ತುಮಕೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಜಾತಿ ಸ್ವೀಕರಿಸಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಅಧಿವೇಶನದಲ್ಲಿ ಮಂಡಿಸಬೇಕು. ವರದಿಯ ಅಂಶಗಳನ್ನು ರಾಜ್ಯದ ಜನರಿಗೆ ತಿಳಿಸಬೇಕು. ಜಾತಿ ಜನಗಣತಿ ಬಗ್ಗೆ ಬದ್ಧತೆಯ ರಾಜಕಾರಣ ಕೊರತೆಯಿಂದ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ದೊಡ್ಡಬಳ್ಳಾಪುರ ಶಾಸಕ, ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ವೋಟಿನ ರಾಜಕೀಯ ಬಿಟ್ಟರೆ ಮತ್ತೇನು ಮಾಡಿಲ್ಲ. ಕೇಂದ್ರ ಸರ್ಕಾರವೇ ಅಧಿಕೃತವಾಗಿ ಜಾತಿ ಜನಗಣತಿಯ ಸಿದ್ಧತೆ, ಪ್ರಕ್ರಿಯೆ ಆರಂಭಿಸಿದ್ದು, ಆ ಮೂಲಕವೇ ಕರ್ನಾಟಕದ ಜನತೆ ಸಾಮಾಜಿಕ ನ್ಯಾಯ ಪಡೆದುಕೊಳ್ಳಬೇಕಾಗಿದೆ. ಈಗ ಸ್ವೀಕರಿಸಿರುವ ಸಮೀಕ್ಷಾ ವರದಿಯನ್ನು ಅಧಿವೇಶನದಲ್ಲಿ ಮಂಡನೆ ಮಾಡಲಿ ಎಂದು ಹೇಳಿದರು.
2013ರಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗೆ ಹಾಕಿ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ಧರಾಮಯ್ಯನವರು ಜಾತಿ ಜನಗಣತಿಯ ವಿಷಯದಲ್ಲಿ ಬರೀ ಮಾತಿನ ಶೂರರಾದರು, ಒಬಿಸಿ ಸಮುದಾಯಗಳ ಅಶೋತ್ತರಗಳಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗದಂತೆ ಮಾಡಿದರು. 600ಕೋಟಿ ರೂ ತೆರಿಗೆ ಹಣ ಮುಳುಗಿಸಿ ಕೈತೊಳೆದುಕೊಂಡಿದ್ದಾರೆ. 2014 ರಲ್ಲಿ ಕಾಂತರಾಜ ಆಯೋಗಕ್ಕೆ ಜಾತಿ ಜನಗಣತಿ ಜವಾಬ್ದಾರಿ ಕೊಡಲಾಯಿತು. ಆನಂತರ ಜಯಪ್ರಕಾಶ್ ಹೆಗ್ಡೆ ಆಯೋಗಕ್ಕೆ ವಹಿಸಲಾಯಿತು. ಕೊನೆಗೆ 10 ವರ್ಷದ ನಂತರ ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ’ ಹೆಸರಿನ ಜಾತಿ ಜನಗಣತಿಯ ವರದಿ ಮೂಲೆ ಸೇರಿತು. ಬಿಹಾರದ ನಿತೀಶ್ ಕುಮಾರ್, ತೆಲಂಗಾಣದ ರೇವಂತ ರೆಡ್ಡಿ ಒಂದು ವರ್ಷದ ಕಾಲಮಿತಿಯಲ್ಲಿ ಮಾಡಿ ಮುಗಿಸಿದ ಕೆಲಸವನ್ನು, ಸಿದ್ಧರಾಮಯ್ಯನವರು 10 ವರ್ಷ ಕಾಲಹರಣ ಮಾಡಿ ಒಬಿಸಿ ಸಮುದಾಯಗಳನ್ನು ದಿಕ್ಕು ತಪ್ಪಿಸಿದ್ದಾರೆ ಎಂದು ಟೀಕಿಸಿದರು.
ಕಳೆದ ವರ್ಷ ಸಿದ್ಧರಾಮಯ್ಯನವರು ಮತ್ತೊಂದು ಜಾತಿಗಣತಿಗೆ ಮುಂದಾದರು ಜೂನ್15, 2025 ರಂದು ಸಚಿವ ಸಂಪುಟ ಸಭೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಮಧುಸೂದನ್ ನಾಯಕ್ ನೇತೃತ್ವದಲ್ಲಿ ಮತ್ತೊಂದು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನು ಘೋಷಿಸಿದರು . ತಂತ್ರಜ್ಞಾನ ಬಳಸಿ ಸಮೀಕ್ಷೆ ಮಾಡಲಾಗುತ್ತಿದ್ದು ಮೂರೇ ತಿಂಗಳಲ್ಲಿ ವರದಿ ಸಿದ್ಧವಾಗುತ್ತದೆ ಎಂದು ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದರು. 3 ತಿಂಗಳಲ್ಲ, 6 ತಿಂಗಳಲ್ಲ ಒಂದು ವರ್ಷವಾದರೂ ಜಾತಿ ಜನಗಣತಿ ಪ್ರಕ್ರಿಯೆ ಮುಗಿಯುತ್ತಿಲ್ಲ. ಸಮೀಕ್ಷೆ ಶುರುವಾದದ್ದೆ ಸೆಪ್ಟೆಂಬರ್ 22ಕ್ಕೆ. ಆಗಲೇ ಮೊದಲ ಮೂರು ತಿಂಗಳು ಮುಗಿದಿತ್ತು. ನವಂಬರ್ 10ಕ್ಕೆ ಸಮೀಕ್ಷೆ ಮುಗಿದರೂ ಆರು ತಿಂಗಳಾದರೂ ಸಮೀಕ್ಷೆಯ ವರದಿ ಪೂರ್ತಿಯಾಗಿರಲಿಲ್ಲ. ಮೇ 26ಕ್ಕೆ ಸಿದ್ದರಾಮಯ್ಯನವರಿಗೆ ರಾಜೀನಾಮೆ ಕೊಡಲು ಕಾಂಗ್ರೆಸ್ ಹೈಕಮಾಂಡ್ ಆದೇಶಿಸಿತು. ಮರುದಿನ ಮೇ 27ರಂದು ಸಿದ್ದರಾಮಯ್ಯ ತರಾತುರಿಯಲ್ಲಿ ವರದಿ ಸ್ವೀಕರಿಸಿದ ಶಾಸ್ತ್ರ ಮಾಡಿದರು, ಬದ್ಧತೆ ಇದ್ದಿದ್ದರೆ ಆಯೋಗ ಚುರುಕಾಗಿ ಕಾರ್ಯ ನಿರ್ವಹಿಸುವಂತೆ ಮಾಡಿ, ಶಿಫಾರಸ್ಸುಗಳನ್ನು ಜಾರಿಗೆ ತರಲು ಮುಂದಾಗಬೇಕಿತ್ತಲ್ಲವೇ? ಎಂದು ಧೀರಜ್ ಮುನಿರಾಜು ಪ್ರಶ್ನಿಸಿದರು.
ಪತ್ರಿಕೆಗಳಲ್ಲಿ ಸೋರಿದ ವರದಿಗಳು ಬಂದವು. ಜೂನ್16 ರಂದು ಜಾತಿ ಜನಗಣತಿಯ ವಿಷಯ ಹೈಕೋರ್ಟ್ ಮೆಟ್ಟಿಲು ಏರಿದೆ. ಈಗ ಆಗಸ್ಟ್ 20 ಕೇಸು ಮುಂದೆಹೋಗಿದೆ. ರಾಜ್ಯ ಸರ್ಕಾರ ಕಾನೂನು ಹೋರಾಟದಲ್ಲಿಯೂ ಸರಿಯಾದ ಸಿದ್ಧತೆ ಮಾಡದೆ ವಿಫಲವಾಗಿದೆ. ಹೊಸ ಮುಖ್ಯಮಂತ್ರಿಗಳು ಜಾತಿ ಜನಗಣತಿಯ ಬಗ್ಗೆ ಒಂದು ಶಬ್ದವನ್ನು ಮಾತನಾಡುತ್ತಿಲ್ಲ. ಕಾಂಗ್ರೆಸ್ಸಿನಲ್ಲಿರುವ ಹಿಂದುಳಿದ ವರ್ಗಗಳ ನಾಯಕರಿಗೆ ಮಂತ್ರಿ ಸ್ಥಾನ, ಖಾತೆಗಳದ್ದೆ ಚಿಂತೆಯಾಗಿದೆ. ಫೆಬ್ರವರಿ ತಿಂಗಳ ರಾಜ್ಯಪಾಲರ ಭಾಷಣದಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಒಂದು ಸಾಲೂ ಇರಲಿಲ್ಲ, ಮುಖ್ಯಮಂತ್ರಿಗಳ ಬಜೆಟ್ ಭಾಷಣದಲ್ಲಿಯೂ ಉಲ್ಲೇಖವಿಲ್ಲ. ಸರ್ಕಾರದ ನಿರ್ಲಕ್ಷ್ಯತೆಗೆ ಮತ್ಯಾವ ಸಾಕ್ಷಿ ಬೇಕು? ಸರ್ಕಾರ ಜಾತಿ ಜನಗಣತಿಯ ಹೆಸರಿನಲ್ಲಿ ವೋಟಿನ ರಾಜಕೀಯ ಬಿಟ್ಟರೆ ಮತ್ತೇನು ಮಾಡಿಲ್ಲ. ಕೇಂದ್ರ ಸರ್ಕಾರವೇ ಅಧಿಕೃತವಾಗಿ ಜಾತಿ ಜನಗಣತಿಯ ಸಿದ್ಧತೆ, ಪ್ರಕ್ರಿಯೆ ಆರಂಭಿಸಿದ್ದು, ಆಮೂಲಕವೇ ಕರ್ನಾಟಕದ ಜನತೆ ಸಾಮಾಜಿಕ ನ್ಯಾಯ ಪಡೆದುಕೊಳ್ಳಬೇಕಾಗಿದೆ. ರಾಜ್ಯದ ಜನ ಅದರಲ್ಲೂ ವಿಶೇಷವಾಗಿ ಹಿಂದುಳಿದ ವರ್ಗಗಳು ರೋಸಿ ಹೋಗಿ, ರೊಚ್ಚಿಗೆದ್ದು ಬೀದಿಗಿಳಿಯುವ ದಿನ ದೂರವಿಲ್ಲ. ಸರ್ಕಾರ ಸಮೀಕ್ಷಾ ವರದಿ ಮಂಡನೆ ಮಾಡದಿದ್ದರೆ ಬಿಜೆಪಿ ಉಗ್ರವಾದ ಹೋರಾಟ ಮಾಡುವುದು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಎಸ್.ಪಿ. ಚಿದಾನಂದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಂಗಣ್ಣ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶಶಿಕಿರಣ್, ಮುಖಂಡ ನಂಜೇಗೌಡ, ವಕ್ತಾರ ಜೆ. ಜಗದೀಶ್ ಮೊದಲಾದವರು ಭಾಗವಹಿಸಿದ್ದರು.
