ತುಮಕೂರು: ವಕ್ಫ್ ಮಂಡಳಿವತಿಯಿಂದ ನಡೆಯುತ್ತಿರುವ ಕೈಗಾರಿಕಾ ತರಬೇತಿ ಕೇಂದ್ರದ ತರಬೇತುದಾರರಿಗೆ ನ್ಯಾಯಾಲಯದ ಆದೇಶದಂತೆ ಸೇವೆ ಖಾಯಂ ಮತ್ತು ಬಾಕಿ ವೇತನ ನೀಡುವ ಸಂಬಂಧ ನಮ್ಮದು ತಕರಾರು ಇರುವುದಿಲ್ಲ ಎಂದು ವಕ್ಫ್ ಚುನಾಯಿತ ಮಂಡಳಿಯ ನಿರ್ದೇಶಕರಾದ ಅಪ್ಸರ್‍ಖಾನ್ ಮತ್ತು ಗೌಸ್‍ಪಾಷಶೇಖ್ ಸ್ಪಷ್ಟಪಡಿಸಿದ್ದಾರೆ.
ಎನ್.ಎಸ್.ಯು.ಐ ನವರು ಪತ್ರಿಕಾಗೋಷ್ಠಿ ನಡೆಸಿ, ಮಂಡಳಿಯ ಮೇಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಅವರು,ನೌಕರರ ಪರವಾಗಿ ಬಂದಿರುವ ನ್ಯಾಯಾಲಯದ ಆದೇಶ ಪಾಲನೆಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯ 15 ಜನರು ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.ಆದರೆ ಜನರಿಂದ ಆಯ್ಕೆಯಾಗಿರುವ ಅಫ್ಸರ್‍ಖಾನ್, ಗೌಸ್‍ಪಾಷ ಶೇಖ್, ಮೆಹಬೂಬ್ ಮತ್ತು ಇಸ್ಮಾಯಿಲ್ ಎಂಬುವವರು ನೌಕರರ ಪರವಾಗಿದ್ದರೆ,ಉಳಿದ 11 ಜನರು ನೌಕರರಿಗೆ ವಿರುದ್ದವಾಗಿರುವುದು ಅವರ ನಡೆಯಿಂದ ತಿಳಿದು ಬರುತ್ತಿದೆ ಎಂದರು.
ಹೆಚ್.ಎಂ.ಎಸ್ ಐಟಿಐ ಜೆಟಿಓ ಗಳ ಪರವಾಗಿ ಬಂದಿರುವ ಹೈಕೋರ್ಟಿನ ಆದೇಶದ ವಿರುದ್ದ ಸುಪ್ರಿಂಕೋರ್ಟಿನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸುವ ಸಂಬಂಧ ಚರ್ಚೆ ನಡೆಸಲು 8-12-2021ರಂದು ಅಧ್ಯಕ್ಷರು ಸಭೆ ಕರೆದು, ಸಭೆಯಲ್ಲಿ ನಾವಿಟ್ಟ ರಾಜಿ ಸಂಧಾನ ಪ್ರಸ್ತಾಪಕ್ಕೂ ಒಪ್ಪಿಗೆ ಸೂಚಿಸಿ, ನೌಕರರೊಂದಿಗೆ ಮಾತುಕತೆ ನಡೆಸುವಂತೆ ಸೂಚನೆ ನೀಡಿ, ಸಭೆ ನಡೆಯುವ ಮೊದಲೇ ಅಂದರೆ 29-11-2021 ರಂದು ಸುಪ್ರಿಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿರುವುದು ಕಂಡು ಬಂದಿದೆ. ಈ ರೀತಿಯ ಮೇಲ್ಮನವಿಯ ಬಗ್ಗೆ ನಮ್ಮನ್ನು ಕತ್ತಲಲ್ಲಿ ಇಡುವ ಅಗತ್ಯವೇನಿತ್ತು ಎಂಬುದು ನಮ್ಮ ಪ್ರಶ್ನೆಯಾಗಿದೆ.ನಾವು ಮಾನವೀಯ ದೃಷ್ಟಿಯಿಂದ ಸಮಿತಿಗೂ ನಷ್ಟವಾಗಬಾರದು, ನೌಕರರಿಗೂ ನಷ್ಟವಾಗಬಾರದು ಎಂದು ಸಂಧಾನ ನಡೆಸಲು ಮುಂದಾಗಿ, ನೌಕರರ ಮುಂದೆ ಮುಖ ಎತ್ತದಂತೆ ಮಾಡಿದ್ದಾರೆ.
ಇದು ಖಂಡನೀಯ ಎಂದು ನುಡಿದರು.
ರಾಜ್ಯ ಉಚ್ಚ ನ್ಯಾಯಾಲಯದ ಆದೇಶ ಪ್ರಕಾರ ನೌಕರರಿಗೆ ಬಾಕಿ ವೇತನ ನೀಡುವುದು ಮತ್ತು 25 ವರ್ಷಗಳಿಗೂ ಹೆಚ್ಚು ಕಾಲ ಪಾಠ ಮಾಡಿ, ಸಾವಿರಾರು ಮಕ್ಕಳು ಬದುಕು ಕಟ್ಟಿಕೊಳ್ಳುವಂತೆ ಮಾಡಿರುವ ಶಿಕ್ಷಕರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ಕೂಡಲೇ ಸರ್ವ ಸದಸ್ಯರ ಸಭೆ ಕರೆದು,ಸದರಿ ವಿಚಾರವನ್ನು ಸಭೆಯ ಮುಂದಿಟ್ಟು,ಬಹುಮತದ ತೀರ್ಮಾನ ಪಡೆದು, ಆಗಿರುವ ಲೋಪದೋಷ ಸರಿಪಡಿಸಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ ಎಂದರು.
ವಕ್ಪ ಮಂಡಳಿಯ ಆದಾಯದಲ್ಲಿ ಸಮುದಾಯದ ಬಡ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಅವಕಾಶವಿದೆ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆಯುವ ಮುನ್ನ, ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಚಾರ ನೀಡಬೇಕು, ಜೊತೆಗೆ ಮಸೀದಿಗಳಲ್ಲಿ ನಿರಂತರವಾಗಿ ನಾಲ್ಕು ಶುಕ್ರವಾರ ನಮಾಜಿನ ವೇಳೆ ಪ್ರಚಾರ ನಡೆಸಿ, ಎಲ್ಲರಿಗೂ ತಿಳಿಯುವಂತೆ ಮಾಡಿ, ಬಂದ ಅರ್ಜಿಗಳಲ್ಲಿ ಆರ್ಹರನ್ನು ಗುರುತಿಸಿ, ಆಯ್ಕೆ ಮಾಡಬೇಕು.ಇದು ವಕ್ಫ್ ಅಕ್ಟ್ 1997 ನಿರ್ದೇಶನವಾಗಿದೆ.ಆದರೆ ಈ ಅಧ್ಯಕ್ಷರು, ನಿಯಮವನ್ನು ಗಾಳಿಗೆ ತೂರಿ,ನಿರ್ದೇಶಕರುಗಳಿಗೆ ತಲಾ 25 ಅರ್ಜಿಗಳನ್ನು ನೀಡಿ,ಅರ್ಜಿ ತರಿಸಿಕೊಳ್ಳುತ್ತಿರುವುದು ಕಾನೂನು ಬಾಹಿರವಾಗಿದೆ. ಹಾಗಾಗಿ ನಾನು ನನಗೆ ನೀಡಿದ್ದ ಅರ್ಜಿಗಳನ್ನು ಅಂದೆ ವಾಪಸ್ ಮಾಡಿದ್ದೇನೆ ಎಂದು ಅಪ್ಸರ್‍ಖಾನ್ ತಿಳಿಸಿದರು.
ಹೆಚ.ಎಂ.ಎಸ್.ಐಟಿಐ ಜೆಟಿಓ ಗಳಿಗೆ ಬಾಕಿ ನೀಡುವ ಕುರಿತು ನ್ಯಾಯಾಲಯದ ತೀರ್ಪು ಮತ್ತಿತರ ವಿಚಾರಗಳನ್ನು ಭಾನುವಾರ ನಗರಕ್ಕೆ ಆಗಮಿಸಿದ್ದ ರಾಜ್ಯ ವಕ್ಫ್‍ಬೋರ್ಡ್ ಅಧ್ಯಕ್ಷರ ಗಮನಕ್ಕೆ ತರಲಾಗಿದ್ದು,ಅಧ್ಯಕ್ಷರು ಗುರುವಾರ ಬಂದು ಭೇಟಿಯಾಗುವಂತೆ ತಿಳಿಸಿದ್ದಾರೆ.ಹಾಗಾಗಿ ಗುರುವಾರ ಅವರನ್ನು ಭೇಟಿಯಾಗಿ,ಸಂಪೂರ್ಣ ಮಾಹಿತಿಯ ಜೊತೆಗೆ, ತುಮಕೂರು ಜಿಲ್ಲಾ ವಕ್ಪ್ ಮಂಡಳಿಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಕೆಲವರ ಮುಸ್ಲಿಂ ವಿರೋಧಿ ನೀತಿಗಳನ್ನು ಅವರ ಮುಂದಿಟ್ಟು, ಜನರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದು ಗೌಸ್‍ಪಾಷಶೇಖ್ ತಿಳಿಸಿದರು.
(ಹೆಚ್ಚಿನ ಮಾಹಿತಿಗಾಗಿ ಗೌಸ್‍ಪಾಷಶೇಖ್ 9448667070)