಿಲ್ಲ ಎಂಬುದನ್ನು ಮತಗಟ್ಟೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ದೃಢಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರಾಜಕೀಯ ಪಕ್ಷಗಳಿಗೆ ತಿಳಿಸಿದರು.

ಪ್ರಸ್ತುತ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿದ್ದು, ವಾರದೊಳಗೆ ಶೇ.88ರಷ್ಟು ಗಣಕೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.

ಮತದಾರರ ಪಟ್ಟಿ ಅಂತಿಮ ಪ್ರಕಟವಾದ ನಂತರ ಮತದಾರರನ್ನು ಕೈಬಿಡಲಾಗಿದೆ ಎಂಬ ಆಕ್ಷೇಪಗಳು ಬರಬಾರದು. ಮತದಾರರ ಪಟ್ಟಿಯೇ ಚುನಾವಣೆಯ ಅಂತಿಮ ಆಧಾರವಾಗಿರುವುದರಿಂದ ಸಮರ್ಪಕ ಮತದಾರರ ಪಟ್ಟಿ ರೂಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದ ರಾಜಕೀಯ ಪಕ್ಷಗಳು ಹಾಗೂ ಮತದಾರರು ತಪ್ಪು ಮಾಹಿತಿ ನೀಡದೆ ಸಹಕರಿಸುವಂತೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪಾರದರ್ಶಕವಾಗಿರುವ ಉದ್ದೇಶದಿಂದ ರಾಜಕೀಯ ಪಕ್ಷಗಳು ಪ್ರಕ್ರಿಯೆಯ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಈ ಮೂಲಕ ಮತದಾರರ ಪಟ್ಟಿಯಲ್ಲಿ ಯಾವುದೇ ಅರ್ಹ ಮತದಾರರು ಹೊರಗುಳಿಯದಂತೆ ಸಹಕರಿಸಬೇಕು ಎಂದು ತಿಳಿಸಿದರು.

ಪ್ರಸ್ತುತ ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಗಣತಿ ನಮೂನೆ ವಿತರಿಸುವ ಹಾಗೂ ಹಿಂಪಡೆಯುವ ಮನೆ-ಮನೆ ಭೇಟಿ ಕಾರ್ಯವನ್ನು ಆಗಸ್ಟ್ 8ರವರೆಗೆ ವಿಸ್ತರಿಸಲಾಗಿದೆ. ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ನಂತರ ಅಕ್ಟೋಬರ್ 19ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ಗುರಿ ಹೊಂದಿದ್ದು, ಈ ನಡುವೆ ಎರಡು ತಿಂಗಳ ಅವಧಿಯನ್ನು ಆಕ್ಷೇಪಣೆಗಳನ್ನು ಸರಿಪಡಿಸಲು ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಯಾವುದೇ ಗೊಂದಲಗಳಿದ್ದರೆ ನಿವಾರಿಸಿಕೊಳ್ಳಬೇಕು ಎಂದು ತಿಳಿಸಿದರು. ಸಭೆಯಲ್ಲಿ ನೋಂದಾಯಿತ ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರು ಭಾಗವಹಿಸಿದ್ದರು.

SIR Process: DC Urges Political Parties to Activate Booth Agents for Effective Voter List Revision

Share this post

About the author

Leave a Reply

Your email address will not be published. Required fields are marked *