breaking news

Public is troubled by the poor work of Smart City – Ex MLA Rafeeq Ahmed

Public is troubled by the poor work of Smart City – Ex MLA Rafeeq Ahmed

ತುಮಕೂರು: ನಗರದ ಬಹುತೇಕ ಪ್ರದೇಶದ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು. ಕೆಸರುಗದ್ದೆಯಂತಾಗಿರುವ ಈ ರಸ್ತೆಗುಂಡಿಗಳು ಬಲಿಗಾಗಿ ಕಾಯ್ದು ಕುಳಿತಿರುವ ಮೃತ್ಯುಕೂಪದಂತಿವೆ. ರಸ್ತೆಗಳ ಮಧ್ಯೆ ಗುಂಡಿಗಳಿವೆಯೋ ಅಥವಾ ಗುಂಡಿಗಳ ಮಧ್ಯೆ ರಸ್ತೆಗಳಿವೆಯೋ ಎನ್ನುವ ಸ್ಥಿತಿಯಲ್ಲಿದೆ. ಆದರೂ ಕೂಡ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿಲ್ಲ. ಈ ಗುಂಡಿಗಳು ಸ್ಮಾರ್ಟ್ ಸಿಟಿ ತುಮಕೂರು ಎಂಬ ಹೆಸರನ್ನೇ ಅಣಕಿಸುವಂತಿವೆ ಎಂದು ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ತಿಳಿಸಿದ್ದಾರೆ.


ದಿನಬೆಳಗಾದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದೇ ರಸ್ತೆಗಳಲ್ಲಿ ಸಂಚರಿಸುತ್ತಾರೆ ಆದರೆ ಈ ವೇಳೆ ಇವರೆಲ್ಲಾ ಕಣ್ಣುಮುಚ್ಚಿ ಓಡಾಡುತ್ತಾರೆಯೇ, ಪ್ರಯಾಣಿಕರ ಪಾಡು ಇವರಿಗೆ ಕಾಣುತ್ತಿಲ್ಲವೇ ಎಂದು ಮಾಜಿ ಶಾಸಕರು ಪ್ರಶ್ನಿಸಿದ್ದಾರೆ. ಹಾಗೂ ನಗರದ ಹಲವೆಡೆ ರಸ್ತೆಗಳಲ್ಲಿರುವ ಗುಂಡಿಗಳ ಸಾಕ್ಷ್ಯಚಿತ್ರ ಸಂಗ್ರಹಿಸಿರುವ ಡಾ.ರಫೀಕ್ ಅಹ್ಮದ್ ರವರು ಪತ್ರಿಕೆಗೆ ನೀಡಿ ಈ ಮೂಲಕವಾದರು ಅಧಿಕಾರಿಗಳ ಕಣ್ತೆರೆಯುವಂತಾಗಲಿ ಎಂದು ನುಡಿದಿದ್ದಾರೆ.


ಈಗ ಮಳೆಗಾಲವಾದ್ದರಿಂದ ರಸ್ತೆಗಳ ಮೇಲೆ ನೀರು ನಿಂತು ಗುಂಡಿಗಳು ಕಾಣದೆ ದ್ವಿಚಕ್ರವಾಹನ ಸವಾರರು ಅಪಘಾತಕ್ಕೊಳಗಾಗುತ್ತಿದ್ದಾರೆ. ರಸ್ತೆಗುಂಡಿಗಳನ್ನು ತಪ್ಪಿಸಲು ಹೋಗಿ ಆಯತಪ್ಪಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಪ್ರಾಣಹಾನಿಯಾಗುವ ಸಂಭವವೇ ಹೆಚ್ಚು. ರಸ್ತೆ ಅಪಘಾತವಾಗುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚತ್ತು ಕೂಡಲೇ ರಸ್ತೆಗಳ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅವಕಾಶ ಮಾಡುವಂತೆ ಮಾಜಿ ಶಾಸಕ ರಫೀಕ್ ಅಹ್ಮದ್ ಆಗ್ರಹಿಸಿದ್ದಾರೆ.

Share this post

About the author

Leave a Reply

Your email address will not be published. Required fields are marked *