ತುಮಕೂರು: ಬೆಳಗಾವಿಯ ಬಾಳೆಕುಂದ್ರಿಯಲ್ಲಿ ಕೆಎಸ್‌ಆರ್‌ಟಿಸಿಯ ಚಾಲಕ, ನಿರ್ವಾಹರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಖಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯದ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸೇನೆಯ ಮುಖಂಡರು ಮಂಗಳವಾರ ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ
ಶುಭಾ ಕಲ್ಯಾಣ್ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು. ಅಖಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯದ ರಾಜ್ಯ
ಗೌರವಾಧ್ಯಕ್ಷ ಪಿ.ಮಹೇಶ್ ಮಾತನಾಡಿ, ಬೆಳಗಾವಿ ಹಾಗೂ ಗಡಿ ಭಾಗದಲ್ಲಿ ಕನ್ನಡಿಗರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು
ಹೆಚ್ಚಾಗುತ್ತಿವೆ. ಸರ್ಕಾರ ಎಚ್ಚೆತ್ತುಕೊಂಡು ಕನ್ನಡಿಗರ ಮೇಲೆ ಪುಂಡಾಟಿಕೆ ಮಾಡುವವರನ್ನು ಮಟ್ಟ ಹಾಕಬೇಕು.
ಇಂತಹ ಕೃತ್ಯಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕರು ಟಿಕೆಟ್ ವಿತರಿಸುವ ವೇಳೆ ಪುಂಡರು ಮರಾಠಿ ಭಾಷೆ ಮಾತನಾಡಲು ಒತ್ತಾಯಿಸಿ ಅನಗತ್ಯ ಕಿರಿಕಿರಿ ಮಾಡಿ ಬಸ್ಸಿನ ಚಾಲಕ, ನಿರ್ವಾಹಕರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಕನ್ನಡಿಗರ ಸ್ವಾಭಿಮಾನ ಕೆರಳಿಸುವಂತಹ ಕಿಡಿಗೇಡಿಗಳಿಗೆ
ಕರ್ನಾಟಕ ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳಬೇಕು. ಕೆಎಸ್‌ಆರ್‌ಟಿಸಿ ಬಸ್‌ಗಳು, ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಸೂಕ್ತ
ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು. ಯುವ ಸೈನ್ಯದ ರಾಜ್ಯಾಧ್ಯಕ್ಷ ನಗುತಾ ರಂಗನಾಥ್ ಮಾತನಾಡಿ, ಕನ್ನಡಿಗರ ಮೇಲಿನ ದೌರ್ಜನ್ಯ ತಡೆಯಬೇಕು, ಕನ್ನಡಿಗರ ತಾಳ್ಮೆ ಕೆಣಕುತ್ತಿರುವವರಿಗೆ ಪುಂಡರಿಗೆ ಸರ್ಕಾರ ತಕ್ಕ ಪಾಠ ಕಲಿಸಬೇಕು. ಕೆಎಸ್‌ಆರ್‌ಟಿಸಿ ಬಸ್ ಚಾಲಕ, ನಿರ್ವಾಹಕರ ಮೇಲೆ ಹಲ್ಲೆ ನಡೆಸಿರುವ ಹಲ್ಲೆ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಹಲ್ಲೆಕೋರರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು,

ಕನ್ನಡ ವಿರೋಧಿಗಳಿಗೆ ಎಚ್ಚರಿಕೆಯ ಪಾಠ ಕಲಿಸಬೇಕು. ತಪ್ಪಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು
ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಅಧ್ಯಕ್ಷ ಸಿ.ಆದೇಶ್, ಜಿಲ್ಲಾ ಗೌರವಾಧ್ಯಕ್ಷ ಗೋವಿಂದರಾಜ್,
ಉಪಾಧ್ಯಕ್ಷ ಜಬೀಉಲ್ಲಾ ಹಾಗೂ ಪದಾಧಿಕಾರಿಗಳು ಹಾಜರಿದ್ದರು.