breaking newsPolitics PublicPUBLIC

Notice to prepare voter list without allowing double entry

Notice to prepare voter list without allowing double entry

ಡಬಲ್ ಎಂಟ್ರಿಗೆ ಅವಕಾಶ ನೀಡದೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಸೂಚನೆ

ತುಮಕೂರು: ಜಿಲ್ಲೆಯಲ್ಲಿ 2022ರ ಜನವರಿ 1ನ್ನು ಅರ್ಹತಾ ದಿನಾಂಕವೆಂದು ಪರಿಗಣ ಸಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ಮತದಾರರ ಡಬಲ್ ಎಂಟ್ರಿಗೆ ಅವಕಾಶ ನೀಡದೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕೆಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ವೀಕ್ಷಕ ರಾಕೇಶ್ ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2022ಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಗಡಿ ಭಾಗದ ತಾಲ್ಲೂಕುಗಳಲ್ಲಿ ಮತದಾರರು ಎರಡೂ ಕಡೆ ನೋಂದಣ ಮಾಡಿಕೊಳ್ಳುವ ಸಂಭವವಿರುತ್ತದೆ. ಇಂತಹ ಪ್ರಕರಣಗಳಲ್ಲಿ ಸಹಾಯಕ ಮತದಾರರ ನೋಂದಣಾಧಿಕಾರಿಗಳು ವಿಶೇಷ ಗಮನಹರಿಸಿ ಡಬಲ್ ಎಂಟ್ರಿಗೆ ಅವಕಾಶ ನೀಡದಂತೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕೆಂದು ಅವರು ನಿರ್ದೇಶನ ನೀಡಿದರು.
ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಗೆ ಕಲರ್ ಪಿವಿಸಿ ಎಪಿಕ್ ಕಾರ್ಡ್‍ಗಳ ವಿತರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು.

ಮತದಾರರ ಪಟ್ಟಿಗಳಲ್ಲಿನ ಫೋಟೋಗಳ ಮುದ್ರಣದ ಗುಣ ಮಟ್ಟವನ್ನು ಪರಿಶೀಲಿಸಬೇಕು. ಆಯಾ ಉಪವಿಭಾಗ/ತಾಲ್ಲೂಕು ವ್ಯಾಪ್ತಿಯ ವಿವಿಧ ಕಾಲೇಜು ಮುಖ್ಯಸ್ಥರುಗಳ ಸಭೆ ಕರೆದು ವೋಟರ್ ಹೆಲ್ಪ್ ಲೈನ್ ಆಪ್ ಬಗ್ಗೆ ಯುವಕರು/ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಸೂಚನೆ ನೀಡಿದರು.


ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ನವೆಂಬರ್ 8 ರಿಂದ ಡಿಸೆಂಬರ್ 8ರವರೆಗಿನ ಅವಧಿಯಲ್ಲಿ ಸ್ವೀಕೃತವಾದ ಹಕ್ಕು ಮತ್ತು ಆಕ್ಷೇಪಣೆಗಳನ್ನು ನಿಗಧಿತ ಕಾಲಮಿತಿಯೊಳಗೆ ನಿಯಮಾನುಸಾರ ವಿಲೇವಾರಿ ಮಾಡಿ 2022ರ ಜನವರಿ 13ರಂದು ದೋಷರಹಿತ ಅಂತಿಮ ಮತದಾರರ ಪಟ್ಟಿಗಳನ್ನು ಪ್ರಚುರಪಡಿಸಲು ಎಲ್ಲಾ ಅಗತ್ಯ ಕ್ರಮಕೈಗೊಳ್ಳಬೇಕೆಂದು ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಸೂಚಿಸಿದರು.


ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ ವಿಲೇ ಮಾಡುವ ಸಂದರ್ಭದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ನಿಗಧಿತ ನಮೂನೆಗಳಲ್ಲಿ ಸಂಬಂಧಿಸಿದವರಿಗೆ ನೋಟೀಸ್ ನೀಡಿ ನಿಯಮಾನುಸಾರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದಲ್ಲದೆ, ದಾಖಲೆಗಳನ್ನು ಕ್ರಮಬದ್ಧವಾಗಿ ನಿರ್ವಹಿಸಬೇಕೆಂದು ಸೂಚಿಸಿದರು.


ನಂತರ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಸಲ್ಲಿಸಿದ ಅತಿ ಹೆಚ್ಚು ಹಾಗೂ ಅತಿ ಕಡಿಮೆ ಸೇರ್ಪಡೆ/ಡಿಲೀಷನ್ ಆಗಿರುವ 20 ಮತಗಟ್ಟೆಗಳ ವಿವರಗಳನ್ನು ಪರಿಶೀಲಿಸಿದರಲ್ಲದೆ ಸ್ವೀಕೃತವಾದ ನಮೂನೆ-6, 6ಎ, 7, 8 ಮತ್ತು 8ಎ ಅರ್ಜಿಗಳನ್ನು ಮತಗಟ್ಟೆ ಮಟ್ಟದ ಅಧಿಕಾರಿ/ ಸಹಾಯಕ ಮತದಾರರ ನೋಂದಣಾಧಿಕಾರಿಗಳು ನಿಯಮಾನುಸಾರ ವಿಲೇವಾರಿ ಮಾಡಿರುವ ಕುರಿತು ಸೂಪರ್ ಚೆಕ್ಕಿಂಗ್ ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಅವರಿಗೆ ನಿರ್ದೇಶನ ನೀಡಿದರು.


ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ ಒಟ್ಟು 2016 ವಿಐಪಿ ಹಾಗೂ 26557 ವಿಶೇಷ ಚೇತನ ಮತದಾರರನ್ನು ಗುರುತಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರತಿ ಭಾನುವಾರ ಆಯಾ ಮತಗಟ್ಟೆಗಳಲ್ಲಿ ಹಾಜರಿದ್ದು, ಅರ್ಹ ಮತದಾರರಿಂದ ದೂರುಗಳನ್ನು ಸ್ವೀಕರಿಸಿ ಶೀಘ್ರ ವಿಲೇವಾರಿ ಮಾಡಲು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಲೋಪವಾಗದಂತೆ ಜಾಗರೂಕತೆಯಿಂದ ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಈಗಾಗಲೇ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.


ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿಗಳಾದ ಅಜಯ್, ದಿಗ್ವಿಜಯ್, ಸೋಮಪ್ಪ ಕಡಕೋಳ, ಚುನಾವಣಾ ತಹಶೀಲ್ದಾರ್ ಗೌರಮ್ಮ, ಚುನಾವಣಾ ಶಿರಸ್ತೇದಾರ್ ನಾಗಭೂಷಣ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Share this post

About the author

Leave a Reply

Your email address will not be published. Required fields are marked *