ತುಮಕೂರು:ಕ್ಯಾತ್ಸಂದ್ರ ಟೋಲ್‍ನಿಂದ ಶ್ರೀದೇವಿ ಮೆಡಿಕಲ್‍ಕಾಲೇಜುವರೆಗೆ ಹಾಳಾಗಿರುವ ರಾಷ್ಟ್ರೀಯ ಹೆದ್ದಾರಿ ಹೊಸ 48ನ್ನು ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ಇಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆ ಮಠ್ ಅವರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕ್ಯಾತ್ಸಂದ್ರದ ಬಳಿ ರಸ್ತೆ ತಡೆ ನಡೆಸಿದರು.
ಕ್ಯಾತ್ಸಂದ್ರದ ಸರ್ಕಲ್ ಬಳಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ದ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆ ಮಠ್,ಕ್ಯಾತ್ಸಂದ್ರ ಟೋಲ್‍ನಿಂದ ಶ್ರೀದೇವಿ ಕಾಲೇಜುವರೆಗೆ ಇರುವ ಆರು ಪಥದ ಬೈಪಾಸ್ ರಸ್ತೆ ಸಂಪೂರ್ಣ ಹಾಳಾಗಿದೆ.
ಇದೇ ದಾರಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಹಾಗೂ 16ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ತರಳುತ್ತಾರೆ. ಆದರೆ ಇವರ್ಯಾರ ಕಣ ್ಣಗೂ ರಸ್ತೆ ಹಾಳಾಗಿರುವುದು ಕಂಡು ಬರುತ್ತಿಲ್ಲ.ಸ್ಥಳೀಯ ಶಾಸಕರಾದ ಜೋತಿ ಗಣೇಶ್,ಸಂಸದರಾದ ಜಿ.ಎಸ್.ಬಸವರಾಜು, ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರುಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಕಳೆದ ಎರಡು ತಿಂಗಳ ಹಿಂದೆಯೇ ಜಿಲ್ಲಾಡಳಿತ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಇತರೆ ಅಧಿಕಾರಿಗಳಿಗೆ ಹಾಳಾಗಿರುವ ರಸ್ತೆ ದುರಸ್ತಿಗೊಳಿಸುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಅತಿವೇಗದಲ್ಲಿ ಚಲಿಸುವ ವಾಹನಗಳು, ರಸ್ತೆಯಲ್ಲಿರುವ ಗುಂಡಿಗಳಿಂದ ತಪ್ಪಿಸಿಕೊಳ್ಳಲು ಹೋಗಿ,ಬೇರೆ ವಾಹನಗಳಿಗೆ ಡಿಕ್ಕಿ ಹೊಡೆದ ಹಲವು ಪ್ರಕರಣಗಳಿವೆ. ಹಾಗಿದ್ದರೂ ಜಿಲ್ಲಾಡಳಿತವಾಗಲಿ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ.
ಆಡಳಿತ ಪಕ್ಷದ ರಾಜಕಾರಣ ಗಳ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದು,ವಿರೋಧಪಕ್ಷಗಳು ಮಾಡಿದ ಮನವಿಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಶಶಿ ಹುಲಿಕುಂಟೆ ಮಠ್ ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆ ದುರಸ್ತಿಗಾಗಿ ಪ್ರತಿಭಟನೆ ನಡೆಸುತ್ತೇವೆ ಅನುಮತಿ ನೀಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರೆ,ನಮ್ಮ ಹೋರಾಟವನ್ನು ಶ್ಲಾಘಿಸುವ ಅಧಿಕಾರಿಗಳು, ಅನುಮತಿ ನೀಡಲು ಸಾಧ್ಯವಿಲ್ಲ ಎಂಬ ಹಿಂಬರಹ ನೀಡುತ್ತಾರೆ.
ಹೀಗಾದರೆ ಜನರ ಸಮಸ್ಯೆಗಳು ಸರಕಾರಕ್ಕೆ ತಿಳಿಯುವುದು ಹೇಗೆ, ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆಯೇ ಎಂದು ಪ್ರಶ್ನಿಸಿದ ಅವರು,ಕ್ಯಾತ್ಸಂದ್ರ ಬಳಿ ಇರುವ ಜಾಸ್ ಟೋಲ್‍ನ ಲೀಸ್ ಅವಧಿ ಮುಗಿದ್ದಿದ್ದರೂ ಅವರು ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ.ಸ್ಥಳೀಯ ಜನರು ಒಡಾಡಲು ಅಗತ್ಯವಿರುವ ಸರ್ವಿಸ್ ರೋಡ್ ಸಹ ನಿರ್ಮಿಸಿಲ್ಲ. ಪಾಸ್ಟ್‍ಟ್ಯಾಗ್ ಮೂಲಕ ಕೇಂದ್ರ ಸರಕಾರ ಜನರು ಕಷ್ಟಪಟ್ಟು ದುಡಿದ ಹಣವನ್ನು ದೋಚುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ಯುವ ಕಾಂಗ್ರೆಸ್ ಮುಖಂಡರಾದ ಆನಂದ್,ಜಯರಾಮ್,ಮೋಹನ್, ಹನುಮಂತರಾಜು, ಸಿದ್ದರಾಜು, ಸೈಯದ್ ಪೀರ್, ಆಕಾಶ್, ಮಹಮದ್ ಆತೀಕ್, ಜಿ.ಆರ್.ರವಿ ಸೇರಿದಂತೆ ಹಲವರು ರಸ್ತೆ ತಡೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರಸ್ತೆ ತಡೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ನಂತರ ಬಿಡುಗಡೆ ಮಾಡಿದರು