ಬಡವರಿಗೆ ಸಹಕಾರ ನೀಡಿ: ಇಕ್ಬಾಲ್ ಅಹಮದ್
ತುಮಕೂರು: ನಗರದ ಟಿಪ್ಪು ನಗರ ಬಡಾವಣೆಯಲ್ಲಿ ಖಾನ್‍ಖಾಯೆ ಇಮಾಮೇ ಹುಸೇನ್‍ನಲ್ಲಿ ಹಜರತ್ ಅಲಿ ರವರ ಹುಟ್ಟುಹಬ್ಬ ಆಚರಣೆಯನ್ನು ಖಾನ್‍ಖಾಹಾ ಅಧ್ಯಕ್ಷರಾದ ಇಸ್ಮಾಯಿಲ್ ಶಾ ಖಾದ್ರಿ ಅಲ್‍ವಾಸಿಲಿ ದಖ್‍ನವಿ ಉರುಫ್ ಅಪ್ಸರ್ ಹಜರತ್‍ರವರ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಆಚರಿಸಿದರು.
ತಮ್ಮ ಖಲೀಫರವರೊಂದಿಗೆ ವಿಜೃಂಭಣೆಯಿಂದ ಹಜರತ್ ಅಲಿರವರ ಹುಟ್ಟುಹಬ್ಬವನ್ನು ಸಾಮೂಹಿಕ ಕುರಾನ್ ಪಠಣೆ ಮಾಡಿಸಿ, ಫತೇಹಾ ಮೂಲಕ ಅನ್ನಸಂತರ್ಪಣೆಯನ್ನು ಮಾಡಲಾಯಿತು.
ಈ ವೇಳೆ ಮಾತನಾಡಿದ ಅಪ್ಸರ್ ಹಜರತ್‍ರವರು, ಕೋವಿಡ್ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಅವರು, ನಗರದ 75 ಸಾವಿರಕ್ಕೂ ಹೆಚ್ಚು ಜನರಿಗೆ ಪಡಿತರ ನೀಡುವುದರೊಂದಿಗೆ ಫೀವರ್ ಕ್ಲಿನಿಕ್ ಪ್ರಾರಂಭಿಸುವ ಮೂಲಕ ಇಪ್ಪತ್ತು ಸಾವಿರ ಜನರಿಗೆ ಉಚಿತ ಸೇವೆಯನ್ನು ನೀಡುವ ಮೂಲಕ ಜನಾನುರಾಗಿಯಾಗಿ ಹೊರಹೊಮ್ಮಿದ್ದಾರೆ ಎಂದರು.
ಕೋವಿಡ್ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಜನರು ತೊಂದರೆ ಪಡುತ್ತಿರುವುದನ್ನು ಗಮನಿಸಿ, ಸ್ವಂತ ಕಟ್ಟಡದಲ್ಲಿ 20 ಆಮ್ಲಜನಕ ಹಾಸಿಗೆಯ ಆಸ್ಪತ್ರೆಯನ್ನು ನಿರ್ಮಿಸಿ, ಜಿಲ್ಲಾಡಳಿತಕ್ಕೆ ಕೊಡುಗೆಯಾಗಿ ನೀಡಿದ್ದು, ಈ ಭಾಗದಲ್ಲಿನ ಜನರಿಗೆ ಇಕ್ಬಾಲ್ ಅಹಮದ್ ಅವರು ಮಾಡಿದ ಫೀವರ್ ಕ್ಲಿನಿಕ್ ವರದಾನವಾಗಿ ಪರಿಣಮಿಸಿದೆ ಎಂದು ಅವರ ಸೇವೆಯನ್ನು ಶ್ಲಾಘಿಸಿದರು.
ರಾಜಕೀಯ ಆಸೆ ಆಮಿಷಗಳಿಗೆ ಒಳಗಾಗದೇ ಜನರ ಸೇವೆಯಲ್ಲಿ ನಿರತವಾಗಿರುವ ಇಕ್ಬಾಲ್ ಅಹಮದ್ ಅವರು, ತಮ್ಮ ಅಧಿಕಾರವಧಿಯಲ್ಲಿ ಯಾವುದೇ ತಾರತಮ್ಯವನ್ನು ಮಾಡದೇ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ಇಕ್ಬಾಲ್ ಅಹಮದ್ ಅವರಿಗೆ ಉತ್ತಮ ರಾಜಕೀಯ ಭವಿಷ್ಯ ದೊರೆಯುವಂತಾಗಲಿ ಎಂದು ಆಶಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಇಕ್ಬಾಲ್ ಅಹಮದ್ ಅವರು, ಖಾನ್‍ಖಾಯೆ ಇಮಾಮೇ ಹುಸೇನ್ ಮೂಲಕ ನನಗೆ ಅಭಿನಂದನೆ ಸಲ್ಲಿಸಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸುವಂತೆ ಮಾಡಿದೆ, ಮುಂದಿನ ದಿನಗಳಲ್ಲಿ ಅವಕಾಶ ದೊರತರೆ ಉತ್ತಮ ಸೇವೆಯನ್ನು ನೀಡಲು ಎಲ್ಲರು ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯರು ಎಂ.ಪಿ ಮಹೇಶ್, ನದೀಮ್ ಚಿಚ, ಫಯಾಜ್ ಅಹ್ಮದ್ ಶರೀಫ್ ಹಾಗೂ ವಕ್ಫ್ ಮಾಜಿ ಉಪಾಧ್ಯಕ್ಷ ಅಕ್ರಂಪಾಷ, ಜೆಡಿಎಸ್ ಮುಖಂಡ ಸೈಯದ್ ಫಯಾಜ್, ಸಮಾಜ ಸೇವಕರಾದ ಶಂಶೀರ್ ಶಾ ಖಾದ್ರಿ, ಮುಹಮ್ಮದ್ ಇಸ್ಮಾಯಿಲ್ ಮತ್ತು ಇತರರು ಉಪಸ್ಥಿತರಿದ್ದರು.