ತುಮಕೂರು: ಕರ್ನಾಟಕದ ಗೌರವಾನ್ವಿತ
ಲೋಕಾಯುಕ್ತ ಬಿ.ಎಸ್. ಪಾಟೀಲ್ ಅವರು ಜಿಲ್ಲಾಸ್ಪತ್ರೆಯಲ್ಲಿರುವ
ಅಪಘಾತ ತುರ್ತು ಚಿಕಿತ್ಸಾ ಕೇಂದ್ರ, ಡಯಾಲಿಸಿಸ್ ಘಟಕ, ಹೆರಿಗೆ ವಾರ್ಡ್,
ಮಕ್ಕಳ ವಾರ್ಡ್, ತೀವ್ರ ನಿಗಾ ಘಟಕ ಸೇರಿದಂತೆ ವಿವಿಧ ವಾರ್ಡ್ಗಳಿಗೆ
ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾ ಅಪಘಾತ ತುರ್ತು ಚಿಕಿತ್ಸಾ ಕೇಂದ್ರಕ್ಕೆ ಇಂದು ಭೇಟಿ ನೀಡಿದ
ಅವರು, ಅಂಗವಿಕಲರ ಶೌಚಾಲಯದಲ್ಲಿ ಸ್ವಚ್ಛತೆ
ಇಲ್ಲದಿರುವುದನ್ನು ಕಂಡು ಆಸ್ಪತ್ರೆಯ ಸಿಬ್ಬಂದಿಯನ್ನು
ತರಾಟೆಗೆ ತೆಗೆದುಕೊಂಡರು. ರೋಗಿಗಳಿಗೆ ಎಲ್ಲಾ
ಔಷಧಿಗಳನ್ನೂ ಉಚಿತವಾಗಿ ಆಸ್ಪತ್ರೆಯಲ್ಲೇ ವಿತರಿಸುತ್ತಿರುವ
ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು.
ನಂತರ ಮುಖ್ಯ ಔಷಧಿ
ಉಗ್ರಾಣಕ್ಕೆ ಭೇಟಿ ನೀಡಿದ ಅವರು, ಔಷಧಿ ಸಂರಕ್ಷಣೆ, ವಿತರಣೆಗೆ
ಸಂಬಂಧಿಸಿದಂತೆ ನೋಂದಣಿ ಪುಸ್ತಕಗಳನ್ನು ಪರಿಶೀಲಿಸಿದರು.
ಹಾವು ಕಡಿತಕ್ಕೆ ಒಳಗಾದವರಿಗೆ ನೀಡುವ ಔಷಧಿ ಸಂಗ್ರಹಣೆ
ಬಗ್ಗೆ ಮಾಹಿತಿ ಪಡೆದ ಅವರು, ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ
ಕೇಂದ್ರಗಳಲ್ಲೂ ಔಷಧಿ ಸಂಗ್ರಹ ಮಾಡಬೇಕು ಎಂದು
ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ
ಔಷಧಿಗಳನ್ನು ಹೊರಗಡೆಯಿಂದ ತರಲು ಸೂಚಿಸಬಾರದು.
ಒಂದು ವೇಳೆ ಔಷಧಿಗಳನ್ನು ಹೊರಗಡೆಯಿಂದ ತರಿಸುವ
ಪ್ರಕರಣಗಳು ಕಂಡು ಬಂದಲ್ಲಿ ಅಂತಹವರ ವಿರುದ್ಧ ಸೂಕ್ತ
ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹೆರಿಗೆ ವಾರ್ಡ್, ಮಕ್ಕಳ ವಾರ್ಡ್, ತೀವ್ರ ನಿಗಾ ಘಟಕ ಸೇರಿದಂತೆ
ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ರೋಗಿಗಳ ವಿವರ, ಔಷಧಿ ವಿತರಣೆ,
ಹಾಜರಾತಿ ವಹಿಗಳ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಆವರಣ,
ಶೌಚಾಲಯಗಳು ಮತ್ತು ವಾರ್ಡ್ಗಳಲ್ಲಿ ಸ್ವಚ್ಛತೆ
ಇಲ್ಲದಿರುವುದನ್ನು ಕಂಡ ಅವರು ಸ್ವಚ್ಛತೆ ನಿರ್ವಹಣೆಗಾಗಿ ಸರ್ಕಾರಿ
ಆಸ್ಪತ್ರೆಗಳಿಗೆ ಅನುದಾನ ನೀಡುತ್ತಿದ್ದು, ಆಸ್ಪತ್ರೆಗಳಲ್ಲಿ
ಮುಖ್ಯವಾಗಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು
ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಆರೋಗ್ಯ ಮತ್ತು
ಕುಟುಂಬ ಕಲ್ಯಾಣಾಧಿಕಾರಿ ಡಾ: ಚಂದ್ರಶೇಖರ್, ಜಿಲ್ಲಾ ಶಸ್ತ್ರ ಚಿಕಿತ್ಸಕ
ಅಜ್ಗರ್ ಬೇಗ್, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಹೆಚ್ಚುವರಿ ಪೊಲೀಸ್
ವರಿಷ್ಠಾಧಿಕಾರಿ ಮರಿಯಪ್ಪ, ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ,
ತಹಶೀಲ್ದಾರ್ ಸಿದ್ದೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.