ತುಮಕೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಯಿಂದ ದಿನ ಬಳಕೆಯ ಮೂಲಭೂತ ವಸ್ತುಗಳ ಬೆಲೆ ಗಗನಕ್ಕೇರಿರುವುದನ್ನು ಖಂಡಿಸಿ, ಕೂಡಲೇ ಬೆಲೆಗಳನ್ನು ಇಳಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವಸೈನ್ಯ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನಾಕಾರರನ್ನುದ್ಧೇಶಿಸಿ ಮಾತನಾಡಿದ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವಸೈನ್ಯ ರಾಜ್ಯಾಧ್ಯಕ್ಷ ನಗುತ ರಂಗನಾಥ್, ಕೇಂದ್ರ ಮತ್ತು ರಾಜ್ಯದಲ್ಲಿ ದಿನನಿತ್ಯದ ಬಳಕೆಯ ಮೂಲಭೂತ ವಸ್ತುಗಳ ಬೆಲೆ ಮಿತಿ ಮೀರಿ ಏರಿಕೆಯಾಗಿದ್ದು, ಇದರಿಂದ ಜನ ಸಾಮಾನ್ಯರು ಜೀವನ ನಡೆಸುವುದು ದುಸ್ಥರವಾಗಿದೆ ಎಂದರು.
ಜನ ಸಾಮಾನ್ಯರ ತಲಾವಾರು ಆದಾಯ ದುಡಿಮೆ ಅಷ್ಟೆ ಇದ್ದು, ದಿನೇ ದಿನೇ ವಸ್ತುಗಳ ಬೆಲೆ ಗಗನ ಮುಟ್ಟುತ್ತಿದ್ದು, ಸುಮಾರು 2 ವರ್ಷಗಳಿಂದ ಕೋವಿಡ್-19 ಮಾರಕ ಸಾಂಕ್ರಾಮಿಕ ರೋಗದಿಂದ ಹಾಗೂ ಪದೇ ಪದೇ ಲಾಕ್‍ಡೌನ್‍ನಿಂದ ಜನರ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ಸಾಮಾನ್ಯರು ಬಳಸುವ ವಸ್ತುಗಳ ಬೆಲೆಯನ್ನು ದಿನೇ ದಿನೇ ಏರಿಕೆ ಮಾಡುತ್ತಿದ್ದಾರೆ.
ಇದರಿಂದ ಜನ ಸಾಮಾನ್ಯರು ಜೀವನ ನಡೆಸುವುದು ತುಂಬಾ ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಬೆಲೆ ಏರಿಕೆ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.
ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ದಿನಬಳಕೆ ವಸ್ತುಗಳ ಬೆಲೆಗಳನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ, ಕಳೆದ ವರ್ಷದಿಂದ ಇಡೀ ಜಗತ್ತನ್ನೆ ಕಾಡಿದ ಮಹಾಮಾರಿ ಕರೊನಾ ವೈರಸ್ ಭಾರತದ ಬಡ ಮತ್ತು ಮಧ್ಯಮ ವರ್ಗದವರ ಪಾಲಿಗೆ ಸಹಿಸಲಾರದ ಪೆಟ್ಟು ನೀಡಿತ್ತು, ಹಲವಾರು ಕಂಪನಿಗಳು ಬಾಗಿಲು ಮುಚ್ಚಿದ ಪರಿಣಾಮ ಕಾರ್ಮಿಕರು ನಿರುದ್ಯೋಗಿಗಳಾದರು. ವ್ಯಾಪಾರ, ವ್ಯವಹಾರ ನೆಲ ಕಚ್ಚಿದವು, ದಿನಗೂಲಿ ನೌಕರರು ಊಟಕ್ಕೂ ಪರದಾಡುವಂತಾಗಿದೆ.
ಇಂತಹ ಸಮಯದಲ್ಲಿ ಜನರ ಸಹಾಯಕ್ಕೆ ಬರಬೇಕಿದ್ದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಸೇಲ್, ಪೆಟ್ರೋಲ್ ಬೆಲೆ ಏರುತ್ತಿದ್ದು ಗ್ಯಾಸ್ ಮೇಲಿನ ಸಬ್ಸಿಡಿ ರದ್ದುಗೊಳಿಸಿರುವ ಪರಿಣಾಮ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಕೂಡಲೇ ಸರ್ಕಾರಗಳು ಬೆಲೆ ಏರಿಕೆಗೆ ಕಡಿವಾಣ ಹಾಕಿ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.
ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವಸೈನ್ಯ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಶ್ರೀಮಂತರು ಬಂಡವಾಳ ಶಾಹಿಗಳಿಗಳಿಗೆ ಮಣೆ ಹಾಕಿರುವ ಸರ್ಕಾರಗಳು ಬಡವರ ಜೀವನದ ಜೊತೆ ಚಲ್ಲಾಟವಾಡುತ್ತಿವೆ, ಕೋವಿಡ್ ಸಮಯದಲ್ಲಿ ಬೆಲೆ ಏರಿಕೆಯನ್ನು ಗಗನಕ್ಕೆ ಮುಟ್ಟಿಸುತ್ತಿರುವ ಇವರಿಗೆ ಸರಿಯಾದ ಆಡಳಿತ ನಡೆಸಲು ಬರುತ್ತಿಲ್ಲ. ಬಡವರು ದೀನದಲಿತರ ಪರವಾಗಿ ಎಂದಿಗೂ ಜೊತೆ ಇರುತ್ತೇನೆ ಎಂದು ಸುಳ್ಳು ಹೇಳಿ ಅವರನ್ನು ದಿಕ್ಕು ತಪ್ಪಿಸುವಂತಹ ಕೆಲಸ ಸರ್ಕಾರಗಳು ಮಾಡುತ್ತಿವೆ ಎಂದು ದೂರಿದರು.
ಕೂಡಲೇ ಏರಿಕೆಯಾಗುತ್ತಿರುವ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವಸೈನ್ಯ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ರಾಜ್ಯ ಕಾರ್ಯದರ್ಶಿ ರಮೇಶ್, ರಾಜ್ಯ ಕಾನೂನು ಸಲಹೆಗಾರ ರಜನೀಕಾಂತ್, ಜಿಲ್ಲಾ ಗೌರವಾಧ್ಯಕ್ಷ ಎನ್.ರಮೇಶಣ್ಣ, ಎನ್.ಕೆ.ನಿಧಿಕುಮಾರ್, ಜಿಲ್ಲಾ ಉಪಾಧ್ಯಕ್ಷ ಜಬೀವುಲ್ಲಾ, ರಾಜ್ಯ ಪ್ರಧಾನ ಕಾರ್ಯದರ್ಶಿ ರಘು, ತುಮಕೂರು ಗ್ರಾಮಾಂತರ ಅಧ್ಯಕ್ಷ ಗಿರಿಸ್ವಾಮಿ, ಕುಣ ಗಲ್ ಅಧ್ಯಕ್ಷ ವರದರಾಜು, ಹೆಬ್ಬೂರು ಅಧ್ಯಕ್ಷ ಚೇತನ್, ತಾಲ್ಲೂಕು ಕಾರ್ಯದರ್ಶಿ ಪುಟ್ಟರಾಜು, ಕೆ.ಗೋವಿಂದರಾಜು, ಎಸ್.ಲಕ್ಷ್ಮೀನಾರಾಯಣ, ಎಚ್.ಬಿ.ರಾಜೇಶ್ ಮುಂತಾದವರು ಭಾಗವಹಿಸಿದ್ದರು.