ತುಮಕೂರು : ಸುಪ್ರಸಿದ್ಧ ದೇವರಾಯನದುರ್ಗ ದೇವಸ್ಥಾನದಲ್ಲಿ ಹೊಸ ವರ್ಷದ ಮೊದಲ ದಿನ (ಬುಧವಾರ) ಲಕ್ಷ್ಮೀನರಸಿಂಹಸ್ವಾಮಿ ಮತ್ತು ಭೋಗನರಸಿಂಹಸ್ವಾಮಿ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲು ಜಿಲ್ಲಾ ಆಡಳಿತ ಸಮ್ಮತಿ ನೀಡಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ ಗೌಡರು ತಿಳಿಸಿದ್ದಾರೆ.
ಬೆಟ್ಟದ ಮೇಲೆ ಅಹಿತಕರ ಘಟನೆ ನಡೆಯಬಾರದು ಎಂದು ಹೊಸ ವರ್ಷದ ಮುನ್ನಾ ದಿನದಿಂದ ಮೂರು ದಿನಗಳ ಕಾಲ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಿ ಸಿಆರ್‌ಪಿಸಿ ೧೪೪ ನೇ ಕಲಮಿನ ಅನುಸಾರ ಜಿಲ್ಲಾ ಆಡಳಿತ ಆದೇಶ ಇದುವರೆಗೆ ಹೊರಡಿಸುತ್ತಿತ್ತು. ಮಂಗಳವಾರ ಬೆಟ್ಟಕ್ಕೆ ಹೋಗಿದ್ದ ಶಾಸಕರು ಈ ಆದೇಶವನ್ನು ಗಮನಿಸಿದರು.
ʼಹೊಸ ವರ್ಷದ ಮೊದಲ ದಿನ ಭಕ್ತರು ದೇವರ ದರ್ಶನ ಮಾಡುವುದು ಸಾಮಾನ್ಯ ಸಂಗತಿ. ರಾತ್ರಿ ವೇಳೆಯಲ್ಲಿ ಪುಂಡು ಪೋಕರಿಗಳು ಗಲಾಟೆ ಮಾಡುತ್ತಾರೆ ಎಂದು ಬೆಟ್ಟದ ಮೇಲೆ ಹೋಗಲು ಹಿಂದಿನ ರಾತ್ರಿ ನಿಷೇಧ ಹೇರುವುದು ಸರಿ. ಆದರೆ, ಹಗಲು ವೇಳೆಯಲ್ಲಿ ಅದೂ ಎರಡು ದಿನಗಳ ಕಾಲ ನಿಷೇಧಿಸಬೇಕಾದ ಅಗತ್ಯವಿಲ್ಲʼ ಎಂದು ಶಾಸಕರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಮನವರಿಕೆ ಮಾಡಿಕೊಟ್ಟರು.
ʻಹಿಂದಿನಿಂದ ಇದೇ ರೀತಿ ಆದೇಶ ಹೊರಡಿಸಿಕೊಂಡು ಬಂದಿರುವುದರಿಂದ ಈ ಸಾರಿಯೂ ಹಾಗೆಯೇ ಆದಂತೆ ಕಾಣುತ್ತದೆʼ ಎಂದು ಅಭಿಪ್ರಾಯಪಟ್ಟ ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠರ ಜತೆ ಚರ್ಚಿಸಿ ಆ ನಿರ್ಬಂಧವನ್ನು ಹಿಂತೆಗೆದುಕೊಳ್ಳಲು ಹೇಳುವುದಾಗಿ ಶಾಸಕರಿಗೆ ತಿಳಿಸಿದರು. ಅದೇ ರೀತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ.ವಿ.ಅಶೋಕ್ ವೆಂಕಟ್ ಅವರು ಶಾಸಕರ ಸಲಹೆಗೆ ಸ್ಪಂದಿಸಿ ನಿರ್ಬಂಧದ ಆದೇಶವನ್ನು ವಾಪಸು ತೆಗೆದುಕೊಂಡು ಭಕ್ತರ ಪ್ರವೇಶಕ್ಕೆ ಅವಕಾಸ ಕಲ್ಪಿಸುವುದಾಗಿ ತಿಳಿಸಿದರು.
ತಮ್ಮ ಸೂಚನೆಗೆ ತಕ್ಷಣ ಸ್ಪಂದಿಸಿ ದೇವರಾಯನದುರ್ಗ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಅನುಮತಿಸಿದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠರಿಗೆ ಶಾಸಕರು ಅಭಿನಂದನೆ ಸಲ್ಲಿಸಿದ್ದಾರೆ.