ತುಮಕೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಶಾಖೆ ವತಿಯಿಂದ ಸಂಘದ ಜಿಲ್ಲಾಧ್ಯಕ್ಷರಾದ ಆರ್.ಪರಶಿವಮೂರ್ತಿ ನೇತೃತ್ವದಲ್ಲಿ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರು ಕಪ್ಪುಪಟ್ಟಿಯನ್ನು ಧರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಮೂಲಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ಶಿಕ್ಷಕರ ವಿವಿಧ ಬೇಡಿಕೆಗಳಾದ ಪದವೀಧರ ಶಿಕ್ಷಕರ ಸಮಸ್ಯೆ, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ, ಮುಖ್ಯ ಗುರುಗಳಿಗೆ 15,20,25 ವರ್ಷಗಳ ವೇತನ ಬಡ್ತಿ, ನೂತನ ಪಿಂಚಣ ಯೋಜನೆ ರದ್ದುಗೊಳಿಸುವುದು, ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ, ದೈಹಿಕ ಶಿಕ್ಷಕರ ಸಮಸ್ಯೆ ಮತ್ತು ಈ ಹಿಂದೆ ಬೆಳಿಗ್ಗೆ 10.30ರಿಂದ ಆರಂಭಗೊಂಡು ಸಂಜೆ 5.15ರವರೆಗೆ ಇದ್ದ ಶಾಲಾ ಸಮಯವನ್ನು ಮಕ್ಕಳ ಹಿತದೃಷ್ಠಿಯಿಂದ ಪುನಃ ಪ್ರಾರಂಭಿಸಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದÀ ಜಿಲ್ಲಾಧ್ಯಕ್ಷರಾದ ಆರ್.ಪರಶಿವಮೂರ್ತಿ, ರಾಜ್ಯಾದ್ಯಂತ ಏಕಕಾಲದಲ್ಲಿ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರು ಡಿಡಿಪಿಐ ಕಚೇರಿ ಮುಂದೆ ಕಪ್ಪುಪಟ್ಟಿ ಧರಿಸಿ ಡಿಡಿಪಿಐ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದು, ಜಿಲ್ಲೆಯಲ್ಲೂ ಸಹ ಸಂಘದ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು ಸೇರಿ ಉಪನಿರ್ದೇಶಕರ ಕಚೇರಿ ಮುಂದೆ ಕಪ್ಪುಪಟ್ಟಿ ಧರಿಸಿ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಈಗಾಗಲೇ ನಾವು ತರಬೇತಿಯನ್ನು ಬಹಿಷ್ಕಾರ ಮಾಡಿದ್ದೇವೆ, ಆಯಾ ತಾಲ್ಲೂಕಿನ ಬಿಇಓಗಳು, ಸಿಆರ್‍ಪಿಗಳು, ಕೆಆರ್‍ಪಿಗಳು ನಮ್ಮ ಮೇಲೆ ಬಲವಂತ ಮಾಡಿ ತರಬೇತಿ ಮಾಡಿ ಮಾಡಿ ಎಂದು ಒತ್ತಡ ತರುತ್ತಿದ್ದಾರೆ. ಅಸಹಕಾರಿ ಚಳುವಳಿ ಮಾಡುತ್ತಿರುವುದರಿಂದ ನಾವು ಮಕ್ಕಳಿಗೆ ಅನ್ಯಾಯವಾಗದಂತೆ ಪಾಠ ಮಾಡುತ್ತಿದ್ದೇವೆ, ಹಾಗಾಗಿ ಯಾವುದೇ ಒತ್ತಡ ತರದೇ ನಮ್ಮ ಶಿಕ್ಷಕರು ತರಬೇತಿಗೆ ಹಾಜರಾಗುವುದಿಲ್ಲ, ಸಹಕರಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಬೆಳಗಾವಿಯಲ್ಲಿ ಹಾಗೂ ತುಮಕೂರಿನಲ್ಲಿ ನಡೆದ ಮಹತ್ವದ ಹಾಗೂ ತುರ್ತು ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯ ತೀರ್ಮಾನದಂತೆ ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆರ್.ಪರಶಿವಮೂರ್ತಿ ಆಗ್ರಹಿಸಿದರು.
ಶಿಕ್ಷಕರ ಹಲವಾರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಕಳೆದ ಹಲವಾರು ವರ್ಷಗಳಿಂದ ಅದರಲ್ಲೂ 3 ತಿಂಗಳ ಹಿಂದೆಯೇ ಈ ಕುರಿತು ಕಾಲಮಿತಿಯಲ್ಲಿ ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ತೀರ್ಮಾನ ಕೈಗೊಳ್ಳಲು ವಿನಂತಿಸಲಾಗಿತ್ತು. ಬೇಡಿಕೆಗಳು ಈಡೇರಿಸದಿದ್ದರೆ ಶಿಕ್ಷಕರ ಸಂಘಟನೆಯಿಂದ ಅನಿವಾರ್ಯವಾಗಿ ಹೋರಾಟ ಕೈಗೊಳ್ಳುವ ತೀರ್ಮಾನವನ್ನು ಮಾಡಲಾಗಿತ್ತು. `ವಿಶೇಷವಾಗಿ ಶಿಕ್ಷಕರ ಸಂಘಟನೆ ಮಕ್ಕಳೊಂದಿಗಿದ್ದು, ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅಸಹಕಾರ ಚಳುವಳಿಗಳ ಮೂಲಕ ಸರ್ಕಾರದ ಗಮನ ಸಳೆಯುವ ಐತಿಹಾಸಿಕ ನಿರ್ಧಾರ ಮಾಡಲಾಗಿದೆ ಎಂದರು.
ಈಗಾಗಲೇ ಅ.4 ರಿಂದ ತರಬೇತಿ ಬಹಿಷ್ಕಾರ ಮಾಡಲಾಗಿದ್ದು, ಅ.21 ರಿಂದ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಶಾಲಾ ಶೈಕ್ಷಣ ಕ ಚಟುವಟಿಕೆ ನಿರ್ವಹಿಸುತ್ತಾ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ತರಬೇತಿ ಬಹಿಷ್ಕಾರ, ಕಪ್ಪು ಬಟ್ಟೆ ಧರಿಸಿ, ಶೈಕ್ಷಣ ಕ ಚಟುವಟಿಕೆ ನಿರ್ವಹಿಸಿದಾಗಲೂ ಸರ್ಕಾರ ಅಥವಾ ಇಲಾಖೆ ಸ್ಪಂದಿಸದಿದ್ದರೆ ನಿರಂತರ ಅಸಹಕಾರ ಚಳುವಳಿ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
ಅ.30 ರಿಂದ ನವೆಂಬರ್ 10ರವರೆಗೆ ಮಧ್ಯಾಹ್ನದ ಬಿಸಿಯೂಟದ (ಎಂಡಿಎಂ) ಮಾಹಿತಿಯನ್ನು ಅಪ್‍ಡೇಟ್ ಮಾಡದೇ ಬೇಡಿಕೆಗಳ ಬಗ್ಗೆ ಒತ್ತಾಯಿಸುವುದು. ನವೆಂಬರ್ 11 ರಿಂದ ನವೆಂಬರ್ 18ರವರೆಗೆ ಸ್ಯಾಟ್ಸ್ ಮಾಹಿತಿಯನ್ನು ಅಪ್‍ಡೇಟ್ ಮಾಡದೇ: ರಾಜ್ಯದ ಶಿಕ್ಷಕರ ಸಮಸ್ಯೆಗಳ ಕುರಿತು ಗಮನ ಸೆಳೆಯುವುದು, ರಾಜ್ಯ ಹಂತದಲ್ಲಿ 50:1 ರಂತೆ ಆಯ್ಕೆಯಾದ ರಾಜ್ಯದ ಎಲ್ಲಾ ಪ್ರತಿನಿಧಿಗಳು, ಪದಾಧಿಕಾರಿಗಳು, ನಿರ್ದೇಶಕರು ಒಂದು ದಿನದ ರಾಜ್ಯ ಮಟ್ಟದ ರ್ಯಾಲಿ ಹಾಗೂ ಧರಣ ಸತ್ಯಾಗ್ರಹ ನಡೆಸಲಾಗುವುದೆಂದು ಎಚ್ಚರಿಸಿದರು.
ಶಿಕ್ಷಕರು ನಿರಂತರವಾಗಿ ಮಕ್ಕಳ ಪಾಠ ಬೋಧನೆಗೆ ತೊಂದರೆಯಾಗದ ರೀತಿಯಲ್ಲಿ ಕಳೆದೆರಡು ತಿಂಗಳಿನಿಂದ ಮಾಡಿರುವ ಹೋರಾಟ ಕುರಿತು ಹಾಗೂ ಅಂತಿಮವಾಗಿ ರಾಜ್ಯ ಮಟ್ಟದ ಧರಣ ಸತ್ಯಾಗ್ರಹ ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಗುವುದು, ಈ ಹಂತದಲ್ಲೂ ಸರ್ಕಾರ ಸೂಕ್ತವಾಗಿ ಸ್ಪಂದಿಸದಿದ್ದರೆ ತರಗತಿ ಬಹಿಷ್ಕಾರ, ಶಾಲಾ ಬಹಿಷ್ಕಾರದಂತದ ಅಂತಿಮ ಹೋರಾಟಕ್ಕೆ ಸಂಘಟನೆಯಿಂದ ರೂಪ ರೇಷೆಗಳನ್ನು ಹಮ್ಮಿಕೊಳ್ಳಲಾಗುವುದು. ಇದೆಲ್ಲದಕ್ಕೂ ಅವಕಾಶ ನೀಡದೇ ಸರ್ಕಾರ ಶಿಕ್ಷರ ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಡೇರಿಸಬೇಕೆಂದು ಆರ್.ಪರಶಿವಮೂರ್ತಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಡಿಡಿಪಿಐ ಸಿ.ನಂಜಯ್ಯ ಅವರು, ನಿಮ್ಮ ಮನವಿಯನ್ನು ಶಿಕ್ಷಣ ಇಲಾಖೆ ಕಾರ್ಯದರ್ಶಿಗಳು ಮತ್ತು ಶಿಕ್ಷಣ ಸಚಿವರಿಗೆ ರವಾನಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ವಿಭಾಗೀಯ ಮಹಿಳಾ ಉಪಾಧ್ಯಕ್ಷರಾದ ಮಂಜುಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಚಿಕ್ಕಣ್ಣ, ಜಿಲ್ಲಾ ಉಪಾಧ್ಯಕ್ಷರುಗಳಾದ ಕೆ.ಜಿ.ಕಾಳೇಗೌಡ, ಯಶೋಧ, ಖಜಾಂಚಿ ಷ್ಣುಖಪ್ಪ, ಸಹ ಕಾರ್ಯದರ್ಶಿಗಳಾದ ಹೆಚ್.ಕೆ.ಭೈರಯ್ಯ, ಬಿ.ಆರ್.ಅನ್ನಪೂರ್ಣಮ್ಮ, ಸಂಘಟನಾ ಕಾರ್ಯದರ್ಶಿಗಳಾದ ಆರ್.ಮಂಜಣ್ಣ, ಡಿ.ಜಯಲಕ್ಷ್ಮಮ್ಮ ಸೇರಿದಂತೆ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.