ತುಮಕೂರು: ದೇಶವನ್ನು ಬಲಿಷ್ಠ ಮಾಡುವುದಾಗಿ ಅಧಿಕಾರಕ್ಕೆ ಬಂದವರಿಂದ ಇಂದು ದೇಶದಲ್ಲಿ ಬಡತನ ಹೆಚ್ಚಳವಾಗುತ್ತಿದೆ, ದೇಶದಲ್ಲಿ ಶ್ರೀಮಂತರು ಮಾತ್ರ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಿಪಿಐಎಂ ರಾಜ್ಯ ಮುಖಂಡ ಮೀನಾಕ್ಷಿ ಸುಂದರಂ ಆರೋಪಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸವಾದಿ) 17ನೇ ಜಿಲ್ಲಾ ಸಮ್ಮೇಳನದ ಅಂಗವಾಗಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಇಂದು ದೇಶದಲ್ಲಿ ಬಡವರು ಬಡವರಾಗುತ್ತಿದ್ದಾರೆ, ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ಎಂದು ಜನಸಾಮಾನ್ಯರು ಮಾತನಾಡುತ್ತಿದ್ದಾರೆ, ಬಡವರು ಬದುಕಲು ಆಗದಂತಹ ಪರಿಸ್ಥಿತಿ ಇದೆ ಎಂದರು.
ದೇಶದಲ್ಲಿ ಇಂದು ಎಲ್ಲ ಮಾರಾಟವಾಗುತ್ತಿದೆ, ನೀಡಿದ್ದ ಭರವಸೆಯನ್ನೇ ಮರೆತಿರುವ ನಾಚಿಕೆಗೇಡಿನ ಪ್ರಧಾನಿ ಇದ್ದಾರೆ, ಕಪ್ಪುಹಣ ವಾಪಸ್ ತರದೇ ಜನರ ಮೇಲೆ ತೆರಿಗೆ ವಿಧಿಸುತ್ತಿದ್ದಾರೆ, ಮಧ್ಯರಾತ್ರಿ ಭಾಷಣ ಮಾಡುವ ಪ್ರಧಾನಿ ಒಂದು ದೇಶ ಒಂದು ತೆರಿಗೆ ಹೆಸರಿನಲ್ಲಿ ತೆರಿಗೆ ವಂಚನೆ ತಡೆಯುವುದಾಗಿ ಹೇಳಿ, ರಾಜ್ಯಗಳಿಗೆ ತೆರಿಗೆ ಪಾಲಿನ ಹಣ ನೀಡದಂತಹ ಕೇಂದ್ರ ಸರ್ಕಾರ ನಮ್ಮಲ್ಲಿ ಇದೆ ಎಂದು ದೂರಿದರು.
ಪಿಂಚಣ , ಸಬ್ಸಿಡಿ, ಸಂಬಳ ನೀಡಲು ಹಣ ಇಲ್ಲ ಎನ್ನುವ ಕೇಂದ್ರ ಸರ್ಕಾರ ಸ್ಮಾರ್ಟ್‍ಸಿಟಿಗಳನ್ನು ಘೋಷಣೆ ಮಾಡುವ ಮೂಲಕ ಹಣ ಸಂಗ್ರಹಿಸುತ್ತಿದೆ, ಬಡ, ಮಧ್ಯಮ ವರ್ಗದವರ ಮೇಲೆ ತೆರಿಗೆ ವಿಧಿಸುವ ಕೇಂದ್ರ ಸರ್ಕಾರ, ಶ್ರೀಮಂತರ ಮೇಲಿನ ತೆರಿಗೆ ಕಡಿಮೆ ಮಾಡುತ್ತಿರುವುದು ಏಕೆ ಎಂದು ಯಾವ ಪಕ್ಷಗಳು ಪ್ರಶ್ನಿಸುವುದಿಲ್ಲ, ದುಡ್ಡಿಲ್ಲದೇ ದೇಶದ ಆಸ್ತಿಯನ್ನು ಮಾರಾಟ ಮಾಡುವ ಕೀಳುಮಟ್ಟಕ್ಕೆ ಸರ್ಕಾರ ಇಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡಿ ಅವರಿಗೆ ಸರ್ಕಾರವೇ ಬಾಡಿಗೆ ಕಟ್ಟುವಂತಹ ಕೇಂದ್ರ ಸರ್ಕಾರ ನಮ್ಮನ್ನು ಆಳುತ್ತಿದೆ, ಕೋವಿಡ್ ಬಂದ್ಮೇಲೆ ಬದುಕು ಕಟ್ಟಿಕೊಳ್ಳುವುದೇ ಕಷ್ಟವಾಗಿದೆ, ದೇಶದ ಜನರು ಬಡವಾಗುತ್ತಿರುವಾಗ ಕೆಲವರು ಜಗತ್ತಿನ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದಾರೆ, ಕೆಲಸ ಇಲ್ಲದಿದ್ದರೆ ತಲೆಕೆಡೆಸಿಕೊಳ್ಳಬೇಡಿ, ಬಂಡವಾಳಗಾರರಾಗಿ ಎನ್ನುವ ಪ್ರಧಾನಿ ಜನರ ಜೇಬನ್ನು ಬರಿದು ಮಾಡಲು ಹೊಸ ಯೋಜನೆ ತರುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯಮುಖಂಡ ಗೋಪಾಲಕೃಷ್ಣ ಅರಳಹಳ್ಳಿ ಮಾತನಾಡಿ, ಭೂಮಿಯ ಫಲವತ್ತತೆ ಜಾಸ್ತಿಯಾಗದೇ ಅಭಿವೃದ್ಧಿ ಸಾಧ್ಯವಿಲ್ಲ, ಕಳೆದ ಮೂವತ್ತು ವರ್ಷಗಳಿಂದ ಜಿಲ್ಲೆಯ ಭೂಮಿಗೆ ಹೇಮಾವತಿ ನೀರು ಬರಲಿಲ್ಲ, ಸ್ವತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಭೂಮಿಗೆ ನೀರು ಕೊಡಲು ಆಗದಂತಹ ಪರಿಸ್ಥಿತಿ ಇದೆ, ಜಿಲ್ಲೆ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಎಲ್ಲ ತಾಲ್ಲೂಕುಗಳ ಕೆರೆಗಳಿಗೆ, ಕೃಷಿಗೆ ನೀರು ಕೊಡಬೇಕು ಎಂದು ಆಗ್ರಹಿಸಿದರು.
ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವದ ಹೆಸರಿನಲ್ಲಿ ಜನರನ್ನು ಲೂಟಿ ಹೊಡೆಯುವ ಯೋಜನೆಗಳನ್ನು ಜಾರಿಗೆ ತಂದು, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಜನರನ್ನು ಲೂಟಿ ಮಾಡುತ್ತಿದ್ದಾರೆ, ಬೊಮ್ಮಾಯಿ ಅವರು ಜಾರಿಗೆ ತರಲು ಹೊರಟಿರುವ ಜನಸೇವಕ ಯೋಜನೆಯಡಿ ಸೌಲಭ್ಯ ಪಡೆಯಲು ಹಣ ನೀಡಬೇಕಾಗಿದೆ, ಸೇವೆ ಪಡೆಯಲು ಹಣ ನೀಡಬೇಕೆಂಬ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ದೂರಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೈಯದ್‍ಮುಜೀಬ್ ಅವರು, ಪ್ರತಿದಿನ ಕಾರ್ಖಾನೆಗಳು ಮುಚ್ಚುತ್ತಿರುವುದರಿಂದ ದುಡಿಯುವ ಕೈಗಳಿಗೆ ದುಡಿಮೆ ಇಲ್ಲದಂತಾಗಿದೆ, ಸುಳ್ಳೇ ವಿಜೃಂಭವಿಸುವ ಕಾಲದಲ್ಲಿ ಸತ್ತಂತೆ ಇರುವರನ್ನು ಬಡಿದಬ್ಬೆಸದೇ ಹೋದರೆ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಇರುವುದಿಲ್ಲ, ದೇವರು ಕೆಲವೇ ಸಮುದಾಯಗಳ ಸ್ವತ್ತಾಗಿ ಪರಿಣಮಿಸಿರುವುದು ವಿಪರ್ಯಾಸ ಎಂದು ತಿಳಿಸಿದರು.
ಸರ್ವರು ಸಮಪಾಲ, ಸಮಬಾಳು ಪಡೆದುಕೊಳ್ಳಬೇಕಾದರೆ ಹೋರಾಟ ಮಾಡುವುದು ಅನಿವಾರ್ಯವಾಗಿದೆ, ಅಂಬೇಡ್ಕರ್ ಆಶಯಗಳನ್ನು ಧಿಕ್ಕರಿಸಿ ಆಡಳಿತ ನಡೆಸುವ ಮೂಲಕ ಸಮಾಜದಲ್ಲಿ ಅಸಮತೋಲನ ವಾತಾವರಣವನ್ನು ನಿರ್ಮಾಣ ಮಾಡುತ್ತಿರುವವರಿಗೆ ತಕ್ಕಪಾಠ ಕಲಿಸಬೇಕಿದೆ ಎಂದು ಹೇಳಿದರು.
ಈ ಬಹಿರಂಗ ಸಭೆಯಲ್ಲಿ ಎನ್.ಕೆ.ಸುಬ್ರಮಣ್ಯ, ಬಿ.ಉಮೇಶ್. ಸಿ.ಅಜ್ಜಪ್ಪ,ರೈತ ಮುಖಂಡರು, ಎ.ಲೋಕೇಶ್ ಶಹತಾಜ್, ಷಣ್ಮುಗಪ್ಪ, ಗಿರೀಶ್ ಸೇರಿದಂತೆ ಮಹಿಳಾ ಮುಖಂಡರು ಭಾಗವಹಿಸಿದ್ದರು.