ತುಮಕೂರು ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿರುವ ಶಾಸಕ ಡಿ.ಸಿ.ಗೌರಿಶಂಕರ್ ಅವರು, ಹೆಬ್ಬೂರಿನ ಸಿದ್ದನಾಯಕನಪಾಳ್ಯ ಗ್ರಾಮದ ನೂತನ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯದ ಸ್ಥಿರ ಬಿಂಬ ಪ್ರತಿಷ್ಠಾಪನೆ, ಜ್ಞಾನ ವಿಮಾನ ಗೋಪುರ, ಕಳಸ ಸ್ಥಾಪನೆ, ಜೀರ್ಣೋದ್ದಾರಕ್ಕಾಗಿ 2.50 ಲಕ್ಷ ರೂ. ಧನ ಸಹಾಯ ಮಾಡಿ, ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಹೆಬ್ಬೂರಿನ ಸಿದ್ಧನಾಯಕನಪಾಳ್ಯದಲ್ಲಿ ನಡೆದ ಶ್ರೀ ಅಭಯ ಆಂಜನೇಯಸ್ವಾಮಿ ದೇವಾಲಯದ ಸ್ಥಿರಬಿಂಬ ಪ್ರತಿಷ್ಠಾಪನೆ, ಜ್ಞಾನ ವಿಮಾನ ಗೋಪುರ, ಕಳಸ ಸ್ಥಾಪನೆ ಜೀರ್ಣೋದ್ಧಾರ ಮಹೋತ್ಸವದಲ್ಲಿ ಶಾಸಕ ಡಿ.ಸಿ.ಗೌರಿಶಂಕರ್ ಅವರು ಭಾಗವಹಿಸಿ ಭಕ್ತಾಧಿಗಳಿಗೆ ಸ್ವತಃ ಊಟ ಬಡಿಸುವ ಮೂಲಕ ಅನ್ನದಾಸೋಹದ ವ್ಯವಸ್ಥೆಯನ್ನೂ ಕಲ್ಪಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಿ.ಸಿ.ಗೌರಿಶಂಕರ್ ಅವರು, ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ವಿವಿಧ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಶ್ರಮಿಸುತ್ತಿದ್ದು, ಈಗಾಗಲೇ ಕೊಲ್ಲಾಪುರದಮ್ಮ ದೇಗುಲದ ಗೋಪುರ ಜೀರ್ಣೋದ್ಧಾರ ಮಾಡಿದ್ದೇನೆ. ಗ್ರಾಮಾಂತರ ಕ್ಷೇತ್ರದಲ್ಲಿ ಉಳ್ಳವರು ದೇವಾಲಯಗಳ ಅಭಿವೃದ್ಧಿಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.
ಕಳೆದ ಎರಡು ವರ್ಷಗಳಿಂದಲೂ ಕೊರೋನ ಹಿನ್ನಲೆಯಲ್ಲಿ ರೈತರಿಂದ ತರಕಾರಿ, ಹಣ್ಣು, ಹಂಪಲು ಖರೀಧಿಸಿ ಗ್ರಾಮಾಂತರ ಕ್ಷೇತ್ರದ ಜನತೆಗೆ ಉಚಿತವಾಗಿ ವಿತರಿಸಿದ್ದೇನೆ, ಜೊತೆಗೆ ಉಚಿತ ಔಷಧಿಗಳನ್ನು ಸಹ ನೀಡಿದ್ದೇನೆ, ಕೊರೋನವನ್ನೂ ಲೆಕ್ಕಿಸದೇ ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ತಿಳಿಸಿದರು.
ಕೊರೋನ ಮೊದಲನೇ ಅಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಪುಡ್ ಕಿಟ್ ಹಾಗೂ 2 ಲಕ್ಷ ಮಾಸ್ಕ್ ವಿತರಿಸಲಾಗಿತ್ತು, ಎರಡನೇ ಅಲೆ ವೇಳೆಯೂ ಸಹ 2.5 ಕೋಟಿ ರೂ. ಸ್ವಂತ ವೆಚ್ಚದಲ್ಲಿ 75000 ಪುಡ್ ಕಿಟ್ ವಿತರಿಸಲಾಗಿದೆ. ಗ್ರಾಮಾಂತರ ಕ್ಷೇತ್ರದ ಜನರ ಆರೋಗ್ಯ ರಕ್ಷಣೆ ಹಾಗೂ ಅವರ ಸರ್ವತೋಮುಖ ಅಭಿವೃದ್ದಿಗೆ ನಾನು ಸದಾ ಬದ್ದನಾಗಿದ್ದೇನೆ ಎಂದು ಹೇಳಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 1200 ಕೋಟಿಗೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಗ್ರಾಮಾಂತರ ಕ್ಷೇತ್ರದಲ್ಲಿ ಮನೆ ಮಗನಾಗಿ ಎಲ್ಲರ ಕಷ್ಟಸುಖದಲ್ಲಿ ಭಾಗಿಯಾಗಿದ್ದೇನೆ. ಕರೋನಾ ಎರಡನೇ ಅಲೆ ಬಂದ ವೇಳೆಯಲ್ಲಿಯೂ ಸಹ ಕ್ಷೇತ್ರದ ಜನರ ಆರೋಗ್ಯ ಕಾಪಾಡಲು ನಾನು ಹಾಗೂ ನನ್ನ ಕಾರ್ಯಕರ್ತರು ಶ್ರಮಿಸಿದ್ದೇವೆ ಎಂದರು.
ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಹಾಗೂ ಗೂಳೂರು ಭಾಗದ ಕೆರೆಗಳಿಗೆ ಏತ ನೀರಾವರಿ ಯೋಜಜನೆ ಮೂಲಕ ನೀರು ಹರಿಸಲಾಗುತ್ತಿದೆ, ಈ ಭಾಗದ 25 ಕೆರೆಗಳಿಗೆ ವೃಷಭಾವತಿ ನೀರು ಹರಿಸಲು ಸರ್ಕಾರದಿಂದ ಅನುಮೋದನೆ ದೊರೆತಿದ್ದು ಪೈಪ್ ಲೈನ್ ಅಳವಡಿಸಿ ಶೀಘ್ರವಾಗಿ ಕೆರೆಗಳಿಗೆ ನೀರು ಹರಿಸುವುದಾಗಿ ಭರವಸೆ ನೀಡಿದರು.
ಗ್ರಾಮಾಂತರ ಕ್ಷೇತ್ರದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳು ಚುರುಕು ಪಡೆದಿವೆ ಕ್ಷೇತ್ರ ವ್ಯಾಪ್ತಿ ಎಲ್ಲಾ ಗ್ರಾಮಗಳಲ್ಲಿಯೂ ಸಹ ಆದ್ಯತೆಯ ಮೇಲೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ, ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಇಡೀ ಜಿಲ್ಲೆಗೆ ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಇದೇ ವೇಳೆ ಹೆಬ್ಬೂರು ಚಿಕ್ಕಣ್ಣಸ್ವಾಮಿ ದೇವಸ್ಥಾನದ ಧರ್ಮದರ್ಶಿ ಡಾ.ಪಾಪಣ್ಣ, ಗೋವಿಂದಪ್ಪ, ಕೆ.ಬಿ.ರಾಜಣ್ಣ, ಸಿರಾಕ್ ರವೀಶ್, ರಾಮಚಂದ್ರಪ್ಪ ಸೇರಿದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ದೇವಾಲಯದ ಭಕ್ತಾಧಿಗಳು ಭಾಗವಹಿಸಿದ್ದರು.