ನಗರವನ್ನು ಬೀದಿ ನಾಯಿ ಮುಕ್ತವಾಗಿಸಲು ಪಾಲಿಕೆವತಿಯಿಂದ ತೀರ್ಮಾನ ಕೈಗೊಳ್ಳಲಾಯಿತು.
ತುಮಕೂರು:ತುಮಕೂರು ಮಹಾನಗರಪಾಲಿಕೆವತಿಯಿಂದ ಗೋಶಾಲೆಗಳ ರೀತಿಯಲ್ಲಿಯೇ ಬೀದಿ ನಾಯಿಗಳಿಗೆ ಆಶ್ರಯ ಒದಿಗಿಸುವ ನಾಯಿ ಫಾರಂ(ಡಾಗ್ ಫಾರಂ) ತೆರೆದು,ಬೀದಿ ನಾಯಿಗಳನ್ನು ಹಿಡಿದು, ನಗರವನ್ನು ಬೀದಿ ನಾಯಿ ಮುಕ್ತವಾಗಿಸಲು ಇಂದು ನಡೆದ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಅವರ ಅಧ್ಯಕ್ಷತೆಯಲ್ಲಿ, ಮೇಯರ್ ಕೃಷ್ಣಪ್ಪ, ಉಪಮೇಯರ್ ನಾಜೀಮಾ ಬೀ ಹಾಗೂ ಸದಸ್ಯರುಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಬೀದಿ ನಾಯಿಗಳ ಹಾವಳಿಗಳಿಂದ ಜನ ಸಾಮಾನ್ಯರ ಮೇಲಾಗುತ್ತಿರುವ ದುಷ್ಪರಿಣಾಮಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೀದಿ ನಾಯಿಗಳನ್ನು ಹಿಡಿದು, ಅವುಗಳಿಗೆ ಕೆಲ ದಿನಗಳ ಕಾಲ ಅಜ್ಜಗೊಡನಹಳ್ಳಿಯಲ್ಲಿ ಆಶ್ರಯ ನೀಡಿ, ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಅದೇ ಸ್ಥಳಕ್ಕೆ ತಂದು ಬೀಡುವವರೆಗೂ ಡಾಗ್ ಫಾರಂನಲ್ಲಿ ಆಶ್ರಯ ನೀಡುವ ಪ್ರಯೋಗಾತ್ಮಕ ಯೋಜನೆಗೆ ಸಭೆ ಒಪ್ಪಿಗೆ ನೀಡಿತ್ತು.
ತುಮಕೂರು ನಗರವೂ ಸೇರಿದಂತೆ ಪ್ರಸ್ತುತ ಜಿಲ್ಲೆಯಲ್ಲಿ ಕಳೆದ ಏಪ್ರಿಲ್‍ನಿಂದ ಇದುವರೆಗೂ 197 ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದು,ಕೆಲವು ಪ್ರಕರಣಗಳು ಅತ್ಯಂತ ಗಂಭೀರವಾಗಿವೆ.ಮಕ್ಕಳ ಮೇಲೆ ಎರಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳ ನಿಯಂತ್ರಣ ಕುರಿಂತಂತೆ 19-07-2021ರಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ, ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸಹ ಇದುವರೆಗೂ ಕ್ರಮ ಕೈಗೊಳ್ಳದಿರುವ ಬಗ್ಗೆ ಪಾಲಿಕೆಯ ಆರೋಗ್ಯ ಅಧಿಕಾರಿಯ ಮೇಲೆ ಹರಿಹಾಯ್ದ ಸದಸ್ಯರು, ಸಭೆಯಲ್ಲಿ ತೆಗೆದುಕೊಂಡು ಯಾವ ತೀರ್ಮಾನಗಳು ಜಾರಿಗೆ ಬರುವುದಿಲ್ಲ. ಅಧಿಕಾರಿಗಳು ಸರಕಾರದ ನಿಯಮ,ಸುತ್ತೊಲ್ಲೆ ಎನ್ನುತ್ತಲೇ ಕಾಲ ಕಳೆಯುತ್ತಿದ್ದಾರೆ.ಇದರಿಂದ ಜನಸಾಮಾನ್ಯರು ಜನಪ್ರತಿನಿಧಿ ಗಳನ್ನು ಬಾಯಿಗೆ ಬಂದಂತೆ ಬೈದು ಕೊಳ್ಳುತ್ತಿದ್ದಾರೆ. ಹಾಗಾಗಿ ಬೀದಿ ನಾಯಿಗಳ ಕಾಟಕ್ಕೆ ಶಾಶ್ವತ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಸರಕಾರದ ನಿಯಮಗಳ ಪ್ರಕಾರವೇ ಬೀದಿನಾಯಿಗಳ ಸಂತತಿ ಕಡಿಮೆ ಮಾಡಲು ಕ್ರಮ ಕೈಗೊಳ್ಳುವ ಡಾಗ್ ಫಾರಂ ಪ್ರಸ್ತಾವನೆಯನ್ನು ಮೇಯರ್ ಬಿ.ಜಿ.ಕೃಷ್ಣಪ್ಪ ಸಭೆಯ ಮುಂದಿಟ್ಟರು. ಇದಕ್ಕೆ ಸ್ಥಾಯಿ ಸಮಿತಿಯ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿ, ಪ್ರಾಯೋಗಾತ್ಮಕವಾಗಿ ಈ ಕಾರ್ಯವನ್ನು ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ನಿರ್ದೇಶಿಸಿದರು.
ಬೀದಿ ನಾಯಿಗಳ ರೀತಿಯೇ ಬಿಡಾಡಿ ಹಂದಿಗಳ ಕಾಟವೂ ಹೆಚ್ಚಿದೆ.ಕೆಲವು ಹಂದಿಗಳ ಮಾಲೀಕರು ಹಂದಿಗಳನ್ನು ನಗರದಲ್ಲಿ ಮೇಯಲು ಬಿಟ್ಟು, ಜನಸಾಮಾನ್ಯರಿಗೆ ತೊಂದೆರ ನೀಡುತ್ತಿದ್ದಾರೆ. ಹಾಗಾಗಿ ಬಿಡಾಡಿ ಹಂದಿಗಳನ್ನು ಹಿಡಿದು ಮುಟ್ಟುಗೊಲು ಹಾಕಿಕೊಳ್ಳುವಂತೆ ಕಟ್ಟುನಿಟ್ಟಿನಲ್ಲಿ ಆದೇಶ ನೀಡಿದ ಸೈಯದ್ ನಯಾಜ್,ಹಂದಿಗಳ ಸಾಕಾಣ ಕೆಗೆ ಈಗಾಗಲೇ ಅಣ್ಣೇನಹಳ್ಳಿ ಬಳಿ ಜಿಲ್ಲಾಡಳಿತ 4 ಎಕರೆ ಜಾಗ ಗುರುತಿಸಿದೆ. ಹಂದಿ ಸಾಕಾಣ ಕೆ ಮಾಡುವವರು ಅಲ್ಲಿ ಮಾಡಲಿ, ನಮ್ಮ ಅಭ್ಯಂತರವಿಲ್ಲ. ಆದರೆ ನಗರದ ಎಲ್ಲೆಂದರಲ್ಲಿ ಹಂದಿಗಳು ಓಡಾಡುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗಲಿದೆ. ಹಾಗಾಗಿ ಹಂದಿಗಳನ್ನು ಹಿಡಿದು ಹೊರ ಸಾಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆರೋಗ್ಯ ವಿಭಾಗದ ಸಿಬ್ಬಂದಿಗೆ ಸೂಚನೆ ನೀಡಿದರು.
ನಗರದಲ್ಲಿರುವ ಕೋಳಿ ಮತ್ತು ಕುರಿ, ಮೇಕೆ ಮಾಂಸದ ಅಂಗಡಿಗಳಿಂದ ತ್ಯಾಜ್ಯ ಸಂಗ್ರಹಿಸಿ, ಅಜ್ಜಗೊಡನಹಳ್ಳಿಗೆ ಸಾಗಿಸುವ ಕೆಲಸ ಸುಸೂತ್ರವಾಗಿ ನಡೆಯುತ್ತಿಲ್ಲ. ಇದರ ಪರಿಣಾಮ ಕೋಳಿ, ಮಾಂಸದ ಅಂಗಡಿ ತ್ಯಾಜ್ಯಗಳು ರಸ್ತೆ ಬದಿಯಲ್ಲಿ ತಿನ್ನುವ ನಾಯಿಗಳು, ರಸ್ತೆಯಲ್ಲಿ ತಿರುಗಾಡುವ ಜನರ ಮೇಲೆ ಎರಗುತ್ತಿವೆ.ನಗರದಲ್ಲಿ ಸುಮಾರು 6800 ಬೀದಿ ನಾಯಿಗಳಿವೆ. ಇವುಗಳನ್ನು ಹಿಡಿಯಲು ಹೋದರೆ ಪ್ರಾಣ ದಯಾಸಂಘ, ಇನ್ನಿತರ ಸಂಘಟನೆಗಳು ಸದಸ್ಯರು ನಮ್ಮ ಮೇಲೆ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ, ತೊಂದರೆ ನೀಡುತ್ತಿದ್ದಾರೆ. ಇದು ಸೂಕ್ಷ್ಮಿ ವಿಚಾರವಾಗಿದ್ದು, ಆಯುಕ್ತರ ಜೊತೆ ಚರ್ಚೆ ನಡೆಸಿ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬೀದಿ ನಾಯಿ, ಬೀಡಾಡಿ ಹಂದಿಗಳ ನಿರ್ಮೂಲನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯಾಧಿಕಾರಿಗಳು ಸಭಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯರಾದ ಶ್ರೀಮತಿ ರೂಪಶ್ರೀ, ಶ್ರೀಮತಿ ಮಂಜುಳ, ಶ್ರೀಮತಿ ಯಶೋಧ, ಶ್ರೀನಿವಾಸ್, ನರಸಿಂಹರಾಜು, ಮಂಜುನಾಥ್, ಶಿವರಾಮ್ ಅವರುಗಳು ಭಾಗವಹಿಸಿದ್ದರು