ತುಮಕೂರು:ರಾಜ ಮಹಾರಾಜರ ಕಾಲದಲ್ಲಿ ಕಲಾವಿದರನ್ನು ರಾಜಾಶ್ರಯದಲ್ಲಿಟ್ಟು ಪೋಷಿಸಿದರೆ, ಪ್ರಜಾಪ್ರಭುತ್ವದಲ್ಲಿ ಜನರೇ ಕಲಾವಿದರಿಗೆ ರಜತ ಕಿರೀಟ ಧಾರಣೆಗೆ ಮಾಡಿ ಗೌರವಿಸುವ ಮೂಲಕ ಕಲೆಯನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶ್ರೀವಿಷ್ಣು ಸಾಯಿ ಕಲಾ ಸಂಘದವತಿಯಿಂದ ಆಯೋಜಿಸಿದ್ದ ಕುರುಕ್ಷೇತ್ರ ನಾಟಕ ಪ್ರದರ್ಶನದ ವೇಳೆ ಹಿರಿಯ ಕಲಾವಿದರಾದ ಶ್ರೀಕಂಠಾರಾಧ್ಯ ಅವರಿಗೆ ಬೆಳ್ಳಿ ಕಿರೀಟ ಧಾರಣೆ ಮಾಡಿ,ಆಶೀರ್ವದಿಸಿ ಮಾತನಾಡುತಿದ್ದ ಅವರು,ಸಂಗೀತ,ನಾಟಕ,ನೃತ್ಯ ಹೀಗೆ ಹತ್ತು ಹಲವು ಕಲಾ ಪ್ರಕಾರಗಳು ಮನುಷ್ಯನ ಮನಸ್ಸನ್ನು ಶಾಂತಗೊಳಿಸುವುದರ ಜೊತೆಗೆ,ಸೌಜನ್ಯ, ಸದ್ಭಾವನೆ ಬೆಳೆಯುವಂತೆ ಮಾಡುತ್ತವೆ ಎಂದರು.
ನಾಟಕಗಳು ಕೇವಲ ಮನರಂಜನೆಗೊಸ್ಕರ ಸೀಮಿತವಲ್ಲ.ಮನುಷ್ಯನಲ್ಲಿ ಅಡಗಿರುವ ಸುಪ್ತ ಪ್ರತಿಭೆ ಆನಾವರಣೆಗೆ ವೇದಿಕೆಯಾಗಿ ಕೆಲಸ ಮಾಡುತ್ತವೆ.ಚಲನಚಿತ್ರದಲ್ಲಿ ಖಾತ್ಯ ನಟರೆನಿಸಿಕೊಂಡ ಬಹುತೇಕ ಕಲಾವಿದರ ಹಿಂದಿನ ಗುಟ್ಟೇ ರಂಗಭೂಮಿ, ಹಾಗಾಗಿ ಮನುಷ್ಯನ ವ್ಯಕ್ತಿತ್ವವನ್ನು ಗಟ್ಟಿಗೊಳಿಸುವ ಅದ್ಬುತ ಶಕ್ತಿ ನಾಟಕಗಳಿಗೆ ಇದೆ. ಇದನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಸಮಾಜದ್ದು ಎಂದು ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಇಂದು ರಜತ ಕಿರೀಟ ಧಾರಣೆಗೆ ಭಾಜನರಾಗುತ್ತಿರುವ ಶ್ರೀಕಂಠಾರಾಧ್ಯ ಅವರ ತಂದೆ ಸಹ ಸಂಗೀತ ಉಪಾಧ್ಯಾಯರಾಗಿ ಕೆಲಸ ಮಾಡಿದವರುಅವರ ಸಹೋದರರು ಸಹ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಾಲ ಕಲಾವಿದನಾಗಿ, ಆ ನಂತರ ಅನೇಕ ಪ್ರಬುದ್ದ ಪಾತ್ರಗಳಿಗೆ ಬಣ್ಣ ಹಚ್ಚಿದವರು ಶ್ರೀಕಂಠಾರಾಧ್ಯರವರು,ಇಡೀ ಮನೆತನವೇ ರಂಗಭೂಮಿಗೆ ತಮ್ಮನ್ನು ತಾವು ಆರ್ಪಿಸಿಕೊಂಡಿದ್ದಾರೆ. ಹಾಗಾಗಿ ಆರ್ಹವಾಗಿಯೇ ರಜತ ಕಿರೀಟ ಪಡೆದಿದ್ದಾರೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮವನ್ನು ಕೋಳಾಲ ಪೊಲೀಸ್ ಠಾಣೆಯ ಪಿ.ಎಸ್.ಐ ಮಹಾಲಕ್ಷ್ಮಮ್ಮ ಉದ್ಘಾಟಿಸಿದರು.ಸಮಾಜ ಸೇವಕ ಸಿ.ವಿ.ಮಹದೇವಯ್ಯ, ಪಿ.ಆರ್.ಮಂಜುನಾಥ್,ಕೊಪ್ಪಳ ಕಸಾಪ ಮಾಜಿ ಅಧ್ಯಕ್ಷ ಶೇಖರಗೌಡ ಮಾಲೀ ಪಾಟೀಲ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಟಿ.ಎಸ್.ಸದಾಶಿವಯ್ಯ, ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎನ್.ಶಿವಣ್ಣ, ನಯನ ಎಂಟರ್ ಪ್ರೈಸಸ್‍ನ ಪ್ರಮೋದ್, ಎ.ಎಸ್.ಐ ಮಂಜುನಾಥ್, ಪಿಡಿಓ ಕೃಷ್ಣಮೂರ್ತಿ, ತುಮಕೂರು ತಾಲೂಕು ಕಸಾಪ ಮಾಜಿ ಅಧ್ಯಕ್ಷೆ ಶೈಲಾನಾಗರಾಜು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ನಾಟಕದ ದೃಶ್ಯದ ಕ್ಯಾಪ್ಷನ್
ತುಮಕೂರಿನ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಶ್ರೀವಿಷ್ಣು ಸಾಯಿ ಕಲಾ ಸಂಘ ಆಯೋಜಿಸಿದ್ದ ಕುರುಕ್ಷೇತ್ರ ನಾಟಕದಲ್ಲಿ ಕೃಷ್ಣನ ಪಾತ್ರದಲ್ಲಿ ಷಣ್ಮುಖ, ರುಕ್ಮಣ ಪಾತ್ರದಲ್ಲಿ ಚೈತ್ರ ಅಭಿನಯಿಸಿದರು.