ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಬಲ ಕುಂದಿಲ್ಲ:ಆರ್.ಸಿ.ಆಂಜನಪ್ಪ
ತುಮಕೂರು:ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಯಿತು ಎಂದ ಮಾತ್ರಕ್ಕೆ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಲವಿಲ್ಲ ಎಂಬುದು ತಪ್ಪು ತಿಳುವಳಿಕೆ,ಮುಂದಿನ ಜಿಲ್ಲಾ ಪಂಚಾಯಿತಿ,ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಪಡೆದು,ಅಧಿಕಾರ ಹಿಡಿಯುವ ಮೂಲಕ ನಮ್ಮ ಶಕ್ತಿ ಎನು ಎಂಬುದನ್ನು ತೋರಿಸಲಿದ್ದೇವೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ತಿಳಿಸಿದ್ದಾರೆ.
ನಗರದ ಜೆಡಿಎಸ್ ಕಚೇರಿಯಲ್ಲಿಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ 63ನೇ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆದ್ದೂರಿಯಾಗಿ ಆಚರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಕೇವಲ 2 ವಿಧಾನಸಭಾ ಸ್ಥಾನಗಳನ್ನು ಗೆಲಲ್ಲಷ್ಟೇ ಶಕ್ತವಾಗಿದ್ದ ಜೆಡಿಎಸ್ ಪಕ್ಷ, ತನ್ನ ಶಕ್ತಿಯನ್ನು ಹಂತ ಹಂತವಾಗಿ ವೃದ್ದಿಸಿಕೊಂಡು, ಮೂರು ಬಾರಿ ಅಧಿಕಾರವನ್ನು ಹಿಡಿದಿದೆ. ಒಂದುವೇಳೆ ವಿರೋಧ ಪಕ್ಷದವರು ಆರೋಪಿಸುವಂತೆ ಒಳಒಪ್ಪಂದಕ್ಕೆ ಒಳಗಾಗಿದ್ದರೆ, ಇಂದಿಗೂ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುತಿದ್ದರು.ಪ್ರಾದೇಶಿಕ ಪಕ್ಷವಾಗಿ ನಾಡಿನ ಘನತೆ, ಗೌರವ ಕಾಪಾಡುವ ನಿಟ್ಟಿನಲ್ಲಿ ಪಕ್ಷ ಸದಾ ಸಿದ್ದವಿದೆ ಎಂದರು.
ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲು ಅನುಭವಿಸಲು ವಿಪಕ್ಷಗಳು ನಡೆಸಿದ ಅಪಪ್ರಚಾರವೇ ಕಾರಣ.ಮತದಾನ ಒಂದು ದಿನ ಬಾಕಿ ಇದೆ ಎನ್ನುವ ವೇಳೆ ಜೆಡಿಎಸ್,ಬಿಜೆಪಿ ಜೊತೆ ಹೊಂದಾಣ ಕೆ ಮಾಡಿಕೊಂಡಿದೆ ಎಂದು ವ್ಯಾಪಕವಾಗಿ ಪ್ರಚಾರ ಮಾಡಲಾಯಿತು.ಇದನ್ನು ತಡೆಯಲು ಪಕ್ಷದ ಮುಖಂಡರು ಸಾಕಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಹಾಗಾಗಿ ಜೆಡಿಎಸ್‍ಗೆ ಬರಬೇಕಾಗಿದ್ದ ಮತಗಳು ಬಿಜೆಪಿಗೆ ವರ್ಗಾವಣೆಯಾದ ಪರಿಣಾಮ ಪಕ್ಷದ ಅಭ್ಯರ್ಥಿ ಸೋಲು ಅನುಭವಿಸಬೇಕಾಯಿತು ಎಂದು ವಿವರಿಸಿದರು.
ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲೇಬೇಕು ಎಂಬ ಮಹದಾಸೆಯಿಂದ ಪಕ್ಷದ ಎಲ್ಲಾ ಮುಖಂಡರು, ಮಾಜಿ ಶಾಸಕರುಗಳು, ಮಾಜಿ ಸಂಸದರು, ಚುನಾಯಿತ ಪ್ರತಿನಿಧಿಗಳು ಹಗಲಿರುಳು ಶ್ರಮಿಸಿದ್ದಾರೆ.ಸಂಪನ್ಮೂಲ ಕೊರತೆಯಿಂದ ಸಣ್ಣಪುಟ್ಟ ಲೋಪದೋಷಗಳು ಉಂಟಾದವು. ಮುಂದಿನ ದಿನಗಳಲ್ಲಿ ಇವುಗಳನ್ನೇ ಸರಿಪಡಿಸಿಕೊಂಡು ಚುನಾವಣೆ ಎದುರಿಸಲಿದ್ದೇವೆ ಎಂದು ಆರ್.ಸಿ.ಆಂಜನಪ್ಪ ತಿಳಿಸಿದರು.
ಈ ವೇಳೆ ಪಕ್ಷದ ಮುಖಂಡರಾದ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ,ತಾಲೂಕು ಅಧ್ಯಕ್ಷ ಹಾಲೇನೂರು ಆನಂತ, ಪಾಲಿಕೆ ಸದಸ್ಯರಾದ ಧರಣೇಂದ್ರಕುಮಾರ್, ಮಂಜುನಾಥ್,ಮಾಜಿ ಸದಸ್ಯ ಬಾಲಕೃಷ್ಣ,ಮುಖಂಡರಾದ ಹಿರೇಹಳ್ಳಿ ಮಹೇಶ್,ದೇವರಾಜು, ಸೊಗಡು ವೆಂಕಟೇಶ್,ಎಲ್.ಟಿ.ಗೋವಿಂದರಾಜು,ಉಪ್ಪಾರಹಳ್ಳಿ ಮಂಜುನಾಥ್,ರಾಜ್ಯ ಕಾರ್ಯದರ್ಶಿ ಲಕ್ಷ್ಮಮ್ಮ ವೀರಣ್ಣಗೌಡ, ಕೆಂಪರಾಜು, ಆಜ್ಗರ್,ಚಲುವರಾಜು, ರಂಗಪ್ಪ, ತಾಹೀರ, ಬೆಳಗುಂಬ ಪುಟ್ಟಪ್ಪ, ವಕ್ತಾರ ಮಧು ಸೇರಿದಂತೆ ಹಲವರು ಉಪಸ್ಥಿತರಿದ್ದರು.