ತುಮಕೂರು- ಹೈಕೋರ್ಟ್ ಸೂಚನೆ ಮೇರೆಗೆ ಇಂದಿನಿಂದ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳನ್ನು ಆರಂಭಿಸಲಾಗಿರುವ ಮೊದಲ ದಿನವೇ ನಗರದಲ್ಲಿ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ಮುಂಭಾಗ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್‍ಗೆ ಅನುಮತಿ ನೀಡುವಂತೆ ಪಟ್ಟು ಹಿಡಿದ ಘಟನೆ ನಡೆದಿದೆ.
ನಗರದ ಟೌನ್‍ಹಾಲ್ ಸಮೀಪ ಅಶೋಕ ರಸ್ತೆಯಲ್ಲಿರುವ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ಕಾಲೇಜಿಗೆ ಸುಮಾರು 40 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು, ಕಾಲೇಜಿನ ಮುಂಭಾಗದಲ್ಲೇ ಭದ್ರತಾ ಕಾರ್ಯದಲ್ಲಿ ತೊಡಗಿದ್ದ ಪೆÇಲೀಸರು ವಿದ್ಯಾರ್ಥಿನಿಯರನ್ನು ತಡೆದು ಹಿಜಾಬ್ ತೆಗೆದು ಕಾಲೇಜು ಒಳಗೆ ಹೋಗುವಂತೆ ಸೂಚಿಸಿದರು.ಆದರೆ ವಿದ್ಯಾರ್ಥಿನಿಯರು ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯುವುದಿಲ್ಲ. ನಮಗೆ ಹಿಜಾಬ್ ಧರಿಸಿಯೇ ತರಗತಿ ಒಳಗೆ ಹೋಗಲು ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆಗೆ ಮುಂದಾದರು.ಆಗ ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದ ಪೆÇಲೀಸರು ವಿದ್ಯಾರ್ಥಿನಿಯರಿಗೆ ಶಾಲಾ-ಕಾಲೇಜುಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ರೀತಿ ಗಲಾಟೆ ಮಾಡಬಾರದು. ಪಾಠ ಕೇಳುವುದಾದರೆ ಮೊದಲಿನಂತೆ ಕಾಲೇಜು ಗೇಟ್ ಹೊರಗೆ ಹಿಜಾಬ್ ತೆಗೆದು ಒಳ ಪ್ರವೇಶಿಸಬಹುದು ಎಂದು ತಿಳಿ ಹೇಳಿದರು.
ಆದರೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ನಮಗೆ ಹಿಜಾಬ್ ಧರಿಸಿ ಪಾಠ ಕೇಳಲು ಅನುಮತಿ ನೀಡಲೇಬೇಕು ಎಂದು ಪಟ್ಟು ಹಿಡಿದರು.ಆಗ ಡಿವೈಎಸ್ಪಿ ಶ್ರೀನಿವಾಸ್ ಅವರು ಕಾಲೇಜಿನ ಪ್ರಾಂಶುಪಾಲರು ಬಂದು ನಿಮಗೆ ತಿಳಿ ಹೇಳುತ್ತಾರೆ ಎಂದು ತಿಳಿಸಿ, ಪ್ರಾಂಶುಪಾಲರನ್ನು ಸ್ಥಳಕ್ಕೆ ಕರೆಸಿದರು.ಸ್ಥಳಕ್ಕೆ ಬಂದ ಕಾಲೇಜಿನ ಪ್ರಾಂಶುಪಾಲರು, ಹೈಕೋರ್ಟ್ ಆದೇಶವಿದೆ, ಎಂದಿನಂತೆ ಕಾಲೇಜಿನ ಗೇಟ್ ಒಳ ಭಾಗದಲ್ಲೇ ಹಿಜಾಬ್ ತೆಗೆದು ತರಗತಿಗಳಿಗೆ ಬಂದು ಪಾಠ ಕೇಳಿ ಎಂದು ವಿದ್ಯಾರ್ಥಿನಿಯರ ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ಆದರೆ ವಿದ್ಯಾರ್ಥಿನಿಯರು ನಮಗೆ ಪಾಠವೂ ಬೇಕು, ಹಿಜಾಬ್ ಬೇಕು ಎಂದು ಪಟ್ಟು ಮತ್ತೊಮ್ಮೆ ಪಟ್ಟು ಹಿಡಿಯುವ ಮೂಲಕ ಕಾಲೇಜು ಮುಂದೆ ಹೈಡ್ರಾಮಾ ನಡೆಸಿ, ಹಿಜಾಬ್ ಇಲ್ಲದೆ ನಾವು ಒಳಗೆ ಬರುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಪೆÇಲೀಸರು ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಕಾಲೇಜು ಮುಂಭಾಗ ರೀತಿ ಸೇರಬಾರದು.
ದೂರ ಹೋಗುವಂತೆ ಸೂಚಿಸಿದಾಗ ವಿದ್ಯಾರ್ಥಿನಿಯರು ಟೌನ್‍ಹಾಲ್ ತೆರಳುತ್ತಾ ಅಲ್ಲಾ ಹು ಅಕ್ಬರ್ ಅಂತ ಘೋಷಣೆ ಕೂಗಿದರು. ಜತೆಗೆ ನಮಗೆ ನ್ಯಾಯ ಬೇಕು ಎಂದು ಕೂಗುತ್ತಾ ಟೌನ್‍ಹಾಲ್ ಸಮೀಪ ಜಮಾಯಿಸಿದರು. ನಂತರ ಘೋಷಣೆ ಕೂಗೂತ್ತಾ ತೆರಳಿದ ವಿದ್ಯಾರ್ಥಿನಿಯರು ಹಿಜಾಬ್‍ಗೆ ಅನುಮತಿ ನೀಡುವಂತೆ ಆಗ್ರಹಿಸಿದರು.ಇದಾದ ಬಳಿಕ ತಹಶೀಲ್ದಾರ್ ಮೋಹನ್‍ಕುಮಾರ್ ಮತ್ತು ಪಾಲಿಕೆ ಸದಸ್ಯ ನಯಾಜ್ ಅಹಮದ್ ಅವರು ಕಾಲೇಜು ಬಳಿ ಆಗಮಿಸಿ ವಿದ್ಯಾರ್ಥಿನಿಯರ ಮನವೊಲಿಸಲು ಯತ್ನಿಸಿದರು. ತದ ನಂತರ 40 ವಿದ್ಯಾರ್ಥಿನಿಯರ ಪೈಕಿ ಐವರು ವಿದ್ಯಾರ್ಥಿನಿಯರ ಪೋಷಕರು ಕಾಲೇಜು ಬಳಿ ಬಂದು ತಮ್ಮ ಮಕ್ಕಳಿಗೆ ತರಗತಿಗೆ ಹಾಜರಾಗುವಂತೆ ಹೇಳಿದರು. ಆಗ ಐವರು ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಹಾಜರಾದರು.ಇದೇ ರೀತಿ ನಗರದ ವಿವಿಧ ಖಾಸಗಿ ಕಾಲೇಜುಗಳ ಬಳಿಯೂ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ತರಗತಿ ಪ್ರವೇಶಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ತರಗತಿಗೆ ಹಾಜರಾಗದೆ ಮನೆಗಳತ್ತ ತೆರಳುತ್ತಿದ್ದ ದೃಶ್ಯಗಳು ಕಂಡು ಬಂದವು.ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ಸೇರಿದಂತೆ ನಗರದ ವಿವಿಧ ಕಾಲೇಜುಗಳ ಮುಂದೆ ಮುನ್ನೆಚ್ಚರಿಕೆ ಕ್ರಮವಾಗಿ ಡಿವೈಎಸ್ಪಿ ಶ್ರೀನಿವಾಸ್ ನೇತೃತ್ವದಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.