breaking news

ಶಿರಾ–ಬಡವನಹಳ್ಳಿ ಚತುಷ್ಪಥ ರಸ್ತೆ ಕಾಮಗಾರಿಗೆ ಗುತ್ತಿಗೆ ಆದೇಶ: ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ವಿ. ಸೋಮಣ್ಣರಿಂದ ತುಮಕೂರಿಗೆ ಮತ್ತೊಂದು ಕೊಡುಗೆ

ಶಿರಾ–ಬಡವನಹಳ್ಳಿ ಚತುಷ್ಪಥ ರಸ್ತೆ ಕಾಮಗಾರಿಗೆ ಗುತ್ತಿಗೆ ಆದೇಶ: ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ವಿ. ಸೋಮಣ್ಣರಿಂದ ತುಮಕೂರಿಗೆ ಮತ್ತೊಂದು ಕೊಡುಗೆ

ತುಮಕೂರು, ಜುಲೈ:  ರಾಷ್ಟ್ರೀಯ ಹೆದ್ದಾರಿ–69ರ ಶಿರಾ–ಬಡವನಹಳ್ಳಿ ಚತುಷ್ಪಥ ರಸ್ತೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಆರಂಭಿಸಲು ಕೇಂದ್ರ ಸರ್ಕಾರದ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಜುಲೈ 22ರಂದು ಗುತ್ತಿಗೆ ಆದೇಶ ಹೊರಡಿಸಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಹಾಗೂ ತುಮಕೂರು ಸಂಸದ ವಿ. ಸೋಮಣ್ಣ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ–69ರ ಶಿರಾ–ಬಡವನಹಳ್ಳಿ ಚತುಷ್ಪಥ ರಸ್ತೆ ಕಾಮಗಾರಿಗೆ ಅನುಮೋದನೆ ನೀಡುವಂತೆ 2025ರ ಫೆಬ್ರವರಿ 6ರಂದು ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ್ದ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕಾಮಗಾರಿಗೆ ಅನುಮೋದನೆ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ, 2025ರ ಮಾರ್ಚ್ 7ರಂದು 20.2 ಕಿಲೋಮೀಟರ್ ಉದ್ದದ ಶಿರಾ–ಬಡವನಹಳ್ಳಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ₹584.98 ಕೋಟಿ ವೆಚ್ಚದ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು.

ಇದೇ ವೇಳೆ, ಬಡವನಹಳ್ಳಿಯಿಂದ ಭೈರೇನಹಳ್ಳಿವರೆಗೆ 32 ಕಿಲೋಮೀಟರ್ ಉದ್ದದ ಚತುಷ್ಪಥ ರಸ್ತೆಗೆ ಸುಮಾರು ₹1,000 ಕೋಟಿ ವೆಚ್ಚದ ಪ್ರಸ್ತಾವನೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ಮಂಜೂರಾತಿ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಶಿರಾ–ಬಡವನಹಳ್ಳಿ–ಭೈರೇನಹಳ್ಳಿ ಒಟ್ಟು 52 ಕಿಲೋಮೀಟರ್ ಉದ್ದದ, ಅಂದಾಜು ₹1,585 ಕೋಟಿ ವೆಚ್ಚದ ಚತುಷ್ಪಥ ಹೆದ್ದಾರಿ ನಿರ್ಮಾಣದಿಂದ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಿಂದ ತಿರುಪತಿ ಮತ್ತು ಚೆನ್ನೈಗೆ ಸಂಚಾರ ಮತ್ತಷ್ಟು ಸುಗಮವಾಗಲಿದೆ ಎಂದು ಅವರು ಹೇಳಿದರು.

ಪ್ರಸ್ತುತ ಶಿರಾದಿಂದ ತುಮಕೂರು–ದಾಬಸ್‌ಪೇಟೆ–ಕೋಲಾರ ಮಾರ್ಗವಾಗಿ ತಿರುಪತಿಗೆ ತಲುಪಲು ಸುಮಾರು 6 ರಿಂದ 7 ಗಂಟೆಗಳ ಸಮಯ ಬೇಕಾಗುತ್ತದೆ. ಹೊಸ ಹೆದ್ದಾರಿ ನಿರ್ಮಾಣವಾದ ಬಳಿಕ ಮಧುಗಿರಿ–ಚಿಕ್ಕಬಳ್ಳಾಪುರ–ಚಿಂತಾಮಣಿ ಮಾರ್ಗವಾಗಿ ಕೇವಲ 4 ಗಂಟೆಗಳಲ್ಲಿ ತಿರುಪತಿಗೆ ತಲುಪಬಹುದಾಗಿದ್ದು, ಸುಮಾರು 60 ಕಿಲೋಮೀಟರ್ ರಸ್ತೆ ಪ್ರಯಾಣವೂ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು.

ಇದಲ್ಲದೆ, ವಸಂತನರಸಾಪುರ ಮತ್ತು ಶಿರಾ ಕೈಗಾರಿಕಾ ಪ್ರದೇಶಗಳಿಗೆ ಚೆನ್ನೈ ಬಂದರಿನೊಂದಿಗೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸಲಾಗುವುದಲ್ಲದೆ, ಈ ಹೆದ್ದಾರಿ ಶಿರಾ–ಬೆಂಗಳೂರು ನಡುವಿನ ಪರ್ಯಾಯ ಮಾರ್ಗವಾಗಿಯೂ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ತುಮಕೂರು ಜಿಲ್ಲೆಯ ಜನರ ಪರವಾಗಿ ವಿ. ಸೋಮಣ್ಣ ಅಭಿನಂದನೆ ಸಲ್ಲಿಸಿದ್ದಾರೆ.

Centre Clears Work Order for Sira–Badavanahalli Four-Lane Highway; Credit to Nitin Gadkari and V. Somanna

Share this post

About the author

Leave a Reply

Your email address will not be published. Required fields are marked *