breaking news

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಕಾಂಗ್ರೆಸ್ ವಕೀಲರ ಆಗ್ರಹ; ಶಿಕ್ಷಣ ಸಚಿವರನ್ನು ಸಂಪುಟದಿಂದ ವಜಾಗೊಳಿಸಲು ರಾಷ್ಟ್ರಪತಿಗೆ ಮನವಿ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಕಾಂಗ್ರೆಸ್ ವಕೀಲರ ಆಗ್ರಹ; ಶಿಕ್ಷಣ ಸಚಿವರನ್ನು ಸಂಪುಟದಿಂದ ವಜಾಗೊಳಿಸಲು ರಾಷ್ಟ್ರಪತಿಗೆ ಮನವಿ

ತುಮಕೂರು: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನ್ಯಾಯಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ, ನೀಟ್ ಪರೀಕ್ಷೆ ಹಗರಣದ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾನೂನು ಮತ್ತು ಮಾನವ ಹಕ್ಕುಗಳು ಹಾಗೂ ಮಾಹಿತಿ ಹಕ್ಕು ವಿಭಾಗದ ನೇತೃತ್ವದಲ್ಲಿ ವಕೀಲರು ಗುರುವಾರ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ಟಿ.ಎನ್. ಸುರೇಶ್, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ತಪ್ಪಿದಲ್ಲಿ ರಾಷ್ಟ್ರಪತಿಗಳು ಸಂವಿಧಾನದ ಅನುಚ್ಛೇದ 75(2)ರ ಪ್ರಕಾರ ಕೇಂದ್ರ ಶಿಕ್ಷಣ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಹೇಳಿದರು.

ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆ ಖಂಡನೀಯ. ಕೇಂದ್ರ ಸರ್ಕಾರ ಹಾಗೂ ಪೊಲೀಸರ ದೌರ್ಜನ್ಯವನ್ನು ಖಂಡಿಸಿ, ಪ್ರಧಾನಿ ನಿವಾಸದ ಎದುರು ಧರಣಿ ಮಾಡುತ್ತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರ ಬಂಧನ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಪ್ರತಿಭಟನೆ ನಡೆಸಲು ಭಾರತದ ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶವಿದೆ. ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಕಾನೂನು ನೀಡಿದೆ. ಆದರೆ ಈ ಹಕ್ಕನ್ನು ಕೇಂದ್ರ ಸರ್ಕಾರ ಕಸಿಯುತ್ತಿದೆ. ಬಲಪ್ರಯೋಗದ ಮೂಲಕ ವಿದ್ಯಾರ್ಥಿಗಳ ಕೂಗನ್ನು ಹತ್ತಿಕ್ಕುತ್ತಿದೆ ಎಂದು ಟೀಕಿಸಿದರು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ ತಮ್ಮ ಭವಿಷ್ಯದ ಆತಂಕದಿಂದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಅವರ ಕುಟುಂಬಕ್ಕೆ ತಲಾ ಒಂದು ಕೋಟಿ ರೂ. ಪರಿಹಾರ ನೀಡಬೇಕು. ಮಾಡಿರುವ ಅನ್ಯಾಯಕ್ಕೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು. ಈ ಹಗರಣಕ್ಕೆ ಕಾರಣವಾಗಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಟಿ.ಎನ್. ಸುರೇಶ್ ಒತ್ತಾಯಿಸಿದರು.

ಹಿರಿಯ ವಕೀಲ ವಿ.ಆರ್. ವೆಂಕಟೇಶಪ್ಪ ಮಾತನಾಡಿ, ನೀಟ್ ಪರೀಕ್ಷೆಯ ಹಗರಣದಿಂದ ಅನೇಕ ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ. ಇತರ ವಿದ್ಯಾರ್ಥಿಗಳ ಭವಿಷ್ಯದ ಕನಸುಗಳಿಗೆ ಬೆಂಕಿ ಹಚ್ಚಿದೆ. ನ್ಯಾಯ ಕೇಳಿ ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಾಗಿದೆ. ಈ ಹಗರಣಕ್ಕೆ ಕಾರಣವಾಗಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲೇಬೇಕು. ರಾಷ್ಟ್ರಪತಿಗಳು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದರು.

ನೀಟ್ ಹಗರಣದ ತನಿಖೆಯನ್ನು ಕೇಂದ್ರ ಸರ್ಕಾರದ ಕೈಗೊಂಬೆಯಂತಹ ತನಿಖಾ ಸಂಸ್ಥೆಗಳು ನಡೆಸುತ್ತಿರುವುದರಿಂದ ಸತ್ಯ ಹೊರಬರುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಈ ತನಿಖೆ ನಡೆಯಬೇಕು. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ನೀಟ್ ಪರೀಕ್ಷೆಯ ಅಕ್ರಮ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಪತ್ರ ಸಲ್ಲಿಸಿದರು. ವಕೀಲರಾದ ಹೆಚ್. ನಾಗರಾಜು, ಹೆಚ್.ಎಲ್. ವಸಂತಕುಮಾರ್, ಕೆ.ಸಿ. ವೆಂಕಟೇಶ್, ಮಲ್ಲಿಕಾರ್ಜುನ್, ಶಿವಣ್ಣ, ಕೆ.ಎನ್. ಹರೀಶ್, ಶಿವಕುಮಾರಸ್ವಾಮಿ, ಎನ್.ಆರ್. ರವಿ, ನವೀನ್ ನಾಯಕ್, ನಾಗರಾಜ್ ಪಾವಗಡ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Congress Lawyers Demand Dharmendra Pradhan’s Resignation; Appeal to President to Remove Education Minister from Cabinet

Share this post

About the author

Leave a Reply

Your email address will not be published. Required fields are marked *