ತುಮಕೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು-2 ನಿರ್ಮಾಣ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ ರಾಜಧಾನಿ ಬೆಂಗಳೂರಿಗೆ ಪರ್ಯಾಯ ನಗರವಾಗಿ ಬೆಳೆಯುತ್ತಿರುವ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಮಾಡಿದರೆ ಕೈಗಾರಿಕೋದ್ಯಮಿಗಳು ಸೇರಿದಂತೆ ಉತ್ತರ ಕರ್ನಾಟಕದ ಭಾಗಗಳಿಗೂ ಅನುಕೂಲವಾಗಲಿದೆ. ಹಾಗಾಗಿ ತುಮಕೂರು ಜಿಲ್ಲೆಯಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಂಸದ ಜಿ.ಎಸ್. ಬಸವರಾಜು ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕನಕಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ವಿಶೇಷ ಆಸಕ್ತಿ ವಹಿಸಿದ್ದಾರೆ. ಆದರೆ ಉದ್ದೇಶಿತ ಎಲ್ಲಾ ಪ್ರಸ್ತಾವನೆಗಳ ವೈಮಾನಿಕ ದೂರಕ್ಕೆ ಹೋಲಿಸಿದರೆ ತುಮಕೂರು ಪ್ರಸ್ತಾವನೆ ದೂರದಲ್ಲಿದ್ದರೂ, ರಾಜ್ಯ ಸರ್ಕಾರ ಗುರುತಿಸಿರುವ ಎಲ್ಲಾ ಸ್ಥಳಗಳಿಗಿಂತ ಇದು ಉತ್ತಮವಾಗಿದೆ. ಇದರಿಂದ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರಕಲಿದ್ದು, ಕರ್ನಾಟಕದ ಬಹುತೇಕ ಪ್ರದೇಶಗಳಿಗೆ ಅನುಕೂಲವಾಗಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಹೆಚ್ಚಿನ ಪ್ರಮಾಣದಲ್ಲಿದ್ದು, ಇತರ ಪ್ರಸ್ತಾವಿತ ಸ್ಥಳಗಳಿಗೆ ಹೋಲಿಸಿದರೆ ಇಲ್ಲಿ ಜಮೀನು ಬೆಲೆಯೂ ಕಡಿಮೆ ಇದೆ. ಇದು ಕೈಗಾರಿಕಾ ಕ್ರಾಂತಿಗೆ ಪೂರಕವಾಗಲಿದೆ ಎಂದರು. ಯಾವ ಸ್ಥಳ ಸೂಕ್ತ ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸಲಿ. ತುಮಕೂರು 19 ಜಿಲ್ಲೆಗಳ ಹೆಬ್ಬಾಗಿಲಾಗಿದ್ದು, ಬೆಂಗಳೂರು-ಪುಣೆ ಎಕನಾಮಿಕ್ ಕಾರಿಡಾರ್, ಚೆನ್ನೈ-ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್, ಉದ್ದೇಶಿತ ಬೀದರ್-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಹಾಗೂ ಸುಮಾರು 12,500 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಇಂಡಸ್ಟ್ರಿಯಲ್ ನೋಡ್ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ನಾನು ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆಂದು 2020ರಿಂದಲೂ ಒತ್ತಾಯಿಸುತ್ತಾ ಬಂದಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ವಿಜಯೇಂದ್ರ ಅವರು ತುಮಕೂರಿನಲ್ಲಿ ನಿರ್ಮಾಣ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ. ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲೂ ಸೇರ್ಪಡೆ ಮಾಡಲು ನಾನೇ ಮನವಿ ಮಾಡಿದ್ದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಕೂಡ ಈ ಪ್ರಸ್ತಾವನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಮತ್ತು ಉತ್ತರ ಕರ್ನಾಟಕದ ಅನೇಕ ಸಂಘ ಸಂಸ್ಥೆಗಳು ಸಹಮತ ವ್ಯಕ್ತಪಡಿಸಿವೆ” ಎಂದು ಹೇಳಿದರು.
“ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು-2 ನಿರ್ಮಾಣ ನನ್ನ ಕನಸಾಗಿತ್ತು. ಎಲ್ಲರಿಗಿಂತ ಮೊದಲೇ ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಚರ್ಚಿಸಿ, ತುಮಕೂರು ಸ್ಥಳ ಗುರುತಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆರಂಭದಿಂದಲೂ ಕಡತದ ಅನುಸರಣೆಯನ್ನು ರಾಜ್ಯಮಟ್ಟದ ದಿಶಾ ಸಮಿತಿ ಮಾಜಿ ಸದಸ್ಯರಾದ ಕುಂದರನಹಳ್ಳಿ ರಮೇಶ್ ಅವರು ಮಾಡುತ್ತಾ ಬಂದಿದ್ದಾರೆ” ಎಂದರು. ಅರವಿಂದ್ ಬೆಲ್ಲದ್ ಸೇರಿದಂತೆ ಉತ್ತರ ಕರ್ನಾಟಕದ 19 ಜಿಲ್ಲೆಗಳ 37 ಜನ ಚುನಾಯಿತ ಪ್ರತಿನಿಧಿಗಳು ಪಕ್ಷಾತೀತವಾಗಿ ಕೇಂದ್ರ ಸರ್ಕಾರಕ್ಕೆ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು-2 ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದಾರೆ. ಯಾವುದೇ ಬೃಹತ್ ಯೋಜನೆಗೆ ವೈಜ್ಞಾನಿಕ ಅಭಿವೃದ್ಧಿ ಲಾಬಿ ಅಗತ್ಯ ಎಂದು ಹೇಳಿದರು. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಾಗ ಮಧುಗಿರಿ, ಕೊರಟಗೆರೆ, ಸಿರಾ ಮತ್ತು ತುಮಕೂರು ತಾಲ್ಲೂಕುಗಳ ಜಮೀನುಗಳಲ್ಲಿ ಈಗಾಗಲೇ ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ನಿಖರವಾಗಿ ಎಷ್ಟು ಎಕರೆ ಸರ್ಕಾರಿ ಜಮೀನು ಇದೆ, ಎಷ್ಟು ರೈತರು ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ ಹಾಗೂ ಎಷ್ಟು ಎಕರೆ ಖಾಸಗಿ ಜಮೀನು ಅಗತ್ಯವಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಿಲ್ಲ.

ಕೇಂದ್ರ ಸರ್ಕಾರದ ಮಿತ್ರ ಯೋಜನೆಗೆ ಪ್ರಸ್ತಾವನೆ ಸಲ್ಲಿಸುವಾಗ ಸುಮಾರು 1100 ಎಕರೆ ಸರ್ಕಾರಿ ಜಮೀನು ಗುರುತಿಸಿ ಸಲ್ಲಿಸಲಾಗಿತ್ತು. ಈಗಿನ ಕೆಎಐಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಆಗಿನ ಮಧುಗಿರಿ ಉಪವಿಭಾಗಾಧಿಕಾರಿ ಮತ್ತು ಆಗಿನ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರು ವರದಿ ಸಿದ್ಧಪಡಿಸಿದ್ದರು. ಅವರಿಗೆ ಸಂಪೂರ್ಣ ಮಾಹಿತಿ ಇದೆ. ಪರಮೇಶ್ವರ್ ಅವರು ಕಂದಾಯ ಸಚಿವರೂ ಆಗಿರುವುದರಿಂದ ಒಂದು ತಿಂಗಳ ಅವಧಿಯಲ್ಲಿ ಜಮೀನು ಗುರುತಿಸುವ ಕಾರ್ಯ ಮಾಡಬೇಕು. ಅವರೊಂದಿಗೆ ಟಿ.ಬಿ. ಜಯಚಂದ್ರ, ಕೆ.ಎನ್. ರಾಜಣ್ಣ ಹಾಗೂ ಸುರೇಶ್‌ಗೌಡ ಅವರು ತಮ್ಮ ಕ್ಷೇತ್ರಗಳಲ್ಲಿ ಜಮೀನು ಗುರುತಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ತುಮಕೂರಿನಲ್ಲಿ ಸಿಲಿಕಾನ್ ಮಾದರಿ ಸಿಟಿ ಸ್ಥಾಪಿಸುವಂತೆ ರಾಜ್ಯದ ಎಂ.ಬಿ. ಪಾಟೀಲ್ ಅವರಿಗೆ ಸಭೆಯಲ್ಲಿಯೇ ಸೂಚಿಸಿದ್ದರೂ, ಇದುವರೆಗೆ ಪ್ರಸ್ತಾವನೆ ಸಲ್ಲಿಸದಿರುವುದು ವಿಷಾದಕರ ಸಂಗತಿ. ಜಮೀನು ಗುರುತಿಸಿ ಎರಡೂ ಯೋಜನೆಗಳಿಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದು ಸೂಕ್ತವಾಗಿದೆ ಎಂದರು. ಹೇಮಾವತಿ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಹಾಗೂ ಉದ್ದೇಶಿತ ಶರಾವತಿ ನೀರಿನ ಯೋಜನೆಗಳ ಜಲ ಸಂಪನ್ಮೂಲವನ್ನು ಬಳಸಿಕೊಳ್ಳಲು ಅನುಕೂಲವಾಗುವಂತೆ ಜಾಲಗುಣಿ ಬಳಿ ವಾಟರ್ ಬ್ಯಾಂಕ್ ನಿರ್ಮಾಣವಾಗಲಿದೆ. ಈ ಪ್ರದೇಶ ಹಿಂದುಳಿದಿದ್ದು, ಅಭಿವೃದ್ಧಿಗೆ ಮುನ್ನುಡಿ ಬರೆಯಲಿದೆ ಎಂದು ಹೇಳಿದರು. ಉದ್ದೇಶಿತ ಮಾದವಾರ-ತುಮಕೂರು ಮೆಟ್ರೋ ಮಾರ್ಗ ಹಾಗೂ ಉಪನಗರ ರೈಲು ಮಾರ್ಗವನ್ನು ವಸಂತನರಸಾಪುರದವರೆಗೆ ವಿಸ್ತರಿಸಲು ಪರಮೇಶ್ವರ್ ಅವರು ವಿಶೇಷ ಗಮನ ಹರಿಸಬೇಕು. ಬೆಂಗಳೂರು-ನೆಲಮಂಗಲ-ತುಮಕೂರು ರಸ್ತೆ ಮೇಲಿನ ಒತ್ತಡ ಕಡಿಮೆ ಮಾಡಬೇಕಿದೆ. ಬೆಂಗಳೂರು-ಹಾಸನ, ಬೆಂಗಳೂರು-ಪುಣೆ, ಬೆಂಗಳೂರು-ಹೊನ್ನಾವರ ಹೆದ್ದಾರಿಗಳಲ್ಲಿ ಈಗಾಗಲೇ ಸಂಚಾರ ದಟ್ಟಣೆ ಹೆಚ್ಚಾಗಿದೆ. ಇಲ್ಲಿ ಮತ್ತೆ ಬೆಂಗಳೂರು-2 ವಿಮಾನ ನಿಲ್ದಾಣ ನಿರ್ಮಿಸಿದರೆ ಸಂಚಾರ ಸಮಸ್ಯೆ ಎದುರಾಗಲಿದೆ ಎಂದು ಹೇಳಿದರು.
ತುಮಕೂರು ಏರ್‌ಪೋರ್ಟ್ ಪ್ರಸ್ತಾವನೆ ಉದ್ದೇಶಿತ ಬೀದರ್-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಮೂಲಕ ಬೆಂಗಳೂರು ಬಿಸಿನೆಸ್ ಕಾರಿಡಾರ್‌ಗೆ ನೇರ ಸಂಪರ್ಕ ಕಲ್ಪಿಸಲಿದೆ. ಇದರಿಂದ ಬೆಂಗಳೂರು-ತುಮಕೂರು ರಸ್ತೆಯ ಒತ್ತಡ ಕಡಿಮೆಯಾಗಲಿದೆ. ಈಗಾಗಲೇ ಮೈಸೂರಿನಲ್ಲಿ ವಿಮಾನ ನಿಲ್ದಾಣ ಇರುವುದರಿಂದ ಬೆಂಗಳೂರು-ಮೈಸೂರು ರಸ್ತೆಯ ಭಾಗದಲ್ಲಿ ಮತ್ತೊಂದು ವಿಮಾನ ನಿಲ್ದಾಣ ಪ್ರಸ್ತಾವನೆ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿಲ್ಲ. ಅಲ್ಲಿನ ಜಮೀನು ಬೆಲೆಯೂ ಹೆಚ್ಚಾಗಿದೆ ಎಂದರು. ಕೇಂದ್ರ ಸರ್ಕಾರ ಜಮೀನು ಕೇಳುವವರೆಗೆ ಕಾಯುವುದು ಸರಿಯಲ್ಲ. ಕೇಂದ್ರ ಸರ್ಕಾರದ ನಿಮ್ಜ್ ಯೋಜನೆಗೆ ಅಭಿವೃದ್ಧಿ ರೆವಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಅವರು ಆಗಿನ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‌ಕುಮಾರ್ ಅವರಿಗೆ ಪತ್ರ ಬರೆದು ಸುಮಾರು 12,500 ಎಕರೆ ಜಮೀನು ನೋಟಿಫಿಕೇಷನ್ ಮಾಡಿಸಿದ ಉದಾಹರಣೆ ನಮ್ಮ ಮುಂದಿದೆ. ನಾನು 2009ರಲ್ಲಿ ಲೋಕಸಭಾ ಸದಸ್ಯನಾಗಿ ಆಯ್ಕೆಯಾದ ನಂತರ ಯೋಜನೆ ಮಂಜೂರು ಮಾಡಿಸಿದೆ. ಅಭಿವೃದ್ಧಿ ಲಾಬಿ ಮಾಡಲು ಮನಸ್ಸಿರಬೇಕು ಅಷ್ಟೇ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕುಂದರನಹಳ್ಳಿ ರಮೇಶ್, ಶಿವರುದ್ರಪ್ಪ, ಮಲ್ಲಿಕಾರ್ಜುನಯ್ಯ ಬಿ.ಬಿ., ಮಹದೇವಯ್ಯ, ವೀರಭದ್ರಯ್ಯ, ರಕ್ಷಿತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
