ಯುಜಿಡಿ ನೀರು ನದಿಯಂತೆ ಹರಿದು ರಸ್ತೆಯಲ್ಲಿ ಅವಾಂತರ: ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ನಿರ್ವಹಿಸುವ ಪಾಲಿಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
ವರದಿ: ಸೈಯದ್ ಯೂಸುಫ್

ತುಮಕೂರು ನಗರದ ಗುಬ್ಬಿ ಗೇಟ್ ಚೆಕ್ ಪೋಸ್ಟ್ ಸರ್ಕಲ್ ಮತ್ತು ದಾನ ಪ್ಯಾಲೇಸ್ ಕಡೆ ಹೋಗುವ ರಿಂಗ್ ರಸ್ತೆಯ ರೈಲ್ವೆ ಅಂಡರ್ ಪಾಸ್ ಬಳಿ ಯುಜಿಡಿ (Underground Drainage) ನೀರು ನದಿಯಂತೆ ಹರಿಯುತ್ತಿದ್ದು, ಈ ಸಮಸ್ಯೆ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಉಂಟುಮಾಡುತ್ತಿದೆ. ಸುಮಾರು ದಿನಗಳಿಂದ ಈ ಸಮಸ್ಯೆ ಮುಂದುವರಿಯುತ್ತಿದ್ದು, ನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷೆಯನ್ನು ಸಾರ್ವಜನಿಕರು ತೀವ್ರವಾಗಿ ವಿರೋಧಿಸುತ್ತಿದ್ದಾರೆ.

ರಸ್ತೆಯಲ್ಲಿ ನೀರು ಹರಿಯುವುದರಿಂದ ವಾಹನ ಸಂಚಾರದಲ್ಲಿ ತೊಂದರೆ, ನೀರಿನ ಕಲುಷಿತಗೊಳ್ಳುವಿಕೆ ಮತ್ತು ಸಮೀಪದ ಪ್ರದೇಶಗಳಲ್ಲಿ ದುರ್ವಾಸನೆ ಇದೆ. ಸಾರ್ವಜನಿಕರು ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಳ್ಳದ ಕಾರಣವಾಗಿ ಅವರ ಅಸಮಾಧಾನ ಹೆಚ್ಚಾಗಿದೆ.
ಯುಜಿಡಿ ನೀರು ಹರಿವನ್ನು ತಕ್ಷಣವೇ ತಡೆಹಿಡಿಯಲು ಕ್ರಮ ಕೈಗೊಳ್ಳಬೇಕು, ಆ ಸ್ಥಳದ ಡ್ರೈನೇಜ್ ವ್ಯವಸ್ಥೆಯನ್ನು ಸುಧಾರಿಸುವುದು, ಈ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ಸ್ಪಂದಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ ನಂತರವೂ ತಾತ್ಕಾಲಿಕವಾಗಿ ಮಾತ್ರ ದುರಸ್ತಿ ಕಾರ್ಯ ನಡೆಸುವ ಮೂಲಕ ಸಮಸ್ಯೆಗಳನ್ನು ಮತ್ತೊಮ್ಮೆ ಎದುರಿಸುವ ಪರಿಸ್ಥಿತಿ ಸಾರ್ವಜನಿಕರಿಗೆ ಬಾಧಕವಾಗಿದೆ.




ಪಾಲಿಕೆ ಸಿಬ್ಬಂದಿಯ ಕ್ರಮಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿರುವುದರ ಹಿಂದೆ ದೈನಂದಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಪಾಲಿಕೆಯ ನಿರ್ಲಕ್ಷ್ಯ ಪ್ರಮುಖ ಕಾರಣವಾಗಿದೆ.