ತುಮಕೂರು: ರಾಜ್ಯದ 500 ಸರ್ಕಾರಿ ಶಾಲೆಗಳನ್ನು ‘ಕರ್ನಾಟಕ ಪಬ್ಲಿಕ್ ಶಾಲೆ’ (KPS) ಗಳಾಗಿ ಉನ್ನತೀಕರಿಸಲು ನೆರವು ಘೋಷಿಸಿರುವ ʻಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB)ʼನ ಉನ್ನತ ಅಧಿಕಾರಿಗಳ ನಿಯೋಗ ಗುರುವಾರ ತುಮಕೂರಿಗೆ ಭೇಟಿ ನೀಡಿತ್ತು.
ಮೊದಲಿಗೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ (DDPI) ಭೇಟಿ ನೀಡಿ ಜಿಲ್ಲೆಯಲ್ಲಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಿತು.
ನಂತರ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗೆ ಭೇಟಿ ನೀಡಿದ ನಿಯೋಗ, ಶಿಕ್ಷಕರಿಗೆ ಯಾವೆಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತಿದೆ ಎಂಬ ಮಾಹಿತಿ ಪಡೆದುಕೊಂಡಿತು.

ತುಮಕೂರು ತಾಲ್ಲೂಕಿನ ನಾಗವಲ್ಲಿಯ ʻಕರ್ನಾಟಕ ಪಬ್ಲಿಕ್ʼ ಶಾಲೆಗೂ ನಿಯೋಗ ಭೇಟಿ ನೀಡಿ, ಶಾಲೆಯನ್ನು ಪರಿಶೀಲಿಸಿತು. ಈ ಶಾಲೆಯ ಸೌಕರ್ಯಗಳನ್ನು ನೋಡಿ, ಹರ್ಷ ವ್ಯಕ್ತಪಡಿಸಿತು. ಈ ಶಾಲೆಯ ಅಭಿವೃದ್ಧಿ ಗಾಗಿ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್ ಗೌಡರ ಕಾಳಜಿಯನ್ನು ನಿಯೋಗ ಶ್ಲಾಘಿಸಿದರು.
ನಿಯೋಗದಲ್ಲಿ ಎಡಿಬಿ ಬ್ಯಾಂಕಿನ ಹಿರಿಯ ಪ್ರಾಜೆಕ್ಟ್ ಆಫೀಸರ್ (ಶಿಕ್ಷಣ) ಶ್ರೀಮತಿ ಪೂನಂ ಎಸ್. ಭಾಂಬ್ರಿ, ಹಿರಿಯ ಅಧಿಕಾರಿಗಳಾದ ಖುಷ್ಬೂ ಚೌಧರಿ, ಸಂಗೀತಾ ಡೇ ಇದ್ದರು. ಉಪ ನಿರ್ದೇಶಕ ಶ್ರೀ ಕೆ.ಜಿ. ರಘುಚಂದ್ರ ನೇತೃತ್ವದಲ್ಲಿ ಇಲಾಖೆಯ ಅಧಿಕಾರಿಗಳು ನಿಯೋಗಕ್ಕೆ ಅಗತ್ಯ ಮಾಹಿತಿ ಒದಗಿಸಿದರು.
