ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಎಲ್ಲ ವಿದ್ಯಾರ್ಥಿಗಳು ಅನುಸರಿಸಲು ಜಸ್ಟೀಸ್ ಪಿ.ಕೃಷ್ಣಭಟ್ ಕರೆ.
ತುಮಕೂರು:ಗಾಂಧೀಜಿರವರ ವಿಚಾರಧಾರೆಗಳನ್ನು ಓದಬೇಕು,ಅವರ ತತ್ವ ಮತ್ತು ಆದರ್ಶಗಳನ್ನು ಎಲ್ಲಾ ವಿದ್ಯಾರ್ಥಿಗಳು ಅನುಸರಿಸಬೇಕು,ಪ್ರತಿಯೊಬ್ಬರು ಮತ್ತೊಬ್ಬರ ಮಾತುಗಳನ್ನು ಶಾಂತಚಿತ್ತದಿಂದ ಆಲಿಸಬೇಕು ಆನಂತರ ಅದನ್ನು ವಿಮರ್ಶೆ ಮಾಡಬೇಕು,ಮಂಥನ ಮಾಡಬೇಕು,ಪ್ರತಿ ಉತ್ತಮ ವಿಷಯದ ಬಗ್ಗೆ ಚರ್ಚೆಗಳಾಗಬೇಕು,ಪರಸ್ಪರ ಅಭಿಪ್ರಾಯ ವಿನಿಮಯದಿಂದ ಉತ್ತಮವಾದುದನ್ನು ಕಂಡುಕೊಳ್ಳಬಹುದು,ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ಹೊಂದಬೇಕು,ಗಾಂಧೀಜಿರವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು,ಕೇವಲ ಕಾನೂನಿನ ಕಲಿಕೆಯೊಂದೇ ಸಾಲದು ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಾಗ ಜೀವನ ಸಾರ್ಥಕ ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಜಸ್ಟೀಸ್ ಪಿ.ಕೃಷ್ಣಭಟ್ ರವರು ಹೇಳಿದರು.
ಅವರು ಇಂದು ವಿದ್ಯೋದಯ ಕಾನೂನು ಕಾಲೇಜಿನಲ್ಲಿ ನಡೆದ ಗಾಂಧಿಜಯಂತಿ,ಲಾಲ್ ಬಹದ್ದೂರ್ ಶಾಸ್ತ್ರಿ ದಿನಾಚರಣೆ ಮತ್ತು ನೂತನ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ರವರು ಮಹಾತ್ಮರ ಹುಟ್ಟು ಪರೋಪಕಾರಕ್ಕೆ ಸೀಮಿತವಾಗಿರುತ್ತದೆ,ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಗಳ ಹುಟ್ಟು ಈ ದೇಶಕ್ಕೆ ಆದರ್ಶವಾಗಿದೆ,ಗಾಂಧೀಜಿ ಸಮಾಜದಲ್ಲಿ ಎಲ್ಲರಿಗೂ ಬಟ್ಟೆ ಇಲ್ಲ ಎಂದು ತಾವು ತುಂಡು ಬಟ್ಟೆ ಉಟ್ಟರು,ಶಾಸ್ತ್ರೀಜೀ ರವರು ತಮ್ಮ ಹೆಚ್ಚಾದ ಸಂಬಳವನ್ನು ಮತ್ತೆ ಸರ್ಕಾರಕ್ಕೆ ವಾಪಸ್ ನೀಡಿದರು ಇವರು ನಮಗೆ ಆದರ್ಶ ಎಂದು ಹೇಳಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಾತನಾಡಿದ ಹೈಕೋರ್ಟ್ ಹಿರಿಯ ವಕೀಲರಾದ ಎಂ.ಎನ್.ಮಧುಸೂದನ್ ರವರು ಪ್ರತಿ ವಿದ್ಯಾರ್ಥಿಯು ಗುರು-ಹಿರಿಯರಿಗೆ ಗೌರವ ನೀಡುವುದನ್ನು ಮೈಗೂಡಿಸಿಕೊಳ್ಳಬೇಕು,ವಿದ್ಯೋದಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಇಂದು ದೇಶದ ಎಲ್ಲಾ ಭಾಗಗಳಲ್ಲಿ ವಕೀಲರಾಗಿ,ನ್ಯಾಯಾಧೀಶರಾಗಿ,ಸರ್ಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸುತ್ತಿರುವುದು ಈ ವಿದ್ಯಾಸಂಸ್ಥೆಯ ಹೆಮ್ಮೆ ಎಂದು ಹೇಳಿದರು.
ವೇದಿಕೆಯಲ್ಲಿ ಹೆಚ್.ಎಸ್.ರಾಜು,ದೊಡ್ಡಮನೆ ಗೋಪಾಲಗೌಡ, ಪ್ರೊ.ಹೆಚ್.ಎಸ್.ಶೇಷಾದ್ರಿ, ಪ್ರೊ.ಕೆ.ಚಂದ್ರಣ್ಣ, ಸತೀಶ್ ಪೈ,ಡಿ.ಸಿ.ಹಿಮಾನಂದ್ ಮುಂತಾದವರು ಉಪಸ್ಥಿತರಿದ್ದರು.
ಎ.ಹೆಚ್.ರಶ್ಮಿ ನಿರೂಪಿಸಿ,ಡಾ||ಎ.ನಾರಾಯಣಸ್ವಾಮಿ ಸ್ವಾಗತಿಸಿ,ಪ್ರವೀಣ್ ಕುಮಾರ್ ಮತ್ತು ಸಂಗಡಿಗರು ಪ್ರಾರ್ಥಿಸಿ,ಡಾ||ಆರ್.ರಮೇಶ್ ರವರು ವಂದಿಸಿದರು.