breaking news

Executive Meeting organized by the Labor Unit at the District Congress Office

Executive Meeting organized by the Labor Unit at the District Congress Office

ತುಮಕೂರು:ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕವೂ ಸೇರಿದಂತೆ ಮಂಚೂಣ ಘಟಕಗಳೆಲ್ಲವೂ ಅತಿ ಹೆಚ್ಚು ಸಕ್ರೀಯವಾಗುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ತಿಳಿಸಿದ್ದಾರೆ.
ನಗರದ ಹಾಗೂ ವಿವಿಧ ಹುದ್ದೆಗಳಿಗೆ ನೇಮಕಗೊಂಡವರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡುತಿದ್ದ ಅವರು,ಎನ್.ಎಸ್. ಯು.ಐ,ಕಾರ್ಮಿಕ ಘಟಕ, ವಕೀಲರು,ವೈದ್ಯಕೀಯ ಘಟಕ,ಕಿಸಾನ್ ವಿಭಾಗ ಇವುಗಳೆಲ್ಲವೂ ಒಗ್ಗೂಡಿದರೆ ಪಕ್ಷಕ್ಕೆ ಅತಿ ಹೆಚ್ಚಿನ ಬಲ ಬರಲಿದೆ.ಈ ನಿಟ್ಟಿನಲ್ಲಿ ನಿಮಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಪಕ್ಷ ನೀಡಲಿದೆ ಎಂದರು.


ಕಾರ್ಮಿಕರು, ರೈತರು ಇಲ್ಲದ ದೇಶವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಕಳೆದ ಏಳು ವರ್ಷಗಳಲ್ಲಿ ಭಾರತದಲ್ಲಿ ಹಲವಾರು ಕಾರ್ಮಿಕ ಪರ ಕಾಯ್ದೆಗಳನ್ನು ರದ್ದುಗೊಳಿಸಿ, ಉದ್ದಿಮೆದಾರರ ಪರವಾಗಿರುವ 4 ಕಾರ್ಮಿಕ ಸಂಹಿತೆಗಳನ್ನು ರೂಪಿಸಿದ ಪರಿಣಾಮ ಲಕ್ಷಾಂತರ ಕಾರ್ಮಿಕರು ತಮ್ಮ ಉದ್ಯೋಗ ಭದ್ರತೆಯನ್ನೇ ಕಳೆದುಕೊಂಡಿದ್ದಾರೆ. ಇದರ ಜೊತೆಗೆ, ಕೋರೋನ ಲಾಕ್‍ಡೌನ್ ನಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇವರ ನೆರವಿಗೆ ಬರುವ ಕನಿಷ್ಠ ಸೌಜನ್ಯವನ್ನು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರ ತೋರಿಸಲಿಲ್ಲ. ಬದಲಾಗಿ ಕಾರ್ಮಿಕರಿಗೆ ವಿತರಿಸುವ ಆಹಾರದ ಕಿಟ್ ಮೇಲೆ ಬಿಜೆಪಿ ಶಾಸಕರು ತಮ್ಮ ಭಾವಚಿತ್ರ ಹಾಕಿಕೊಂಡು ಹೆಸರು ಮಾಡಿಕೊಂಡರು. ಇಂತಹ ಘಟನೆಗಳ ವಿರುದ್ದ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗ ಹೋರಾಟ ನಡೆಸಬೇಕಾಗಿದೆ ಎಂದು ಆರ್.ರಾಮಕೃಷ್ಣಪ್ಪ ನುಡಿದರು.


ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಲ್ಲಿ ಕಾರ್ಮಿಕ ಘಟಕ ಮೊದಲು ತಮ್ಮ ಸುತ್ತಮುತ್ತಲು ಇರುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಗೆ ನೊಂದಣ ಮಾಡಿಸಿ,ಗುರುತಿನ ಚೀಟಿ ಹೊಂದುವಂತೆ ಪ್ರೇರೆಪಿಸಬೇಕು. ಇದರಿಂದ ಎಲ್ಲಾ ರೀತಿಯ ನಿರ್ಮಾಣ ಕಾರ್ಮಿಕರಿಗೂ ಹೆಚ್ಚಿನ ಅನುಕೂಲವಾಗಲಿದೆ.ಮುಂದಿನ ಒಂದು ತಿಂಗಳಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬೂತ್ ಮತ್ತು ವಾರ್ಡು ಕಮಿಟಿಗಳಿಗೆ ಅಧ್ಯಕ್ಷರು, ಪದಾಧಿಕಾರಿಗಳನ್ನು ನೇಮಿಸಿ, ಅವರಿಗೆ ಕೆಲಸ ಹಂಚಬೇಕೆಂದು ಕಾರ್ಮಿಕ ವಿಭಾಗದ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.


ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಡಾ.ಆನಂದ್ ಮಾತನಾಡಿ,ಬಿಜೆಪಿ ಪಕ್ಷ ಕಳೆದ 7 ವರ್ಷಗಳಿಂದ ನಿರಂತರವಾಗಿ ಬಡವರ, ಕಾರ್ಮಿಕರ ಜೇಬಿಗೆ ಕತ್ತರಿ ಹಾಕುತ್ತಾ ಬಂದಿದೆ.ಅಡುಗೆ ಅನಿಲ, ಇಂಧನ ಬೆಲೆಗಳ ಹೆಚ್ಚಳದಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾಗುವುದು ಕಾರ್ಮಿಕ ವಲಯ.ಆದರೆ ಇದರ ಬಗ್ಗೆ ಕಿಂಚಿತ್ತೂ ಕಾಳಜಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ವಹಿಸುತ್ತಿಲ್ಲ.ಎಲ್ಲಾ ಸರಕಾರಿ ಸಂಸ್ಥೆಗಳನ್ನು ಕಮಿಷನ್ ಆಸೆಗೆ ಖಾಸಗೀಕರಣ ಮಾಡಿ, ದೇಶವನ್ನು ಲೂಟಿ ಮಾಡುತ್ತಿದೆ. ಇದನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾರ್ಮಿಕ ಘಟಕದ ಪದಾಧಿಕಾರಿಗಳು ಮಾಡಬೇಕೆಂದು ಸಲಹೆ ನೀಡಿದರು.


ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹಾಗೂ ತುಮಕೂರು ಉಸ್ತುವಾರಿ ಸೈಯದ್ ದಾದಾಪೀರ್ ಮಾತನಾಡಿ,ತುಮಕೂರು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಕೋರೋನ ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ, ಮಾಸ್ಕ್ ಸಾನಿಟೈಜರ್ ವಿತರಣೆ ಹಾಗೂ ಹೆಲ್ಪ್‍ಲೈನ್ ಮೂಲಕ ಸೋಂಕಿಗೆ ತುತ್ತಾದವರಿಗೆ ಬೆಡ್ ಒದಗಿಸುವ ವ್ಯವಸ್ಥೆಯನ್ನು ಮಾಡಿದೆ.

ಅಲ್ಲದೆ ಕಾಂಗ್ರೆಸ್ ಪಕ್ಷದ ನೀಡಿದ್ದ ಆರೋಗ್ಯ ಹಸ್ತ ಮತ್ತು ಸಹಾಯ ಹಸ್ತ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಜನರ ಸಂಕಷ್ಟಕ್ಕೆ ಸ್ಪಂದಿಸಿದೆ.ಇದಕ್ಕೆ ನಮ್ಮ ಜಿಲ್ಲಾಧ್ಯಕ್ಷರಾದ ಆರ್.ರಾಮಕೃಷ್ಣ ಅವರ ಮಾರ್ಗದರ್ಶನವೇ ಕಾರಣ. ಮುಂದಿನ ದಿನಗಳಲ್ಲಿಯೂ ಕಾರ್ಮಿಕ ಘಟಕ ಉತ್ತಮವಾಗಿ ಕಾರ್ಯನಿರ್ವಹಿಸಲು ಕಾರ್ಯಾಯೋಜನೆ ರೂಪಿಸಿದೆ ಎಂದರು.


ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಅಬ್ದುಲ್ ರಹೀಂ,ಪ್ರಧಾನ ಕಾರ್ಯದರ್ಶಿ ಎಸ್.ಎಂ. ನಿಂಗರಾಜು,ಆದೀಲ್ ಪಾಷ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ತುಮಕೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ವಾರ್ಡು ಮತ್ತು ಬೂತ್‍ಗಳಿಗೆ ಕಾರ್ಮಿಕ ಘಟಕದವತಿಯಿಂದ ನೇಮಕಗೊಂಡಿದ್ದ ಮುಖಂಡರಿಗೆ ಜಿಲ್ಲಾಧ್ಯಕ್ಷರು ಮತ್ತು ಕಾರ್ಮಿಕ ವಿಭಾಗದ ಮುಖಂಡರು ನೇಮಕಾತಿ ಪತ್ರ ವಿತರಿಸಿದರು.

Share this post

About the author

Leave a Reply

Your email address will not be published. Required fields are marked *