ತುಮಕೂರು: ಈ ವರ್ಷ ವಾಡಿಕೆಯಂತೆ ನಿರೀಕ್ಷಿತ ಮಳೆಯು ಸಕಾಲಕ್ಕೆ ಬಂದಿಲ್ಲ. ತುಮಕೂರು ನಗರದಲ್ಲಿ ಬರದ ಛಾಯೆ ಕಾಣಿಸುತ್ತಿದ್ದು, ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕೆಂದು ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಮನವಿ ಮಾಡಿದರು. ಶಾಸಕರು ತುಮಕೂರು ಮಹಾನಗರ ಪಾಲಿಕೆ, ಕರ್ನಾಟಕ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವಂತೆ ಶಾಸಕರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರಸ್ತುತ ಬುಗುಡನಹಳ್ಳಿ ಕೆರೆಯಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟದ ಕುರಿತು ಮಾಹಿತಿ ಪಡೆದ ಶಾಸಕರಿಗೆ ಅಧಿಕಾರಿಗಳು, “ಇಂದಿನ ನೀರಿನ ಮಟ್ಟ 200 ಎಂಎಲ್‌ಡಿ ಇದ್ದು, ಅಕ್ಟೋಬರ್ ತಿಂಗಳ ಅಂತ್ಯದವರೆಗೂ ನೀರನ್ನು ಬಳಸಿಕೊಳ್ಳಬಹುದಾಗಿದೆ” ಎಂದು ಮಾಹಿತಿ ನೀಡಿದರು.
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಮೂರು ಓವರ್‌ಹೆಡ್ ಟ್ಯಾಂಕ್‌ಗಳು ತಾಂತ್ರಿಕ ಕಾರಣಗಳಿಂದ ನೀರು ಸರಬರಾಜು ಮಾಡಲಾಗುತ್ತಿಲ್ಲ. ಸದಾಶಿವನಗರದಲ್ಲಿರುವ ಓವರ್‌ಹೆಡ್ ಟ್ಯಾಂಕ್‌ಗೆ ನೀರು ಸರಬರಾಜು ಆಗುತ್ತಿಲ್ಲ. ಇದಕ್ಕೆ ಇಸ್ರಾ ಶಾದಿ ಮಹಲ್ ಬಳಿ ಪೈಪ್‌ಲೈನ್ ಹಾನಿಯಾಗಿರುವುದು ಕಾರಣವಾಗಿದ್ದು, ಅದನ್ನು ಶೀಘ್ರವಾಗಿ ದುರಸ್ತಿ ಮಾಡಬೇಕು. ಅಲ್ಲದೆ, ಸದಾಶಿವನಗರದ ಪಾರ್ಕ್‌ನಲ್ಲಿರುವ ಬೋರ್‌ವೆಲ್‌ನ್ನು ತುರ್ತಾಗಿ ದುರಸ್ತಿ ಮಾಡಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ತುಮಕೂರು ಮಹಾನಗರ ಪಾಲಿಕೆಯ ಒಳಚರಂಡಿ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಬೇಕಾಗಿದೆ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕರ್ನಾಟಕ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು, ಇನ್ನಷ್ಟು ಅನುದಾನದ ಅಗತ್ಯವಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ತುಮಕೂರು ನಗರದ ಮರಳೂರು ಕೆರೆ ವೃತ್ತದಿಂದ ಗೂಳೂರಿಗೆ ತೆರಳುವ ರಸ್ತೆಯು ಅತ್ಯಂತ ಅಪಾಯಕಾರಿ ಅಪಘಾತ ವಲಯವಾಗಿದೆ. ಈ ರಸ್ತೆಯನ್ನು ಮರು ಅಭಿವೃದ್ಧಿಪಡಿಸುವ ಸಲುವಾಗಿ ರಸ್ತೆ ಹಂಪ್‌ಗಳು, ಬ್ಲಿಂಕರ್‌ಗಳು, ಕ್ಯಾಟ್ ಐಸ್, ರಸ್ತೆ ಮಾರ್ಜಿನ್ ಬಣ್ಣ ಬಳಿಯುವುದು ಹಾಗೂ ಟ್ರಾಫಿಕ್ ಸೂಚನಾ ಫಲಕಗಳನ್ನು ಅಳವಡಿಸುವ ಕಾಮಗಾರಿಗಳನ್ನು ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಮಂಡಿಪೇಟೆಯ ಮುಖ್ಯರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಸಾರ್ವಜನಿಕರು ಸಂಚಾರ ಮಾಡಲು ಹಲವು ದಿನಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ ಎಂದು ಶಾಸಕರು ಸಭೆಯಲ್ಲಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಸಂತೇಪೇಟೆಯ ಜಲಸಂಗ್ರಹಾಗಾರಕ್ಕೆ ಹೋಗುವ ನೀರಿನ ಪೈಪ್‌ಲೈನ್ ಶಿಥಿಲಗೊಂಡಿದ್ದು, ಅದರ ದುರಸ್ತಿ ಕಾಮಗಾರಿ ಕೈಗೊಳ್ಳಬೇಕಾಗಿದೆ. ಈ ಕಾರಣದಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ವಿಳಂಬವಾಗಿದೆ ಎಂದು ಮಾಹಿತಿ ನೀಡಿದರು. ತುರ್ತಾಗಿ ಪೈಪ್‌ಲೈನ್ ದುರಸ್ತಿ ಕಾಮಗಾರಿಯನ್ನು ಪೂರ್ಣಗೊಳಿಸಿ, ನಂತರ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವಾರು ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಸಾರ್ವಜನಿಕರ ದೂರುಗಳು ಕೇಳಿಬರುತ್ತಿವೆ. ಈ ಕುರಿತು ಸಭೆಯಲ್ಲಿ ಮಾತನಾಡಿದ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಇದ್ದ ಸಂದರ್ಭದಲ್ಲಿ ಅವರು ಪ್ರತಿನಿತ್ಯ ವಾರ್ಡ್‌ಗಳ ವಿವಿಧ ಬಡಾವಣೆಗಳಿಗೆ ತೆರಳಿ ಕಸದ ಸಮಸ್ಯೆಯನ್ನು ಸ್ಥಳದಲ್ಲಿಯೇ ಬಗೆಹರಿಸುತ್ತಿದ್ದರು. ಆದರೆ ಪ್ರಸ್ತುತ ಸ್ಥಳೀಯ ಜನಪ್ರತಿನಿಧಿಗಳು ಇಲ್ಲದಿರುವುದೂ ಸಮಸ್ಯೆಗೆ ಒಂದು ಕಾರಣವಾಗಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳು ಸಮರ್ಪಕವಾಗಿ ಕಸ ವಿಲೇವಾರಿ ಮಾಡುವಂತೆ ಸೂಚಿಸಿದರು.
ಈ ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಶುಭಾ ಬಿ., ಪಾಲಿಕೆ ಉಪ ಆಯುಕ್ತರಾದ (ಆಡಳಿತ) ಸುಪ್ರಿಯ ಬಣಗಾರ್, ಕಂದಾಯ ಉಪ ಆಯುಕ್ತರಾದ ಮನು ಕುಮಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ತಬಸ್ಸುಮ್ ಜಹೇರಾ, ಕಾರ್ಯಪಾಲಕ ಅಭಿಯಂತರರಾದ ವಿನಯ್ ಮತ್ತು ಸಂದೀಪ್, ವಲಯ ಆಯುಕ್ತರಾದ ಶಿವಾನಂದ್, ನಂದೀಶ್, ನಾಗರಾಜು, ಪರಿಸರ ಅಭಿಯಂತರರಾದ ಪೂರ್ಣಿಮಾ, ಕೌನ್ಸಿಲ್ ಕಾರ್ಯದರ್ಶಿ ನಜ್ಮಾ, ಕರ್ನಾಟಕ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರರಾದ ಅನಿಲ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
