ತುಮಕೂರು: ಗ್ರಾಮೀಣ ವಿದ್ಯಾರ್ಥಿಗಳು ವಿಜ್ಞಾನ ಕೋರ್ಸ್ಗಳಿಗೆ ಸೇರಲು ಹಿಂಜರಿಯಬಾರದು ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ: ಬಾಲಗುರುಮೂರ್ತಿ ಕರೆ ನೀಡಿದರು.
ನಗರದ ಎಂಪ್ರೆಸ್ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ೨ ದಿನಗಳ ಸಿಇಟಿ, ನೀಟ್ತ ರಬೇತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಾಹಿತಿ ಕೊರತೆ ಕಾರಣದಿಂದಾಗಿ ಬಹುತೇಕ ಗ್ರಾಮೀಣ ವಿದ್ಯಾರ್ಥಿಗಳು ವಿಜ್ಞಾನದ ಕೋರ್ಸುಗಳಿಗೆ ಸೇರಲು ಹಿಂದೇಟು ಹಾಕುವಂತಾಗಿದೆ. ಇದನ್ನು ಹೋಗಲಾಡಿಸಲು ಜಿಲ್ಲೆಯಾದ್ಯಂತ ವಿಜ್ಞಾನ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಿಂದ ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಗ್ರಾಮೀಣ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಕೀಳರಿಮೆ ಬೆಳೆಸಿಕೊಳ್ಳದೇ ಸಿಕ್ಕ ಶೈಕ್ಷಣಿಕ ಅವಕಾಶಗಳನ್ನು ಆತ್ಮವಿಶ್ವಾಸದಿಂದ ಬಳಸಿಕೊಂಡು ಯಶಸ್ಸು ಸಾಧಿಸಬೇಕು. ಅವಕಾಶ ಇದ್ದವರು ಉನ್ನತ ಶಿಕ್ಷಣ ಗಳಿಸುವುದು ಮುಖ್ಯವಲ್ಲ. ಬದಲಾಗಿ ಅವಕಾಶ ವಂಚಿತರು ಛಲದಿಂದ ಉನ್ನತ ಶಿಕ್ಷಣ ಗಳಿಸುವುದು ಮುಖ್ಯ ಎಂದರಲ್ಲದೆ, ಬರುವ ಫೆಬ್ರವರಿ ತಿಂಗಳಲ್ಲಿ ಸರ್ಕಾರಿ ಹಾಗೂ ಅನುದಾನಿತ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ ೧೦ ದಿನಗಳ ಕಾಲ ಕೋರ್ಸ್ ನಡೆಸಲು ಉದ್ದೇಶಿಸಲಾಗಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು
ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ರವಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಈ ತರಬೇತಿಯನ್ನು ಆಯೋಜಿಸಲಾಗಿದೆ. ತರಬೇತಿಯಲ್ಲಿ ವಿಜ್ಞಾನ ವಿದ್ಯಾರ್ಥಿಗಳಿಗೆ ಲಭ್ಯವಿರುವ ಕೋರ್ಸುಗಳು, ಪರೀಕ್ಷೆಗೆ ಅರ್ಜಿ ತುಂಬುವ ವಿಧಾನ, ಸಿದ್ಧತೆ ಹಾಗೂ ತಯಾರಿ ಕುರಿತು ಸುದೀರ್ಘ
ಮಾಹಿತಿ ನೀಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಕುಣಿಗಲ್, ತುರುವೇಕೆರೆ, ತಿಪಟೂರು, ಚಿಕ್ಕಕನಾಯಕನಹಳ್ಳಿ, ನಗರದ ಎಂಪ್ರೆಸ್ ಕಾಲೇಜು ಸೇರಿದಂತೆ ಸಾವಿರಕ್ಕೂ ಹೆಚ್ಚು ಪಿಯು ವಿದ್ಯಾರ್ಥಿಗಳು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಉತ್ಸುಕತೆಯಿಂದ
ಭಾಗವಹಿಸಿ ಪ್ರಯೋಜನ ಪಡೆದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ. ಪ್ರಭಾಕರ ರೆಡ್ಡಿ, ಪ್ರಾಂಶುಪಾಲರಾದ ಮಲಪ್ಪ,
ಶಿವಕುಮಾರ್, ನಾಗರಾಜು ಸಿ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.