ತುಮಕೂರು: ರಾಜ್ಯ ವಿಧಾನ ಪರಿಷತ್‍ಗೆ ಡಿಸೆಂಬರ್ 10 ರಂದು ನಡೆಯಲಿರುವ ಚುನಾವಣೆಗೆ ರಾಷ್ಟ್ರೀಯ ಕ್ರಿಬ್ಕೋ ಸಂಸ್ಥೆಯ ನಿರ್ದೇಶಕರು ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ, ಕಾಂಗ್ರೆಸ್ ಯುವ ಮುಖಂಡರಾದ ಆರ್.ರಾಜೇಂದ್ರ ಅವರು ಕಲ್ಲಹಳ್ಳಿ ದೇವರಾಜ್ ಮತ್ತು ಕೊಟ್ಟ ಶಂಕರ್ ಅವರ ಜೊತೆಗೆ ತೆರಳಿ ಬುಧವಾರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ವೈ.ಎಸ್. ಪಾಟೀಲ್ ಅವರಿಗೆ ಸಾಂಕೇತಿಕವಾಗಿ ತಮ್ಮ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಆರ್.ರಾಜೇಂದ್ರ ಈ ದಿನ ಒಳ್ಳೆಯ ದಿನವಾದ್ದರಿಂದ ವಿಧಾನ ಪರಿಷತ್ ಚುನಾವಣೆಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ ಫಾರಂ ಕೊಡುತ್ತಾರೆ. ಇನ್ನೂ ಕಾಂಗ್ರೆಸ್ ಪಕ್ಷದಿಂದ ಯಾರಿಗೂ ಬಿ ಫಾರಂ ನೀಡಿಲ್ಲ, ಬಿ ಫಾರಂ ನೀಡಿದ ನಂತರ ಮತ್ತೊಮ್ಮೆ ಬಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ನ.21 ಮತ್ತು 22 ರಂದು ರಜಾ ದಿನವಾದ್ದರಿಂದ ನವೆಂಬರ್ 23 ರಂದು ನಮ್ಮ ಪಕ್ಷದ ಮುಖಂಡರಾದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಸಂಸದರಾದ ಡಿ.ಕೆ.ಸುರೇಶ್, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ಮಾಜಿ ಸಂಸದರಾದ ಎಸ್.ಪಿ.ಮುದ್ದಹನುಮೇಗೌಡರು, ಶಾಸಕ ವೆಂಕಟರಮಣಪ್ಪ, ಮಾಜಿ ಶಾಸಕರಾದ ಕೆ.ಷಡಕ್ಷರಿ, ಷಫಿಅಹ್ಮದ್, ಡಾ.ರಫೀಕ್ ಅಹ್ಮದ್ ಇನ್ನಿತರೆ ಹಾಲಿ ಮತ್ತು ಮಾಜಿ ಮುಖಂಡರು ನಾಯಕರುಗಳೊಂದಿಗೆ ಬಿ ಫಾರಂ ನೊಂದಿಗೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಖಚಿತವಾಗಿರುವುದರಿಂದಲೇ ಈ ದಿನ ಒಳ್ಳೆಯದಿನವೆಂದು ಭಾವಿಸಿ ಬೆಳಿಗ್ಗೆ 11ರಿಂದ 11.30ರೊಳಗೆ ನಾಮಪತ್ರವನ್ನು ಸಲ್ಲಿಸಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳನ್ನು ಅಧಿಕೃತವಾಗಿ ರಾಜ್ಯದಲ್ಲಿ ಎಲ್ಲೂ ಘೋಷಣೆ ಮಾಡಿಲ್ಲ, ಆದುದರಿಂದ ಪಕ್ಷದಿಂದ ಅಭ್ಯರ್ಥಿಯನ್ನಾಗಿ ಅಧಿಕೃತ ಘೋಷಣೆ ಮಾಡಿದ ನಂತರ ಮತ್ತೊಮ್ಮೆ ಎಲ್ಲಾ ಮುಖಂಡರ ಜೊತೆ ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.
ನಾನು ಕಳೆದ ಎರಡು ತಿಂಗಳುಗಳಿಂದ ಇಡೀ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಪಾಲಿಕೆ ಸದಸ್ಯರುಗಳನ್ನು ಭೇಟಿ ಮಾಡಿದ್ದು, ಕಳೆದ ಭಾರಿ ಪರಾಭವಗೊಂಡಿದ್ದೇನೆ ಎಂಬ ಅನುಕಂಪವೂ ಸಹ ಎಲ್ಲಾ ಮತದಾರ ಸದಸ್ಯರುಗಳಲ್ಲಿದೆ. ಆದುದರಿಂದ ಈ ಭಾರಿ ಅತ್ಯಧಿಕ ಮತಗಳಿಂದ ಗೆಲ್ಲಿಸುವ ವಿಶ್ವಾಸವನ್ನು ಮತದಾರ ಸದಸ್ಯರು ನೀಡಿದ್ದಾರೆ ಎಂದು ತಿಳಿಸಿದರು.
ಎಲ್ಲಾ ಪಕ್ಷದ ಮುಖಂಡರು ಮತ್ತು ನಾಯಕರು ಪಕ್ಷಾತೀತವಾಗಿ ಬೆಂಬಲ ಸೂಚಿಸಿದ್ದು, ಈ ಭಾರಿ ಪಂಚಾಯ್ತಿಗಳಲ್ಲಿ ಯುವಕರೇ ಹೆಚ್ಚು ಆಯ್ಕೆಯಾಗಿರುವುದರಿಂದ ಗೆಲುವಿನ ಆತ್ಮವಿಶ್ವಾಸವನ್ನು ಮೂಡಿಸಿದ್ದಾರೆ. ಆದುದರಿಂದ ಈ ಭಾರಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ನಗರದ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕುಟುಂಬದ ಸದಸ್ಯರಾದ ಮಾಜಿ ಜಿಪಂ ಸದಸ್ಯೆ ಶಾಂತಲಾರಾಜಣ್ಣ, ಧರ್ಮಪತ್ನಿ ರಶ್ಮಿ ರಾಜೇಂದ್ರ, ಸಹೋದರ ಆರ್.ರವೀಂದ್ರ, ಭವಾನಿ ರವೀಂದ್ರ, ಸಹೋದರಿ ರಶ್ಮಿ ಅವರೊಂದಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಅಪಾರ ಬೆಂಬಲಿಗರೊಂದಿಗೆ ತೆರಳಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಕಲ್ಲಹಳ್ಳಿ ದೇವರಾಜ್, ವಕೀಲ ನಾರಾಯಣಗೌಡ, ಕೊಟ್ಟ ಶಂಕರ್, ಟಿ.ಪಿ.ಮಂಜುನಾಥ್, ಶಶಿ ಹುಲಿಕುಂಟೆ ಮಠ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎನ್.ಮೂರ್ತಿ, ರವಿ, ರಾಘವೇಂದ್ರಸ್ವಾಮಿ, ವಾಲೆಚಂದ್ರಯ್ಯ, ಇ.ಟಿ.ನಾಗರಾಜ್, ಅನಿಲ್‍ಕುಮಾರ್, ಇಲಾಹಿ ಸಿಖಂದರ್, ಮೋಹನ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಭಾಗವಹಿಸಿದ್ದರು.