ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಮಹಾತ್ಮಗಾಂಧಿ ಅವರ 152ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ತುಮಕೂರು: ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ತುಮಕೂರು ಅಮಾನಿಕೆರೆ ಮುಖ್ಯದ್ವಾರದ ಮುಂಭಾಗ ಜಿಲ್ಲಾಧ್ಯಕ್ಷ ಉಮಾಶಂಕರ್ ನೇತೃತ್ವದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ 152ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಮನೆಗೊಂದು ಮರ ಊರಿಗೊಂದು ಕೆರೆ ಜಯಕರ್ನಾಟಕ ಜನಪರ ವೇದಿಕೆಯ ನಡೆ ನಿಸರ್ಗದ ಕಡೆ ಎಂಬ ಅಭಿಯಾನದಡಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಒಂದೊಂದು ಕೆರೆಯ ಬಳಿ ಹಣ್ಣು ಮತ್ತು ಹೂವಿನ ಗಿಡಗಳನ್ನು ನೆಟ್ಟು ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು.
ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಉಮಾಶಂಕರ್ ಮಾತನಾಡಿ ನಮ್ಮ ವೇದಿಕೆಯು ಯುವ ಸಂಸ್ಥಾಪಕ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿ, ರಾಜ್ಯಾಧ್ಯಕ್ಷರಾದ ಆರ್.ಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಅನೇಕ ಸಮಾಜಮುಖಿ ಸೇವೆಗಳು ಹೋರಾಟಗಳನ್ನು ಹಮ್ಮಿಕೊಂಡಿದ್ದು, ರಕ್ತದಾನ ಮತ್ತು ಆರೋಗ್ಯ ಶಿಬಿರ ನಾಡು ನುಡಿಗೆ ದಕ್ಕೆ ಬಂದಾಗ ಅನೇಕ ಹೋರಾಟಗಳನ್ನು ಮಾಡಿರುವುದಾಗಿ ತಿಳಿಸಿದರು.
ನಮ್ಮ ಸಂಘಟನೆಯ ರಾಜ್ಯ ಘಟಕದ ಸೂಚನೆ ಮೇರೆಗೆ ಜಿಲ್ಲಾ ಕೇಂದ್ರದಲ್ಲಿ ತುಮಕೂರು ಅಮಾನಿಕೆರೆಯಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿದ್ದು, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ನಮ್ಮ ಸಂಘಟನೆಯ ಕಾರ್ಯಕರ್ತರು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಇಂದಿನ ಯುವ ಸಮೂಹಕ್ಕೆ ಸ್ವಾತಂತ್ರ್ಯ ಬಂದ ಬಗ್ಗೆ ಅರಿವಿಲ್ಲ. ಬ್ರಿಟೀಷರ ಆಡಳಿತದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ ಮಹಾತ್ಮಗಾಂಧಿಯವರು ಅಹಿಂಸಾ ಹೋರಾಟದ ಮೂಲಕ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮುಂಚೂಣ ಯಲ್ಲಿದ್ದರು ಎಂದರು.
ಸ್ವಚ್ಛ ಭಾರತ ಅಭಿಯಾನ ಗಾಂಧೀಜಿಯವರ ಕನಸಾಗಿದ್ದು, ಪ್ರತಿಯೊಬ್ಬರೂ ತಮ್ಮ ಮನೆ, ಬಡಾವಣೆಗಳ ಆವರಣವನ್ನು ಶುಚಿ ಮಾಡಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದರು.
ತುಮಕೂರಿನ ಸರ್ಕಾರಿ ಕಿರಿಯ ಕಾಲೇಜು ಹಿಂಭಾಗದ ಆವರಣದ ಕೊಠಡಿಯಲ್ಲಿ ಗಾಂಧೀಜಿಯವರು ಒಂದು ದಿನ ತಂಗಿದ್ದರು. ಆ ಕೊಠಡಿಯನ್ನು ಆಧುನೀಕರಿಸಿ, ಪ್ರವಾಸೋದ್ಯಮ ಕೇಂದ್ರವಾಗಿಸಲು ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ಶ್ರಮಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಪ್ಯಾರಾ ಮಿಲಿಟರಿ ನಿವೃತ್ತ ಯೋಧ ಸೈಯದ್ ಇಂತಿಯಾಜ್ ಮಾತನಾಡಿ, ಬ್ರಿಟೀಷರ ಆಡಳಿತ ಕಾಲದಲ್ಲಿ ಗಾಂಧೀಜಿಯವರು ಸಾಕಷ್ಟು ಕಷ್ಠಗಳನ್ನು ಅನುಭವಿಸಿದ್ದು, ಇದರಿಂದಾಗಿ ಜನಸಾಮಾನ್ಯರ ಬಗ್ಗೆ ಚಿಂತಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಹೋರಾಟ ಮಾಡಿದರು ಎಂದರು.
ಇದೇ ವೇಳೆ ಜಯಕರ್ನಾಟಕ ಜನಪರ ವೇದಿಕೆಯ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಪ್ಯಾರಾಮಿಲಿಟರಿ ಪಡೆ ನಿವೃತ್ತ ಯೋಧ ಸೈಯದ್ ಇಂತಿಯಾಜ್, ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಮಂಜೇಶ್, ಕಾರ್ಯಾಧ್ಯಕ್ಷ ಕೆ.ಪಿ.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ (ಜೆಪಿ), ನಗರಾಧ್ಯಕ್ಷ ಎಸ್.ಸಚಿನ್, ವೇದಿಕೆಯ ಮುಖಂಡರಾದ ಆನಂದ್, ಚಂದನ್, ಅಭಿ, ಕಿರಣ್, ಹನುಮಂತರಾಜ್, ಸಂತೋಷ್, ಚಿದಾನಂದ್, ರಾಜು, ಅಸ್ಲಂಪಾಷಾ, ವಿಜಯ್, ಜಯರಾಮ್, ಯಲ್ಲಪ್ಪ, ಸುನೀಲ್, ವಿಕ್ಕಿ ಸೇರಿದಂತೆ ವೇದಿಕೆಯ ಆಟೋ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.