ಜಿಲ್ಲಾಧಿಕಾರಿಗಳಿಂದ ಖಾದಿ ಉತ್ಪನ್ನಗಳ ವಿಶೇಷ ಮಾರಾಟಕ್ಕೆ ಚಾಲನೆ.
ತುಮಕೂರು: ಗಾಂಧಿ ಜಯಂತಿ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿಂದು ಖಾದಿ ಉತ್ಪನ್ನಗಳ ವಿಶೇಷ ರಿಯಾಯಿತಿ ಮಾರಾಟಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿರುವ ಖಾದಿ ಸಂಘ ಸಂಸ್ಥೆಗಳನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಈ ಮಾರಾಟವನ್ನು ಏರ್ಪಡಿಸಲಾಗಿದೆ. ಅಕ್ಟೋಬರ್ 2 ಹಾಗೂ 3ರಂದು ಸಾರ್ವತ್ರಿಕ ರಜಾದಿನಗಳಾಗಿರುವುದರಿಂದ ಅಕ್ಟೋಬರ್ 4 ರಿಂದ 6ರವರೆಗೆ 3 ದಿನಗಳ ಕಾಲ ಮಾರಾಟ ಮಾಡಲಾಗುವುದು. ಖಾದಿ ಪ್ರೇಮಿಗಳು ಹಾಗೂ ಜಿಲ್ಲೆಯ ಸಮಸ್ತ ನಾಗರೀಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗಾಧಿಕಾರಿ ಜಿ.ಎಸ್. ರತ್ನಮ್ಮ ಮಾತನಾಡಿ ಈ ವಿಶೇಷ ರಿಯಾಯಿತಿ ದರದಲ್ಲಿ ಅರಳೇ ಖಾದಿ, ಪಾಲೀ ವಸ್ತ್ರ ಖಾದಿ, ರೇಷ್ಮೆ ಖಾದಿ ಮಾರಾಟ ಮಾಡಲಾಗುವುದು.
ಅಲ್ಲದೆ ಗ್ರಾಮೋದ್ಯೊಗ ಉತ್ಪನ್ನಗಳನ್ನೂ ಸಹ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಖಾದಿ ಗ್ರಾಮೋದ್ಯೋಗಿಗಳಿಗೆ ಉತ್ತೇಜನ ನೀಡಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಎಡಿಸಿ ಕೆ. ಚೆನ್ನಬಸಪ್ಪ, ಸಿಬ್ಬಂದಿ ರಕ್ಷಿತ್, ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ರಿಯಾಯಿತಿ ಮಾರಾಟದಲ್ಲಿ ತಿಪಟೂರು ತಾಲೂಕು ಅಣ್ಣಾಪುರ, ಮಧುಗಿರಿ ಪಟ್ಟಣ ಹಾಗೂ ತುಮಕೂರು ಜಿಲ್ಲಾ ಖಾದಿ ಗ್ರಾಮೋದ್ಯೋಗ ಸಹಕಾರ ಸಂಘಗಳು ಮಳಿಗೆಗಳನ್ನು ತೆರೆದು ಖಾದಿ ಉತ್ಪನ್ನಗಳಾದ ಅಂಗಿ, ಅಂಗವಸ್ತ್ರ, ಕರವಸ್ತ್ರ, ಪಂಚೆ ಸೇರಿದಂತೆ ಗ್ರಾಮೋದ್ಯೋಗ ಉತ್ಪನ್ನಗಳಾದ ಅಗರಬತ್ತಿ, ಜೇನುತುಪ್ಪವನ್ನು ಮಾರಾಟ ಮಾಡಲಿದ್ದಾರೆ.