ಕೈಗೆ ಬಂದ ತುತ್ತು ಬಾಯಿಗೆ ಬರದೆ ಹೋಯ್ತು.
ತುಮಕೂರು: ಪ್ರಸ್ತುತ ಮುಂಗಾರಿನಲ್ಲಿ ಸತತ ಮಳೆಯಿಂದ ಬೆಳೆ ಹಾನಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದೆ ಹೋಯ್ತು ಎಂದು ತುಮಕೂರು ತಾಲ್ಲೂಕು ಎ.ಕೆ.ಕಾವಲ್‍ನ ರೈತರು ಜಿಲ್ಲೆಯ ಬೆಳೆ/ಮನೆ ಹಾನಿ ವೀಕ್ಷಿಸಲು ಕೇಂದ್ರದಿಂದ ಆಗಮಿಸಿದ್ದ ಕೇಂದ್ರದ ಹಣಕಾಸು ನಿರ್ವಹಣಾ, ನಿಯಂತ್ರಣಾಧಿಕಾರಿ ಸುಶೀಲ್ ಪಾಲ್ ನೇತೃತ್ವದ ಕೇಂದ್ರದ ಕೃಷಿ ನಿರ್ದೇಶಕ ಡಾ: ಸುಭಾಷ್‍ಚಂದ್ರ, ರಾಜ್ಯದ ಅಪರ ಕೃಷಿ ನಿರ್ದೇಶಕ ಬಿ.ಶಿವರಾಜ್ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಅವರನ್ನೊಳಗೊಂಡ ತಂಡದವರ ಬಳಿ ತಮ್ಮ ಅಳಲನ್ನು ತೋಡಿಕೊಂಡರು.
ಕೇಂದ್ರ ತಂಡವು ಇಂದು ತುಮಕೂರು, ಗುಬ್ಬಿ ಹಾಗೂ ಕುಣ ಗಲ್ ತಾಲ್ಲೂಕುಗಳಲ್ಲಿ ನೆರೆಯಿಂದಾದ ಮನೆ/ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿತು.
ತಂಡವು ಮೊದಲಿಗೆ ತುಮಕೂರು ತಾಲ್ಲೂಕು ಗೂಳೂರು ಅಮಾನಿಕೆರೆಯ ವಿಜಯಕುಮಾರ್ ಮತ್ತು ಕೆ.ಎಂ. ಗಂಗಾಧರಯ್ಯ ಹಾಗೂ ಎ.ಕೆ.ಕಾವಲ್‍ನ ನೂರ್ ಉನ್ನಿಸಾ ಅವರ ಜಮೀನಿಗೆ ಭೇಟಿ ನೀಡಿ ಹಾಳಾದ ರಾಗಿ ಬೆಳೆಯನ್ನು ಪರಿವೀಕ್ಷಿಸಿದರು.
ಹದವಾದ ಮಳೆಯಿಂದ ಕಾಳುಕಟ್ಟಿ, ರಾಗಿ ತೆನೆ ಬಲಿತು ತೂಗುತ್ತಿದ್ದಾಗ ಅತೀವೃಷ್ಟಿಯಿಂದ ಸಂಪೂರ್ಣ ಹಾಳಾಗಿ ರೈತರ ಬದುಕು ನೆಲಕಚ್ಚಿದೆ. ಬೆಳೆಹಾನಿ ನಷ್ಟವಲ್ಲದೆ ಜಾನುವಾರುಗಳಿಗೂ ಮೇವಿನ ಕೊರತೆಯಾಗಿದೆ. ಹಾಳಾಗಿರುವ ಬೆಳೆ ಪಶು ಆಹಾರಕ್ಕೂ ಯೋಗ್ಯವಲ್ಲದಿರುವುದು ಮತ್ತಷ್ಟು ನೋವುಂಟು ಮಾಡಿದೆ ಎಂದು ರೈತರು ಈ ಸಂದರ್ಭದಲ್ಲಿ ತಮ್ಮ ದುಃಖವನ್ನು ತಂಡದೊಂದಿಗೆ ತೋಡಿಕೊಂಡರು.
ನಂತರ ಗುಬ್ಬಿ ತಾಲ್ಲೂಕು ಎಂ.ಹೆಚ್.ಪಟ್ಟಣಕ್ಕೆ ಭೇಟಿ ನೀಡಿ ತಂಡವು ಕೆರೆ ನೀರಿನಿಂದ ರಾಗಿ, ಹೂ, ತರಕಾರಿ ಬೆಳೆ ಹಾಳಾಗಿರುವುದನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಇದೇ ವೇಳೆ ರೈತ ಸಂಘದ ಮುಖಂಡರು ಅಕ್ಟೋಬರ್-ನವೆಂಬರ್ ಮಾಹೆಯಲ್ಲಿ ಸುರಿದ ಭಾರಿ ಮಳೆಯಿಂದ ಬೆಳೆ ನಷ್ಟ ಹೊಂದಿದ ರೈತರಿಗೆ ಪ್ರತಿ ಹೆಕ್ಟೇರ್ ಮಳೆಯಾಶ್ರಿತ ರಾಗಿ ಬೆಳೆಗೆ ಸರ್ಕಾರ ನೀಡುತ್ತಿರುವ 6800 ರೂ.ಗಳ ಪರಿಹಾರ ಧನವನ್ನು 30,000ಕ್ಕೆ ಹೆಚ್ಚಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ತಂಡದ ಮನೋಜ್ ರಾಜನ್ ಸರ್ಕಾರದಿಂದ ರೈತರಿಗೆ ನೀಡುತ್ತಿರುವ 6800 ರೂ.ಗಳ ಹಣ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ(ಇನ್‍ಪುಟ್ ಸಬ್ಸಿಡಿ)ವಷ್ಟೆ. ಪರಿಹಾರವಲ್ಲವೆಂದು ಮನವರಿಕೆ ಮಾಡಿದರು.
ನಂತರ ಇದೇ ಎಂ.ಹೆಚ್.ಪಟ್ಟಣದಲ್ಲಿ ಮಳೆಯಿಂದ ಸಂಪೂರ್ಣ ಹಾಳಾದ ನರಸಿಂಹಮೂರ್ತಿ, ವೆಂಕಟಲಕ್ಷ್ಮಮ್ಮ ಹಾಗೂ ಹನುಮಂತಯ್ಯ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ ತಂಡವು ಮನೆ ಕಳೆದುಕೊಂಡವರಿಗೆ ಕೂಡಲೇ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಗುಬ್ಬಿ ತಾಲ್ಲೂಕು ತಹಶೀಲ್ದಾರರಿಗೆ ಸೂಚನೆ ನೀಡಿತಲ್ಲದೆ, ಪರಿಹಾರವನ್ನು ಸಂತ್ರಸ್ತರ ಖಾತೆಗೆ ನೇರವಾಗಿ ಜಮಾ ಮಾಡಿ, ಜಮಾ ಆಗಿರುವ ಬಗ್ಗೆ ಸಂತ್ರಸ್ತರ ಗಮನಕ್ಕೆ ತರಬೇಕೆಂದು ನಿರ್ದೇಶನ ನೀಡಿತು.
ನಂತರ ಗುಬ್ಬಿ ತಾಲ್ಲೂಕು ಬಾಗೂರು ಬಡಾವಣೆಯ ರೈತರ ಜಮೀನಿಗೆ ಭೇಟಿ ನೀಡಿ ಕೆರೆಯ ನೀರಿಂದ ಹಾಳಾದ ರಾಗಿ ಬೆಳೆಯನ್ನು ಪರಿಶೀಲಿಸಿದಾಗ ಸ್ಥಳೀಯ ರೈತರಾದ ರಾಮಯ್ಯ, ಗೋವಿಂದಶೆಟ್ಟಿ, ಗುರಪ್ಪ ಅವರು ಮಳೆಯಿಂದ ನೀರು ನಿಂತು ನಮ್ಮ ಹೊಲದ ರಾಗಿ ಕೊಳೆತು ಹೋಗಿದೆ. ದಯಮಾಡಿ ನಮಗೆ ಪರಿಹಾರ ಕಲ್ಪಿಸಿ ಬದುಕಿಗೆ ಆಸರೆಯಾಗಬೇಕೆಂದು ಬೇಡಿಕೊಂಡರು.
ನಂತರ ತಂಡವು ಗುಬ್ಬಿ ತಾಲ್ಲೂಕು ನಿಟ್ಟೂರಿನಲ್ಲಿ ಮಳೆಯಿಂದ ಹಾಳಾದ 3 ಸೇತುವೆ ಹಾಗೂ 350 ಮೀ. ರಸ್ತೆಯನ್ನು ವೀಕ್ಷಿಸಿ ಅಧಿಕಾರಿಗಳಿಗೆ ಶೀಘ್ರ ದುರಸ್ತಿ ಕಾಮಗಾರಿಯನ್ನು ಕೈಗೊಂಡು ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ನಿಟ್ಟೂರು ಬಳಿಕ ಕಡಬ ಕೆರೆ ಸುತ್ತಮುತ್ತಲಿನ ಜಮೀನಿಗೆ ಭೇಟಿ ನೀಡಿ ಜಯಣ್ಣ ಹಾಗೂ ಶಿವಶಂಕರಯ್ಯ ಅವರ ಜಮೀನಿನಲ್ಲಿ ಕೆರೆ ಕೋಡಿ ನೀರು ನಿಂತು ಹಾನಿಗೊಳಗೊಂಡ ಅಡಿಕೆ ಸಸಿ ಹಾಗೂ ಬಾಳೆ ಬೆಳೆಯನ್ನು ವೀಕ್ಷಿಸಿದರು.
ಕುಣ ಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯಕ್ಕೆ ಭೇಟಿ ನೀಡಿ ವೀಕ್ಷಿಸಿದ ತಂಡವು ಗುಬ್ಬಿ ತಾಲ್ಲೂಕಿಗೆ ಪ್ರವಾಸ ಮುಂದುವರೆಸಿ ರಾಜನಹಳ್ಳಿಯಲ್ಲಿ ಸಂಪೂರ್ಣ ಹಾಳಾದ ರಸ್ತೆ ಹಾಗೂ ಸೇತುವೆಯನ್ನು ವೀಕ್ಷಿಸಿತು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ:ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಷಹಪುರವಾಡ್, ಉಪವಿಭಾಗಾಧಿಕಾರಿ ವಿ.ಅಜಯ್, ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.