ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಅಪಾಯಕಾರಿಯಾಗಿ ವೀಲಿಂಗ್ ಮತ್ತು ಡ್ರ್ಯಾಗ್ ರೇಸಿಂಗ್, ರಸ್ತೆಯಲ್ಲಿ ಮೋಟಾರ್ ಸೈಕಲ್ ಮತ್ತು ಕಾರನ್ನು ಅಪಾಯಕಾರಿಯಾಗಿ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ಸಾರ್ವಜನಿಕರ ಸ್ಥಳಗಳಲ್ಲಿ ಹಾಗೂ ಸ್ವಂತ ಫಾರಂ ಹೌಸ್‌ಗಳಲ್ಲಿ ಸಂಬಂಧಪಟ್ಟ ಪ್ರಾಧಿಕಾರಿಗಳಿಂದ ಅನುಮತಿಯಿಲ್ಲದೆ ರೇವ್ ಪಾರ್ಟಿಗಳು, ಇತರೆ ಮೋಜು ಮಸ್ತಿ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಮದ್ಯಪಾನ ಮಾಡಿ ಕಾರು ಅಥವಾ ಮೋಟಾರು ಸೈಕಲನ್ನು ಚಾಲನೆ ಮಾಡಬಾರದು. ಹೊಸ ವರ್ಷಾಚರಣೆಯನ್ನು ಅಪಘಾತ ಮುಕ್ತವನ್ನಾಗಿ ಮತ್ತು ಸಾರ್ವಜನಿಕ ಸ್ನೇಹಿಯಾಗಿ ಆಚರಿಸುವಂತೆ ತಿಳಿಸಿದ್ದಾರೆ.
ನಗರದ ಪ್ರಮುಖ ಯಾತ್ರಾ ಸ್ಥಳಗಳಾಗಿರುವ ನಾಮದ ಚಿಲುಮೆ, ದೇವರಾಯದುರ್ಗ ಹಾಗೂ ಬಸದಿಬೆಟ್ಟದ ಸ್ಥಳಗಳು, ಸಂರಕ್ಷಿತ ಅರಣ್ಯ ಪ್ರದೇಶಗಳು ಅಪಘಾತ ವಲಯಗಳಾಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ಪ್ರದೇಶಗಳ ವ್ಯಾಪ್ತಿಯಲ್ಲಿ ಡಿ 31 ರಿಂದ ಜ. 2ರ ವರೆಗೆ ಪ್ರವೇಶ ನಿಷೇಧಿಸಲಾಗಿದೆ. ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲು ಪಿಕೇಟಿಂಗ್ ಪಾಯಿಂಟ್‌ಗಳನ್ನು ಹಾಕಲಾಗಿದೆ ಎಂದರು.