ತುಮಕೂರು: ಕೆಡಿಪಿ ಸಭೆಯಲ್ಲಿ ನಡೆದ ಚರ್ಚೆಯ ನಿರ್ಣಯದಂತೆ 2018-19 ರಿಂದ 2020-21ನೇ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಎಸ್.ಸಿ.ಪಿ/ಟಿ.ಎಸ್.ಪಿ. ಯೋಜನೆಯಡಿ ವಿತರಿಸಲಾಗುವ ಪ್ರವಾಸಿ ಟ್ಯಾಕ್ಸಿ ಸೌಲಭ್ಯಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡಲು ವಿಳಂಬ ಬೇಡ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿಂದು ಎಸ್.ಸಿ.ಪಿ/ಟಿ.ಎಸ್.ಪಿ. ಯೋಜನೆಗೆ ಸಂಬಂಧಿಸಿದಂತೆ ನಡೆದ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ವಿವಿಧ ಇಲಾಖೆಗಳು ಎಸ್.ಸಿ.ಪಿ/ಟಿ.ಎಸ್.ಪಿ. ಯೋಜನೆಯಡಿ ಸಾಧಿಸಲಾಗಿರುವ ಆರ್ಥಿಕ/ ಭೌತಿಕ ಗುರಿ, ಫಲಾನುಭವಿಗಳ ವಿವರ ಸೇರಿದಂತೆ ಇತರೆ ಮಾಹಿತಿಗಳನ್ನು ನಿಗಧಿತ ಸಮಯದೊಳಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿದರು.
ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಬಿಡುಗಡೆಯಾಗಿರುವ ಅನುದಾನವನ್ನು ಸಕಾಲಕ್ಕೆ ಸದ್ಬಳಕೆ ಮಾಡಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ವಸತಿ ಯೋಜನೆಯಡಿ ಈಗಾಗಲೇ ಅಲೆಮಾರಿ ಜನಾಂಗದವರಿಗೆ ಹಂಚಿಕೆಯಾಗಿರುವ ನಿವೇಶನದಲ್ಲಿ ಶೀಘ್ರವಾಗಿ ಮನೆ ನಿರ್ಮಾಣ ಕೈಗೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದರಲ್ಲದೆ, ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪೂರ್ವ ಪರಿಶೀಲನೆ ಕೈಗೊಂಡು ನಿಗಮದ ಅಧಿಕಾರಿಗಳಿಗೆ ರೂಪು-ರೇಷೆಗಳನ್ನು ನೀಡಬೇಕು ಎಂದರು.
ಪರಿಶಿಷ್ಟ ಜಾತಿ/ವರ್ಗದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಯೋಜನೆಯ ಎಸ್.ಸಿ.ಪಿ/ಟಿ.ಎಸ್.ಪಿ. ಯೋಜನೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಐದು ಎಕರೆಗಿಂತ ಕಡಿಮೆ ಕೃಷಿ ಜಮೀನು ಹೊಂದಿರುವ ರೈತರನ್ನು ಗುರುತಿಸಿ ವರ್ಷಾಂತ್ಯದೊಳಗೆ ಅನುದಾನದ ಸದ್ಬಳಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಹಾಗೂ ತೋಟಗಾರಿಕಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಅಜಯ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಪರಿಶಿಷ್ಟ ವರ್ಗ ಕಲ್ಯಾಣಾಧಿಕಾರಿ ತ್ಯಾಗರಾಜ್, ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಇದಕ್ಕೂ ಮುನ್ನ ಶುಕ್ರವಾರ ಹೃದಯಾಘಾತದಿಂದ ನಿಧನ ಹೊಂದಿದ ನಾಯಕ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು.