ತುಮಕೂರು: ಗ್ರಾಮೀಣ ಭಾಗದ ಜನರಿಗೆ ಸುಲಭ ರೀತಿ ಅಧಿಕ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವ ಮೈಕ್ರೋ ಫೈನಾನ್ಸ್‌ಗಳು ಸಾಲ ವಸೂಲಿಗೆ ಕಿರುಕುಳ ನೀಡುತ್ತಿವೆ. ಇದರಿಂದ ಗ್ರಾಮೀಣ ಭಾಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಹೆದರಿ ಜನರು ಗ್ರಾಮಗಳನ್ನೇ ತೊರೆಯುತ್ತಿದ್ದಾರೆ. ಮತ್ತೆ ಕೆಲವರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ.ಈ ಬಗ್ಗೆ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳದಿಂದ ಗ್ರಾಮೀಣ ಭಾಗದ ಜನರನ್ನು ಪಾರು ಮಾಡಬೇಕು. ಕೂಡಲೇ ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಕಠಿಣ ಕ್ರಮವಹಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಜಿಲ್ಲಾಧ್ಯಕ್ಷರಾದ ತಾಜುದ್ದೀನ್ ಷರೀಫ್ ಆಗ್ರಹಿಸಿದ್ದಾರೆ.
ಮಹಿಳೆಯರನ್ನು ಸ್ವಸಹಾಯ ಸಂಘಗಳು ಹೇಗೆ ಸಂಕಷ್ಟಕ್ಕೆ ಸಿಲುಕಿಸುತ್ತವೆ ಎಂಬುದನ್ನು ಖುದ್ದು ಹತ್ತಿರದಿಂದ ನೋಡಿದ್ದೇನೆ. ತುಂಬಾ ಆಮಿಷಗಳನ್ನು ಹೂಡುತ್ತಾರೆ. ಸುಳ್ಳು ಕನಸುಗಳನ್ನು ಬಿತ್ತುತ್ತಾರೆ. ಕುಟುಂಬದ ಪರಿಸ್ಥಿತಿಗೆ ಮಹಿಳೆ ಸಾಲ ಮಾಡುತ್ತಾಳೆ. ಇಂತಹ ಸಾಲದ ಸುಳಿಗೆ ಸಿಲುಕಿದ ಕುಟುಂಬವೊಂದು ತಮ್ಮ ಮಗುವನ್ನು ಅನಾಥವಾಗಿ ಬಿಟ್ಟು ಊರನ್ನೇ ಬಿಟ್ಟು ಹೋಗಿರುವ ಸಂಗತಿಗಳು ಸಾಕಷ್ಟು ನೋಡಿದ್ದೇನೆ. ಸಾಲಕ್ಕೆ ಬಡ್ಡಿಯಲ್ಲದೆ, ಚಕ್ರ ಬಡ್ಡಿ ಹಾಕುತ್ತಾರೆ. ಮೈಕ್ರೋ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆಯಬೇಡಿ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಪಡೆಯಿರಿ. ಜನರ ಜೀವ ಹಿಂಡುವ ಇಂತಹ ಕಂಪನಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ.

ಸರ್ಕಾರಗಳು ಯೋಜನೆಗಳ ಮೂಲಕ ಮಧ್ಯಮ ವರ್ಗದ ಜನರಿಗೆ ಆರ್ಥಿಕ ಸಹಾಯ ಮಾಡದೇ ಹೋದರೆ ಇಂತಹ ಶೋಷಣೆ, ಸಾವಿನ ಸರಣಿಗಳು ನಿಲ್ಲುವುದಿಲ್ಲ. ಬಡ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕಾಗಿ ಆರಂಭವಾದ ಮೈಕ್ರೋ ಫೈನಾನ್ಸ್ ಕಂಪನಿಗಳು ಪೀಡುಗಾಗಿ ಪರಿಣಮಿಸಿದೆ. ಹೆಣ್ಣು ಮಕ್ಕಳನ್ನು ಗುರಿಯಾಗಿಸಿ ಇವುಗಳು ಕೆಲಸ ಮಾಡುತ್ತಿವೆ. ಬೇಟಿ ಬಚಾವೋ, ಬೇಟಿ ಪಡಾವೋ ಅಂತ ಹೇಳಿದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಏನು ಮಾಡುತ್ತಿದ್ದಾರೆ. ಎಲ್ಲ ಬೇಟಿಗಳು ಇಲ್ಲಿ ಈ ಜಾಲದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಸರ್ಕಾರಗಳು ವಿಫಲವಾಗಿರುವ ಕಾರಣ ಜನರು ಖಾಸಗಿ ಕಂಪನಿಗಳ ಚಿನ್ನದ ಸಾಲ, ಫೈನಾನ್ಸ್ ಕಂಪನಿಗಳ ಸಾಲಗಳ ಮೇಲೆ ಅವಲಂಬಿತರಾಗುತ್ತಾರೆ. ಇದು ನಿಲ್ಲಬೇಕು ಎಂದು ಆಗ್ರಹಿಸಿದರು.