breaking news

ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ: ದೇಶದ್ರೋಹಿಗಳ ಜೊತೆ ನಂಟು ಆರೋಪ

ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ: ದೇಶದ್ರೋಹಿಗಳ ಜೊತೆ ನಂಟು ಆರೋಪ

ತುಮಕೂರು: ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಹಾಗೂ ರಾಜ್ಯದಲ್ಲಿ ಬಿಜೆಪಿ ಶಾಸಕರ ಮೇಲೆ ಗೂಂಡಾಗಿರಿ ನಡೆಸುತ್ತಿರುವ ಕಾಂಗ್ರೆಸ್ ಧೋರಣೆ ಖಂಡಿಸಿ ಗುರುವಾರ ಜಿಲ್ಲಾ ಬಿಜೆಪಿ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಬಿಜಿಎಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ವರ್ತನೆ ಖಂಡಿಸಿದರು.

ಈ ವೇಳೆ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜನರಿಂದ ತಿರಸ್ಕೃತವಾಗಿರುವ ಕಾಂಗ್ರೆಸ್, ಜನರ ವಿಶ್ವಾಸ ಗಳಿಸಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಅಭದ್ರಗೊಳಿಸಲು ಹೊರಟಿರುವುದು ನಾಚಿಕೆಗೇಡು. ನೀಟ್ ಪರೀಕ್ಷೆ ನೆಪ ಮಾಡಿಕೊಂಡು ದೇಶದ್ರೋಹಿಗಳ ಜೊತೆ ಸೇರಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಮೂಲಕ ರಾಜಕೀಯ ಲಾಭ ಪಡೆಯಲು ಹೊರಟಿರುವ ಕಾಂಗ್ರೆಸ್ ಉದ್ದೇಶ ಈಡೇರುವುದಿಲ್ಲ ಎಂದು ಕಿಡಿಕಾರಿದರು.

ಕಾಕ್ರೋಚ್ ಜನತಾ ಪಾರ್ಟಿಗೆ ಭಾರತದ ಬಗ್ಗೆ ಗೌರವವಿಲ್ಲ. ಅಂತಹವರು, ನೇಪಾಳದಂತೆ, ಶ್ರೀಲಂಕಾದಂತೆ, ಬಾಂಗ್ಲಾದೇಶದಂತೆ ಭಾರತದಲ್ಲಿ ಅರಾಜಕತೆ ಸೃಷ್ಟಿ ಮಾಡುತ್ತೇವೆ ಎನ್ನುವ ದೇಶದ್ರೋಹಿಗಳ ಜೊತೆ ಸೇರಿರುವ ಕಾಂಗ್ರೆಸ್‌ನ ಉದ್ದೇಶ ದೇಶದ ಜನರಿಗೆ ತಿಳಿದಿದೆ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ವಿಶ್ವದ ಅನೇಕ ರಾಷ್ಟ್ರಗಳು ಅಭದ್ರತೆಯಲ್ಲಿರುವಾಗ ಪ್ರಧಾನಿ ಮೋದಿಯವರ ಆಡಳಿತದಿಂದಾಗಿ ಭಾರತ ಸುಭದ್ರವಾಗಿದೆ. ಸರ್ಕಾರದ ಉತ್ತಮ ಆಡಳಿತ ಸಹಿಸದ ಕಾಂಗ್ರೆಸ್ ದೇಶದ್ರೋಹಿಗಳ ಜೊತೆ ಸೇರಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು ಮಾಡುತ್ತಿದೆ ಎಂದು ಟೀಕಿಸಿದರು.

ನೀಟ್ ಪರೀಕ್ಷೆ ವಿಚಾರವಾಗಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೆಲವೇ ವಿದ್ಯಾರ್ಥಿಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗೂಂಡಾಗಳು ಸೇರಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಅವರಿಗೆ ಬೆಂಬಲವಾಗಿ ನಿಂತಿರುವುದು ದುರಾದೃಷ್ಟಕರ. ಇದು ಕಾಂಗ್ರೆಸ್‌ನ ಅವಸಾನ. ಇದನ್ನೇ ನೆಪ ಮಾಡಿಕೊಂಡು ಕಾಂಗ್ರೆಸ್ ದೇಶದಲ್ಲಿ ಗಲಭೆ ಎಬ್ಬಿಸಲು ಹೊರಟಿದೆ. ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಮೇಲೆ ಕಾಂಗ್ರೆಸ್‌ನವರು ಹಲ್ಲೆ ಮಾಡಿದ್ದಾರೆ, ಮೊಟ್ಟೆ ಎಸೆದಿದ್ದಾರೆ. ಇದು ಖಂಡನೀಯ. ಬಿಜೆಪಿ ಸಹಿಸುವುದಿಲ್ಲ ಎಂದು ಜ್ಯೋತಿಗಣೇಶ್ ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ, ಕಾಂಗ್ರೆಸ್ ಪಕ್ಷ ಅವಸಾನದ ಅಂಚಿನಲ್ಲಿದೆ. ದೇಶದಲ್ಲಿ ಕೇವಲ ಮೂರು ಕಡೆ ಕಾಂಗ್ರೆಸ್ ಆಡಳಿತದಲ್ಲಿದೆ. ಉತ್ತಮ ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿಯವರ ವರ್ಚಸ್ಸು ಕಳೆಯಲು, ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ದೇಶದ್ರೋಹಿಗಳೊಂದಿಗೆ ಸೇರಿ ಗಲಭೆ ಮಾಡಲು ಹೊರಟಿದೆ. ಮೋದಿ ಸರ್ಕಾರ ಇದಕ್ಕೆ ಅವಕಾಶ ನೀಡುವುದಿಲ್ಲ. ಗಲಭೆಕೋರರನ್ನು ಮಟ್ಟಹಾಕುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳನ್ನು ಕಾಂಗ್ರೆಸ್ ಪಕ್ಷ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಖಂಡನೀಯ. ರಾಜ್ಯದಲ್ಲಿ ಕಾಂಗ್ರೆಸ್‌ನವರು ಬಿಜೆಪಿ ಶಾಸಕರ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರಜಾಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸರ್ಕಾರ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ಕೇಂದ್ರ ಸರ್ಕಾರ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ತರಲು ಹೊರಟಿರುವುದನ್ನು ಸಹಿಸದ ಕಾಂಗ್ರೆಸ್ ನಾಯಕರು ಈ ರೀತಿ ದೊಂಬಿ ಎಬ್ಬಿಸಲು ಗಲಭೆಕೋರರಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಆಡಳಿತ ಪಕ್ಷದ ಲೋಪಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಬೇಕಾದ ವಿರೋಧ ಪಕ್ಷ ನೈತಿಕತೆ ಇಲ್ಲದೆ ದೇಶದ್ರೋಹಿಗಳು ಹಾಗೂ ಹಲವು ದೇಶಗಳ ಜೊತೆ ಕೈಜೋಡಿಸಿ ವಿಧ್ವಂಸಕ ಕೃತ್ಯ ಮಾಡುತ್ತಿದೆ. ಕಾಕ್ರೋಚ್ ಜನತಾ ಪಾರ್ಟಿ ಹೆಸರಿನಲ್ಲಿ ದೇಶದಲ್ಲಿ ಅಶಾಂತಿ ಉಂಟು ಮಾಡಲು ಹೊರಟವರ ಜೊತೆ ಕಾಂಗ್ರೆಸ್ ನಾಯಕರು ಕೈಜೋಡಿಸಿರುವುದು ಕಾಂಗ್ರೆಸ್‌ನ ನೈತಿಕತೆಯ ಅಧಃಪತನವಾಗಿದೆ. ಕೆಲವು ವಿದ್ಯಾರ್ಥಿಗಳನ್ನು ಕರೆತಂದು ದೇಶದ್ರೋಹಿಗಳೊಂದಿಗೆ ಸೇರಿ ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡಲು ಹೊರಟಿದೆ ಎಂದು ಟೀಕಿಸಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಟಿ.ಹೆಚ್. ಹನುಮಂತರಾಜು, ನಗರ ಅಧ್ಯಕ್ಷ ಧನುಷ್, ಮಹಿಳಾ ಮೋರ್ಚಾ ಅಧ್ಯಕ್ಷೆ ಚೈತ್ರ ಮಂಜುನಾಥ್, ನಗರ ಅಧ್ಯಕ್ಷೆ ವಸಂತ ಸುದರ್ಶನ್, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ವಿನಯ್ ಜೈನ್, ಮುಖಂಡರಾದ ಸತ್ಯಮಂಗಲ ಜಗದೀಶ್, ಕೆ. ವೇದಮೂರ್ತಿ, ನವಚೇತನ್, ಬಂಬೂ ಮೋಹನ್, ಪ್ರೀತಂ ಜೈನ್, ವಿರೂಪಾಕ್ಷಪ್ಪ, ಸಿ.ಎನ್. ರಮೇಶ್, ಮಲ್ಲಿಕಾರ್ಜುನ್, ಪುಟ್ಟರಾಜು, ಹನುಮಂತರಾಜು, ರೇಖಾರಾಜ್, ಸಿದ್ಧಗಂಗಯ್ಯ, ಅಂಜನಮೂರ್ತಿ, ಗಂಗೇಶ್ ಹದ್ದಿನಕಲ್ಲು, ವೆಂಕಟೇಶಾಚಾರ್, ಎನ್. ರಾಜಣ್ಣ, ಬ್ರಹ್ಮಪ್ರಕಾಶ್, ಜಗದೀಶ್ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

BJP Targets Congress Over Alleged Links with Anti-National Elements During Protest

Share this post

About the author

Leave a Reply

Your email address will not be published. Required fields are marked *