ತುಮಕೂರು: ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷತೆ, ಸಂಬಂಧಿಸಿದ
ಇಲಾಖೆ ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ
ಕುಶಲಕರ್ಮಿಗಳ ಕಸುಬು ಪ್ರೋತ್ಸಾಹಿಸಿ, ಆವರನ್ನು ಆರ್ಥಿಕ
ಸ್ವಾವಲಂಬಿಗಳನ್ನಾಗಿ ಮಾಡುವ ಕೇಂದ್ರ ಸರ್ಕಾರದ
ಮಹತ್ವಾಕಾಂಕ್ಷೆ ಯೋಜನೆಯಾದ ಪ್ರಧಾನ ಮಂತ್ರಿ
ವಿಶ್ವಕರ್ಮ ಯೋಜನೆಯ ಆಶಯ ಹಳ್ಳ ಹಿಡಿಯುತ್ತಿದೆ ಎಂದು
ನಗರ ಬಿಜೆಪಿ ಅಧ್ಯಕ್ಷ ಟಿ.ಹೆಚ್.ಹನುಮಂತರಾಜು ಆರೋಪಿಸಿದ್ದಾರೆ.
ವಿವಿಧ ೧೮ ಕುಲಕಸುಬುದಾರಿಕೆಗಳನ್ನು ಪ್ರೋತ್ಸಾಹಿಸಿ ಉಳಿಸಲು,
ಆಸಕ್ತರಿಗೆ ಈ ಕುಸುಬುಗಳ ಬಗ್ಗೆ ತರಬೇತಿ ನೀಡಿ, ಅವರಿಗೆ ಅಗತ್ಯ
ಪರಿಕರ ನೀಡಿ, ಕಸುಬು ಆರಂಭಿಸಲು ಒಂದು ಲಕ್ಷ ರೂ.ಗಳ ಸಾಲ
ಸೌಲಭ್ಯ ನೀಡುವ ಈ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು
ಗುರುತಿಸಿ ಅವರಿಗೆ ಯೋಜನೆಯ ಸೌಲಭ್ಯ ದೊರಕಿಸುವ
ಪ್ರಯತ್ನ ಬ್ಯಾಂಕ್ ಅಧಿಕಾರಿಗಳು ಹಾಗೂ ಸಂಬಂಧಿಸಿದ
ಇಲಾಖೆಗಳ ಹಂತಗಳಲ್ಲಿ ವಿಳಂಬವಾಗುತ್ತಿದೆ. ಯೋಜನೆ
ಆಶಯ ಸಫಲವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಸಿ.ಎಸ್.ಸಿ. ಕೇಂದ್ರದ ಮೂಲಕ
ತುಮಕೂರು ನಗರ ವ್ಯಾಪ್ತಿಯ ೩೨೩೦೦ ಹಾಗೂ ಜಿಲ್ಲೆಯ
ಗ್ರಾಮಾಂತರ ಭಾಗದ ೧೪೩೨೫೭ ಕುಶಲಕರ್ಮಿಗಳು
ಯೋಜನೆಯ ಫಲ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ
ಜಿಲ್ಲೆಯ ೧೯೭೯೫ ಕುಶಲಕರ್ಮಿಗಳಿಗೆ ವಿಶ್ವಕರ್ಮ ಗುರುತಿನ
ಚೀಟಿ ಹಾಗೂ ಪ್ರಮಾಣ ಪತ್ರ ಪಡೆದಕೊಂಡಿದ್ದಾರೆ. ಆದರೆ
ಇವರೆಲ್ಲರಿಗೂ ಯೋಜನೆಯ ಪ್ರಯೋಜನ ದೊರಕಿಲ್ಲ ಎಂದು
ತಿಳಿಸಿದ್ದಾರೆ.
ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯ ಒಟ್ಟು ೮೭೯೬
ಕುಶಲಕರ್ಮಿಗಳು ತರಬೇತಿ ಪೋರ್ಟಲ್‌ನಲ್ಲಿ ನೋಂದಾವಣೆ
ಮಾಡಿಕೊಂಡಿದ್ದು ಈ ಪೈಕಿ ೪೨೪೮ ಕುಶಲಕರ್ಮಿಗಳು ಆಗಸ್ಟ್
ಅಂತ್ಯದ ವೇಳೆಗೆ ತರಬೇತಿ ಪಡೆದಿದ್ದು, ಈ ಸಂಬಂಧ ಶಿಷ್ಯ
ವೇತನ, ಇ.ಯು.ಪಿ.ಐ. ವೋಚರ್ ಪಡೆದುಕೊಂಡು
ಉಪಕರಣಗಳನ್ನು ಪಡೆದಿದ್ದಾರೆ. ಆದರೆ, ವಿಶ್ವಕರ್ಮ
ಯೋಜನೆಯಡಿ ಜಿಲ್ಲೆಯ ೫೮೭ ಕುಶಲಕರ್ಮಿಗಳು ಮಾತ್ರ ಒಟ್ಟು
ರೂ. ೫,೮೪,೫೦,೦೦೦ ಸಾಲ ಮಂಜೂರಾತಿ ಪಡೆದಿದ್ದು, ಜುಲೈ ಅಂತ್ಯಕ್ಕೆ
೧೯೯ ಫಲಾನುಭವಿಗಳ ಖಾತೆಗೆ ರೂ. ೧,೭೯,೫೦,೦೦೦ ಸಾಲ
ಬಿಡುಗಡೆಯಾಗಿರುತ್ತದೆ. ಎಂದು ಹೇಳಿದ್ದಾರೆ.
ಆದರೆ ಪಿ.ಎಂ. ವಿಶ್ವಕರ್ಮ ಯೋಜನೆಯ ಆಶಯಗಳಿಗೆ
ಪೂರಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ
ಯೋಜನೆಯ ಸೌಲಭ್ಯ ದೊರಕಿಸುವ ವಿಚಾರದಲ್ಲಿ ಜಿಲ್ಲೆಯಲ್ಲಿ
ನಿರಾಶದಾಯಕವಾದ ಪ್ರಗತಿಯಾಗಿದೆ.
ಫಲಾನುಭವಿಗಳಿಗೆ
ಸಂಬಂಧಿಸಿದ ಬ್ಯಾಂಕ್ ಹಾಗೂ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ
ಮಾಹಿತಿ, ಮಾರ್ಗದರ್ಶನ ನೀಡದೆ, ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ಈ
ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ
ತೆಗೆದುಕೊಂಡು ಕುಶಲಕರ್ಮಿ ಫಲಾನುಭವಿಗಳಿಗೆ
ನೆರವಾಗಬೇಕು ಎಂದು ಟಿ.ಹೆಚ್.ಹನುಮಂತರಾಜು ಆಗ್ರಹಿಸಿದ್ದಾರೆ.
ಪಿ.ಎಂ.ವಿಶ್ವಕರ್ಮ ಯೋಜನೆಯ ಪ್ರಗತಿಯಲ್ಲಿ ಕರ್ನಾಟಕವೇ
ದೇಶದಲ್ಲಿ ಮೊದಲು, ರಾಜ್ಯದಲ್ಲಿ ತುಮಕೂರು ಜಿಲ್ಲೆಯೇ
ಮೊದಲ ಸ್ಥಾನದಲ್ಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ, ಆದರೆ
ಈ ಯೋಜನೆಯ ಪ್ರಗತಿ ಜಿಲ್ಲೆಯಲ್ಲಿ ಶೇಕಡ ೧೦ರಷ್ಟೂ ಆಗಿಲ್ಲ.
ಮುಖ್ಯವಾಗಿ ಬ್ಯಾಂಕ್ ಅಧಿಕಾರಿಗಳು, ಜಿಲ್ಲಾ ಕೈಗಾರಿಕಾ ಕೇಂದ್ರ,
ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿಗಳು ಕಾಳಜಿವಹಿಸಿ, ಪ್ರಗತಿ ಸಾಧಿಸಿ
ಹೆಚ್ಚಿನ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕು
ಎಂದು ಒತ್ತಾಯಿಸಿದ್ದಾರೆ.
PM Vishvakarma Yojana is failing: Beneficiaries are not getting benefits due to negligence of bank officials