ಮಾಜಿ ಪ್ರಧಾನಿ ಮನಮೋಹನ ಸಿಂಗ್‌ರವರಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ.
ಮೊನ್ನೆ ತಾನೆ, ನಾವು ಹೇಳಿದ್ದೆವು, “ಈ ಡಿಸೆಂಬರ್ ಮಾಸವೇ ಹೀಗೆ” ಎಂದು. ಇದು ವರ್ಷಾಂತ್ಯದಲ್ಲಿ ಘಟಾನುಘಟಿಗಳನ್ನು ಎತ್ತಿಹಾಕಿಕೊಂಡು ಹೋಗುತ್ತಲೇ ಇರುತ್ತದೆ. ಡಿಸೆಂಬರ್ ಸುಮ್ಮನೇ, ಸುಖಾಸುಮ್ಮನೇ ಹೋಗುವುದೇ ಇಲ್ಲ.
ಡಿಸೆಂಬರ್ ಮಾಸ, ಇದು ಅತಿ ಹೆಚ್ಚು ಪುಣ್ಯತಿಥಿ ಮತ್ತು ಪುಣ್ಯಸ್ಮರಣೆಗಳನ್ನು ತನ್ನದಾಗಿಸಿಕೊಳ್ಳಬೇಕು ಎಂಬ ಹಟಕ್ಕೆ ಬಿದ್ದಂತೆ ಆಡಿಕೊಂಡಿರುತ್ತದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಎಮ್. ಕೃಷ್ಣರಾಯಿತು. (10. 12. 2024)
ತಬಲಾದ ವಿಶ್ವಕೋಶದಂತಿದ್ದ ಉಸ್ತಾದ್ ಜಾಕೀರ ಹುಸೈನ್ ಆಯಿತು. (15. 12. 2024)
ನಮ್ಮ ತುಮಕೂರನ್ನು ದೃಷ್ಟಿಯಲ್ಲಿರಿಸಿಕೊಂಡು ಹೇಳುವುದಾದರೆ ನಮ್ಮ ಡಾ. ಜಯರಾಮ್ ರಾವ್‌ರಾಯಿತು. (25. 12. 2024)
ನೋಡಿ, ಇದೀಗ ಮಾಜಿ ಪ್ರಧಾನಿನ್‌ಮೋಹನ್ ಸಿಂಗ್‌ರವರು!! (26. 12. 2024) ನಮ್ಮ ಮಾತೃವಿಯೋಗಕ್ಕೂ ವೇದಿಕೆಯಾದ ಮಾಹೆ ಇದು. (26. 12. 2010) ಮನ್‌ಮೋಹನ್ ಸಿಂಗ್‌ರವರು, ಬರೀ ಕುಸುಮಾದಪಿ ಮೃದು ಅಲ್ಲ; ಅವರು ಮೃದುವಿಗಿಂತಲೂ ಮೃದುವಾಗಿದ್ದರು. ಬರೀ ಭಾರತದ ಅಲ್ಲ, ಪ್ರಪಂಚದ ಬಹುದೊಡ್ಡ ಅರ್ಥಶಾಸ್ತ್ರಜ್ಞರಲ್ಲಿ ಅವರು ಒಬ್ಬರು.
ಏನು ಮಾಡುವುದು? ಭಾರತದ ಕರ್ಮ!! ಭಾರತ ಯಾವಾಗಲೂ ದಡ್ಡರನ್ನು ಮುಂದಿಟ್ಟುಕೊಂಡು ಜಾಣರನ್ನು, ಬುದ್ಧಿವಂತರನ್ನು ಹಿಂದಿಕ್ಕಿಕೊಂಡು ಜೀವಿಸಿಕೊಂಡಿರುತ್ತದೆ. ಇದಕ್ಕೆ ಭಾರತದ ಯಾವ ರಂಗವೂ ಕೂಡ ಹೊರತಲ್ಲ. ಧಾರ್ಮಿಕ ರಂಗ ಕೂಡ ಹಾಗೇನೇ!! ಪ್ರತಿಭಾವಂತರಿಗೆ ಲಾಸ್ಟ್ ಬೆಂಚೇ ಗತಿ. Last Bench ಓದುವಾಗ ಮಾತ್ರ ಪ್ರತಿಭಾವಂತರಿಗೆ “ಫರ್ಸ್ಟ್ ಬೆಂಚ್”! First Bench Talent!! ಓದಿಯಾದ ಮೇಲೆ ಪ್ರತಿಭಾವಂತರಿಗೆ “ಲಾಸ್ಟ್ ಬೆಂಚ್”!! ಸರಿಯಾಗಿ ಓದದೆ ಇರುವ ಲಾಸ್ಟ್ ಬೆಂಚ್‌ನವರಿಗೆ (Last Bench Talents) ಬದುಕು ಮತ್ತು ಅವಕಾಶದಲ್ಲಿ ಫರ್ಸ್ಟ್ ಬೆಂಚ್!! ಮನಮೋಹನ್ ಸಿಂಗ್‌ರವರು ಮೌನವ್ಯಾಖ್ಯಾನದಂತಿದ್ದರು. ಅವರು ಸಂತೆಯಲ್ಲಿದ್ದರೂ ಸಂತನಂತೆ ಬದುಕಿದರು. ಮುಂಚೂಣಿಯಲ್ಲಿದ್ದರೂ ಅವರು ಹಿಂಬಾಲಕನಂತೆ ಬದುಕಿದರು. ಹತ್ತು ವರುಷ ಪ್ರಧಾನಿಯಾಗಿದ್ದರೂ“ಪ್ರಧಾನಿ” ಎಂಬ ಅಹಂನ್ನು ತಲೆಗೇರಿಸಿಕೊಳ್ಳದೆ ಬದುಕಿದ ಮಹಾನುಭಾವರು. ಎಲ್ಲವನ್ನೂ ತಿಳಿದಿದ್ದರೂ ಏನೂ ತಿಳಿಯದಂತೆ ಬದುಕಿದರು ಅವರು. ಬೇರೆಯವರು ಸವಾರಿ ಮಾಡಿಕೊಂಡಿರುವುದಕ್ಕೆ ಅವರು ಹೆಗಲಾದರು. ಈ ದೇಶ ಕಂಡ ಅತ್ಯಂತ ಸಾಧು ಪ್ರಧಾನಿಯವರು.
ಮಾಜಿ ಪ್ರಧಾನಿಯವರು ಸಜ್ಜನಿಕೆ, ಸರಳತೆ, ಬದ್ಧತೆ, ಪ್ರಬುದ್ಧತೆಗಳ “ಚಾರ್ ಧಾಮ್ ”ಇದ್ದ ಹಾಗಿದ್ದರು. ಪಾಪ, ಅವರು ಬದುಕಿನ ಕೊನೆಯವರೆಗೆ ಇರಿಸು-ಮುರಿಸು ಸಹಿಸಿಕೊಂಡೇ ಬದುಕಿದರು. ಇರುವೆಯಾದರೋ, ಅರಿಯದೆ ತನ್ನನ್ನು ತುಳಿದವರನ್ನು ಕಚ್ಚುತ್ತದೆ. ಅರಿವಿನ ಮೂರ್ತಿಯಾಗಿದ್ದರೂ, ತುಳಿಯುವುದು ಅರಿವಿಗೆ ಬಂದರೂ ಸಹ ಸಹಿಸಿಕೊಂಡು ಬದುಕಿದ ಪ್ರಧಾನಿ ಮನ್‌ಮೋಹನ ಸಿಂಗ್‌ರವರು ಸಹನೆಯ ಬೆಟ್ಟ!! ಚಾಣಕ್ಯನ ಹಾಗೆ ಅರ್ಥಶಾಸ್ತ್ರವನ್ನು ಅರೆದುಕೊಂಡು ಕುಡಿದಿದ್ದರೂ ಅವರು ನೀಲಕಂಠನಂತೆ ವಿಷವನ್ನು ಗಂಟಲಲ್ಲಿರಿಸಿಕೊಂಡು ಬದುಕಿದರು. ಅಬ್ದುಲ್ ಕಲಾಮ್‌ರ ಹಾಗೆ ಮನ್‌ಮೋಹನ ಸಿಂಗ್‌ರವರನ್ನು ಎಲ್ಲರೂ ಪ್ರೀತಿಸುತ್ತಿದ್ದರು. ವ್ಯಕ್ತಿಗತವಾಗಿ ಅವರ ವಿಷಯದಲ್ಲಿ ಯಾರಲ್ಲೂ ಭಿನ್ನಾಭಿಪ್ರಾಯವಿಲ್ಲ. ಪಕ್ಷವಾಗಿ ಅವರನ್ನು ನೋಡದೆ ಓರ್ವ ವ್ಯಕ್ತಿಯಾಗಿ ಅವರನ್ನು ನೋಡಿದರೆ ಅವರು “ಅಜಾತಶತ್ರು”!! ಒಂದು ಧೀಮಂತ ಪ್ರತಿಭೆ ಹತ್ತು ವರುಷಗಳವರೆಗೆ ಈ ದೇಶವನ್ನು ಆಳಿಕೊಂಡಿದ್ದರೂ ಅವರ ಕೈಗಳು ಕಟ್ಟಿಹಾಕಲ್ಪಟ್ಟಿದ್ದವು ಎಂಬುವುದೇ ಒಂದು ದೊಡ್ಡ ಅಸಮಾಧಾನ.
He was the architect and the brainchild of economic reforms in 1991 that pulled India from the brink of bankruptcy and ushered in an Era of Economic Liberalisation that is widely believed to have changed the course of India’s Economic Trajectory.
ಮನ್‌ಮೋಹನ ಸಿಂಗ್‌ರಂಥ ಮಹಾನುಭಾವರು ಮತ್ತೆ ಮತ್ತೆ ಹುಟ್ಟಿಬರಲಿ ಎಂದು ಆಶಿಸುತ್ತ ಅವರಿಗೆ ನಮ್ಮ ಈ ಭಾವಪೂರ್ಣ ನುಡಿಸುಮನಗಳನ್ನು ಸಲ್ಲಿಸುತ್ತೇವೆ. ಡಾ. ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಸುಕ್ಷೇತ್ರ ಹಿರೇಮಠ, ತಪೋವನ, ತುಮಕೂರು.