ಸಂವಿಧಾನ ಸರ್ವರಿಗೂ ನ್ಯಾಯ ಪಡೆಯುವ ಹಕ್ಕು ಕಲ್ಪಿಸಿದೆ: ನ್ಯಾಯಮೂರ್ತಿ ಬಿ.ವೀರಪ್ಪ
ತುಮಕೂರು: ಭಾರತ ಸಂವಿಧಾನವು ಸರ್ವರಿಗೂ ನ್ಯಾಯ ಪಡೆಯುವ ಹಕ್ಕನ್ನು ಕಲ್ಪಿಸಿದ್ದು, ತಾರತಮ್ಯಕ್ಕೆ ಒಳಗಾಗದೇ ನ್ಯಾಯ ಒದಗಿಸಲು ಕಾನೂನಿನ ಅರಿವು ಮತ್ತು ನೆರವಿನ ಅಗತ್ಯವಿದೆ ಎಂದು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ಬಿ.ವೀರಪ್ಪ ಅವರು ಪ್ರತಿಪಾದಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೆÇೀಲಿಸ್, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಭಾರತದ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ನಗರದ ಗಾಜಿನ ಮನೆಯಲ್ಲಿಂದು ಜರುಗಿದ ಪ್ಯಾನ್ ಇಂಡಿಯಾ ಕಾನೂನು ಅರಿವು ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನವು ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ದೊರಕಿಸಿದೆ. ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಹಾಗೂ ಉಪಾಸನೆಯ ಸ್ವಾತಂತ್ರ್ಯವನ್ನು ನೀಡಿದೆ. ಸರ್ವರಿಗೂ ಸಮಾನ ಅವಕಾಶ, ಸ್ಥಾನಮಾನಗಳನ್ನು ಕಲ್ಪಿಸಿದೆ. ವ್ಯಕ್ತಿ ಗೌರವ ಮತ್ತು ಸಹೋದರತೆಯನ್ನು ಬೆಳೆಸಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡ ತಲೆ ಎತ್ತಿ ನಡೆಯುವ ಅವಕಾಶ ಕಲ್ಪಿಸಿದ್ದು, ಈ ನಿಟ್ಟಿನಲ್ಲಿ ನ್ಯಾಯದಾನ ಪ್ರತಿಯೊಬ್ಬರಿಗೂ ತಲುಪಲು ಹಳ್ಳಿ-ಹಳ್ಳಿಯಲ್ಲಿಯೂ ಕಾನೂನು ಅರಿವು ಮೂಡಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ನುಡಿದರು.
ನ್ಯಾಯಾಂಗವು ದೇಶದ ಒಳಗಡೆ ನಡೆಯುವ ಅನ್ಯಾಯ, ಅಕ್ರಮ, ದಬ್ಬಾಳಿಕೆ ಸರಿಪಡಿಸಲು ಕಾರ್ಯನಿರ್ವಹಿಸುತ್ತಿರುವ ಜೊತೆ ಜೊತೆಗೆ ಸರ್ವರಿಗೂ ನ್ಯಾಯದಾನ ದೊರಕಿಸಲು ಕಾನೂನು ಅರಿವು ಮೂಡಿಸುತ್ತಿದೆ ಎಂದರು.
ಸರ್ವರಿಗೂ ನ್ಯಾಯ ದೊರಕಬೇಕು ಎಂಬ ನಿಟ್ಟಿನಲ್ಲಿ ಪ್ರಕರಣಗಳ ಇತ್ಯರ್ಥಕ್ಕಾಗಿ ಲೋಕ ಅದಾಲತ್ ಅನ್ನು ನಡೆಸಲಾಗುತ್ತಿದ್ದು, ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಲೋಕ್ ಅದಾಲತ್ ಕಾರ್ಯದಲ್ಲಿ ತುಮಕೂರು ಜಿಲ್ಲೆ ನಾಲ್ಕು ಬಾರಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ದೇಶದಲ್ಲಿ ಶಿಕ್ಷಿತರಿದ್ದರೂ ಕಾನೂನಿನ ಅರಿವಿಲ್ಲ. ಹಾಗಾಗಿಯೇ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಕಾನೂನು ಸೇವಾ ಪ್ರಾಧಿಕಾರದಿಂದ ನ್ಯಾಯ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಹಣ, ಅಧಿಕಾರದ ವ್ಯಾಮೋಹಕ್ಕಾಗಿ ಮಕ್ಕಳಿಂದ ದೂರಾಗುವ ಮತ್ತು ಅವರಿಂದ ತೊಂದರೆಗೊಳಗಾಗುವ ಪೆÇೀಷಕರ ರಕ್ಷಣೆಗಾಗಿ ಹಿರಿಯ ನಾಗರಿಕರ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಮಕ್ಕಳು ಹೆತ್ತವರನ್ನು ನೋಡಿಕೊಳ್ಳದಿದ್ದರೆ ಪೆÇೀಷಕರೇ ತಮ್ಮ ಆಸ್ತಿಯನ್ನು ಪಡೆದುಕೊಳ್ಳಬಹುದಾಗಿದ್ದು, ಹಿರಿಯ ನಾಗರಿಕರು ಈ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗುವ, ಹೆಣ್ಣು ಮಕ್ಕಳ ಮೇಲೆ ಆಸಿಡ್ ದಾಳಿ ಮಾಡುವವರನ್ನು ಗಲ್ಲಿಗೇರಿಸಬೇಕು ಎಂದು ಭಾರತ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದ ನ್ಯಾಯಮೂರ್ತಿಗಳು ಸಮಸ್ಯೆಗಳನ್ನು ಎದುರಿಸುವ ಧೈರ್ಯ ಬೇಕಾದರೆ ಕಾನೂನು ಅರಿವು ಪಡೆಯುವುದು ಅವಶ್ಯಕವಾಗಿದೆ ಎಂದು ಕಿವಿ ಮಾತನ್ನು ಹೇಳಿದರು.
ಚಲನಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆಯ ನಂತರ ಕಾನೂನು ಸೇವಾ ಪ್ರಾಧಿಕಾರದ ಬಗ್ಗೆ ಮಾಹಿತಿ ಪ್ರಸಾರ ಮಾಡಬೇಕು ಎಂದರಲ್ಲದೆ, ಭಾರತದ ಆಡಳಿತ ವ್ಯವಸ್ಥೆಯಲ್ಲಿ ಜೀವಂತವಾಗಿರುವ ನ್ಯಾಯಾಂಗ ಮತ್ತು ಮಾಧ್ಯಮಗಳು ಪೂರಕವಾಗಿ ಕಾರ್ಯನಿರ್ವಹಿಸಿದರೆ ಕಾನೂನಿನ ಅರಿವು ಮೂಡಿಸಬಹುದು ಎಂದು ಹೇಳಿದರು.
ಕಾನೂನಿನ ಅರಿವು ಮೂಡಿಸುವಲ್ಲಿ ಮಾಧ್ಯಮದ ಪಾತ್ರವೂ ಬಹು ಮುಖ್ಯವಾಗಿದೆ. ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾಧ್ಯಮ ರಂಗ ನ್ಯಾಯಾಂಗದ ಜೊತೆಗೆ ಕೈ ಜೋಡಿಸಿ ದಮನಿತರ ರಕ್ಷಣೆಗೆ ಮುಂದಾಗಬೇಕು. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಕಾನೂನು ಅರಿವು ಕುರಿತ ಸುದ್ದಿಗಳನ್ನು ಬಿತ್ತರಿಸಿ ಜನರಿಗೆ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಬೇಕು. ಕಾನೂನಿಗೆ ಸಂಬಂಧಿಸಿದಂತೆ ಚರ್ಚೆ ಮತ್ತು ವಕೀಲರ ಸಂದರ್ಶನಗಳನ್ನು ಮಾಡಿ ದಮನಿತರ, ಶೋಷಿತರ ನೆರವಿಗೆ ಮುಂದಾಗಬೇಕು. ಇದರಿಂದ ಜನರಿಗೆ ಕಾನೂನು ಅರಿವು ಮೂಡಲಿದೆ ಎಂದರು.
ಮತ್ತೋರ್ವರಾದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಜಿ.ನರೇಂದರ್ ಮಾತನಾಡಿ, ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ವಸ್ತು ಪ್ರದರ್ಶನ ಏರ್ಪಡಿಸಿರುವುದು ಉತ್ತಮ ಹಾಗೂ ಶ್ಲಾಘನೀಯ ಎಂದು ವ್ಯಕ್ತಪಡಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಲೀಗಲ್ ಸರ್ವೀಸ್ ಕೆಡೆಟ್ ಕಾಪ್ಸ್ ಸ್ವಯಂ ಸೇವಕರ ಹಾಗೂ ವಿದ್ಯಾರ್ಥಿಗಳ ತಂಡದ ಮೂಲಕ ಕಾನೂನು ಸೇವೆಗಳ ಅರಿವು ಮೂಡಿಸುತ್ತಿರುವ ಕಾರ್ಯ ಮಾದರಿಯಾಗಿದ್ದು, ನ್ಯಾಯಾಂಗದ ಆಡಳಿತ ವ್ಯವಸ್ಥೆಯಲ್ಲಿಯೂ ತುಮಕೂರು ಸದಾ ಮುಂದಿದೆ ಎಂದು ಪ್ರಶಂಸಿಸಿದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್.ಶಶಿಧರ ಶೆಟ್ಟಿ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ಯಾನ್ ಇಂಡಿಯಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿರುವ 29 ಸಾವಿರ ಹಳ್ಳಿಗಳಲ್ಲಿಯೂ ಸೇವಾ ಪ್ರಾಧಿಕಾರದ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ಯೋಜನೆ ರೂಪಿಸಲಾಗಿದೆ. ಮಹಿಳೆ, ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಎಲ್ಲರೂ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾದ ಕಾನೂನು ಅರಿವು ನೆರವು ಪಡೆದುಕೊಳ್ಳಬಹುದಾಗಿದೆ ಎಂದರು.
ಹಿರಿಯ ವಕೀಲರು ಉಚಿತವಾಗಿ ಪ್ರಕರಣಗಳನ್ನು ತೆಗೆದುಕೊಳ್ಳುವ ಮೂಲಕ ಸರ್ವರಿಗೂ ಸಮಾನವಾದ ನ್ಯಾಯವನ್ನು ಕಲ್ಪಿಸಲು ಮುಂದೆ ಬರಬೇಕು. ಆಗ ಮಾತ್ರ ಸಂವಿಧಾನದ ಆಶಯಗಳು ಈಡರುತ್ತವೆ ಎಂದ ಅವರು, ಜನರು ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕಾನೂನು ಸೇವಾ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅದ್ಯಕ್ಷತೆವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಎಸ್.ಸಂಗ್ರೇಶಿ ಮಾತನಾಡಿ, ಎಲ್ಲಾರಿಗೂ ನ್ಯಾಯ ಕಲ್ಪಿಸುವುದು ಕಾನೂನಿನ ಉದ್ದೇಶವಾಗಿದ್ದು, ಎಲ್ಲಿ ನ್ಯಾಯ ಉಚ್ಛ ಸ್ಥಾನದಲ್ಲಿದಲಿರುತ್ತದೋ ಅಲ್ಲಿ ಸ್ವಾಸ್ಥ್ಯ ಸಮಾಜವಿರುತ್ತದೆ. ಪ್ರಾಧಿಕಾರದಿಂದ ಕಾನೂನಿನ ಪ್ರತಿ ಹಂತವನ್ನು ಎಲ್ಲರಿಗೂ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಸಮಾಜದ ಕಟ್ಟ ಕಡೆಯ ಪ್ರಜೆಗೂ ನ್ಯಾಯ ಸಿಗಬೇಕು ಎಂಬುದರ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸುವ ದೃಷ್ಟಿಯಿಂದ ಅತ್ಯುತ್ತಮ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಜಿ.ಪಂ.ಸಿಇಒ ಡಾ.ವಿದ್ಯಾಕುಮಾರಿ ಮಾತನಾಡಿ ದುರ್ಬಲರಿಗೆ ನೆರವು ನೀಡುವುದು ನ್ಯಾಯಾಂಗ ಮತ್ತು ಕಾಯಾರ್ಂಗದ ಮುಖ್ಯ ಉದ್ದೇಶ. ಸರ್ಕಾರವು ಜನರ ಮನೆ ಬಾಗಿಲಿಗೆ ಸೇವೆ ದೊರಕಿಸುವ ನಿಟ್ಟಿನಲ್ಲಿ ಸಕಾಲದಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಜನರು ಸಹಭಾಗಿತ್ವ ವಹಿಸಿದಾಗ ಮಾತ್ರ ಯೋಜನೆಗಳು ಯಶಸ್ವಿಯಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ರಾಹುಲ್ ಕುಮಾರ್ ಶಹಾಪೂರವಾಡ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಸೇರಿದಂತೆ ಜಿಲ್ಲೆ ಮತ್ತು ತಾಲ್ಲೂಕು ನ್ಯಾಯಾಲಯಗಳ ನ್ಯಾಯಾಧೀಶರು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ವಿವಿಧ ಯೋಜನೆಗಳಡಿ ಸುಮಾರು 64 ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು. ಇದೇ ವೇಳೆ ಕಾನೂನು ಅರಿವು ಕುರಿತ ಅಲೆಗಳು ಮತ್ತು ಕಾನೂನಿನ ಬೆಳಕು ಎಂಬ ಕವನ ಸಂಕಲನಗಳನ್ನೂ ಬಿಡುಗಡೆ ಮಾಡಲಾಯಿತು.
ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ನ್ಯಾಯಾಧೀಶರುಗಳು ವಿವಿಧ ಇಲಾಖಾವಾರು ಏರ್ಪಡಿಸಿದ್ದ ವಸ್ತುಪ್ರದರ್ಶನವನ್ನು ವೀಕ್ಷಿಸಿದರು. ಕಾರ್ಯಕ್ರಮದ ಬಳಿಕ ನಗರದಾದ್ಯಂತ ಕಾನೂನು ಅರಿವು ಮೂಡಿಸುವ ಬೈಕ್ ಜಾಥಾಕ್ಕೆ ಚಾಲನೆ ನೀಡಿದರು.