ತುಮಕೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿದ ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಸಿ.ಟಿ.ರವಿ ವಿರುದ್ಧ ಶುಕ್ರವಾರ ಸಂಜೆ ನಗರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಬಿಜಿಎಸ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾನವ ಸರಪಳಿ ನಿರ್ಮಾಣ ಮಾಡಿ ಪ್ರತಿಭಟನೆ ನಡೆಸಿದರು. ಸಿ.ಟಿ.ರವಿ ಪ್ರತಿಕೃತಿಗೆ ಮಹಿಳಾ ಕಾರ್ಯಕರ್ತೆಯರು ಪೊರಕೆಯಲ್ಲಿ ಹೊಡೆದು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿ.ಟಿ.ರವಿ ವಿರುದ್ಧ ಧಿಕ್ಕಾರ ಕೂಗಿ ಪ್ರತಿಕೃತಿ ದಹನ ಮಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೇಮಠ್, ಭಾರತ್ ಮಾತಾಕಿ ಜೈ ಎಂದು ಕೂಗುವ ಸಿ.ಟಿ.ರವಿ ಬಾಯಲ್ಲಿ ಸಚಿವೆ ಬಗ್ಗೆ ಅಶ್ಲೀಲ ಪದ ಬಂದಿದೆ. ಸಚಿವೆಯರನ್ನೇ ಅವಹೇಳನಾಕಾರಿಯಾಗಿ ನಿಂದಿಸಿದ ಇವರು ಸಾಮಾನ್ಯ ಹೆಣ್ಣು ಮಕ್ಕಳಿಗೆ ಇನ್ನೆಲ್ಲಿ ಗೌರವ ನೀಡುತ್ತಾರೆ? ನಮ್ಮದು ಸುಸಂಸ್ಕೃತ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯವರು ಮಹಿಳೆಯರಿಗೆ ತೋರುವ ಗೌರವ ಇದೆಯೆ? ಎಂದರು.
ಭಾರತ ಸಂಸ್ಕೃತಿಯಲ್ಲಿ ಹೆಣ್ಣನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ. ಇಂತಹ ಸಂಸ್ಕೃತಿ ಬಿಜೆಪಿಯವರಿಗೆ ಹೇಗೆ ಬರಲು ಸಾಧ್ಯ. ಬಿಜೆಪಿಯವರ ಕಟುಂಬದ ಹೆಣ್ಣು ಮಕ್ಕಳಿಗೆ ಯಾರಾದರೂ ಅಶ್ಲೀಲ ಪದಗಳಿಂದ ನಿಂದಿಸಿದ್ದರೆ ಅವರು ಸುಮ್ಮನಿರುತ್ತಿದ್ದರೆ? ಸಿ.ಟಿ.ರವಿ ವಿರುದ್ಧ ಯುವ ಕಾಂಗ್ರೆಸ್‌ನಿAದ ಮಹಿಳಾ ಆಯೋಗಕ್ಕೆ ದೂರು ನೀಡುತ್ತಿದ್ದೇವೆ, ಸಿ.ಟಿ.ರವಿಯವರನ್ನು ಎಂಎಲ್‌ಸಿ ಸ್ಥಾನದಿಂದ ವಜಾಗೊಳಿಸಿ ಜೈಲಿಗೆ ಕಳಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸುವುದಾಗಿ ಶಶಿ ಹುಲಿಕುಂಟೇಮಠ್ ಹೇಳಿದರು.
ಸಿ.ಟಿ.ರವಿ ತುಮಕೂರು ಜಿಲ್ಲೆಗೆ ಆಗಮಿಸಿದಾಗ ತಕ್ಕ ಶಾಸ್ತಿ ಮಾಡುತ್ತೇವೆ, ಮಹಿಳೆಯರು ಇವರ ಮುಖಕ್ಕೆ ಮಸಿ ಬಳಿಯುತ್ತಾರೆ. ಸಿ.ಟಿ.ರವಿ ಪದೇಪದೆ ಇಂತಹ ತಪ್ಪು ಮಾಡುತ್ತಿದ್ದಾರೆ, ಇನ್ನೂ ಬುದ್ಧಿ ಕಲಿತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಗೀತಾ ರಾಜಣ್ಣ ಮಾತನಾಡಿ, ಸಚಿವೆ ಲಕ್ಷಿö್ಮ ಹೆಬ್ಬಾಳ್ಕರ್ ಅವರನ್ನು ಕೆಟ್ಟ ಪದಗಳಿಂದ ನಿಂದನೆ ಮಾಡಿರುವ ಸಿ.ಟಿ.ರವಿ ಈ ನಾಡಿನ ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನ. ಸಿ.ಟಿ.ರವಿಯನ್ನು ಎಂಎಲ್‌ಸಿ ಸ್ಥಾನದಿಂದ ವಜಾ ಮಾಡಿ, ಪಕ್ಷದಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದರು.
ಸಿ.ಟಿ.ರವಿ ಅಸಭ್ಯ ಪದ ಬಳಸಿರುವುದನ್ನು ಹಾಜರಿದ್ದ ಶಾಸಕರೇ ಹೇಳುತ್ತಾರೆ. ಇದೇ ಬಿಜಪಿಯವರು ಹಿಂದೆ ವಿಧಾನಸೌಧದ ಸದನದಲ್ಲಿ ಬ್ಲೂ ಫಿಲಂ ನೋಡುತ್ತಿದ್ದರು. ಇದು ಬಿಜೆಪಿಯವರ ಸಂಸ್ಕೃತಿ ಎಂದು ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್, ಜಿಲ್ಲಾ ಉಪಾಧ್ಯಕ್ಷ ಟಿ.ಪಿ.ಮೋಹನ್‌ಕುಮಾರ್, ನಗರ ಅಧ್ಯಕ್ಷ ಆರ್ಮಾನ್, ಇಲಾಯಿ ಸಿಕಂದರ್, ಸಂಜು, ಮುಖಂಡರಾದ ನರಸೀಯಪ್ಪ, ವೈ.ಎನ್.ನಾಗರಾಜು. ಟಿ.ಎಂ.ಮಹೇಶ್, ಅಂಬರೀಷ್, ನಟರಾಜಶೆಟ್ಟಿ, ಚಂದ್ರಯ್ಯ, ಸಂಜೀವ್‌ಕುಮಾರ್, ಖಾದರ್ ಬಾಷಾ, ಸುಜಾತ, ಜಯಮ್ಮ, ಯಶೋದ, ಕವಿತಾ, ನಾಗಮಣಿ, ಭಾಗ್ಯ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Congress workers protest by setting fire to CT Ravi’s effigy