ಕೊರೋನಾ ನಿಯಂತ್ರಣ ಜಿಲ್ಲೆಗೆ ಆದ್ಯತೆ ನೀಡಲಿ: ಗ್ರಾಮಾಂತರ ಶಾಸಕ ಗೌರಿಶಂಕರ್.
ತುಮಕೂರು: ಬೆಂಗಳೂರು, ಮೈಸೂರು ಹೊರತುಪಡಿಸಿದರೆ ತುಮಕೂರು ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು, ಕೊರೋನಾ ನಿರ್ವಹಣಾ ಸಮಿತಿಯಾಗಲಿ, ರಾಜ್ಯ ಸರ್ಕಾರವಾಗಲಿ ಜಿಲ್ಲೆಗೆ ಆದ್ಯತೆ ನೀಡುವ ಮೂಲಕ ಸೋಂಕು ನಿಯಂತ್ರಣಕ್ಕೆ ಕ್ರಮವಹಿಸಬೇಕು ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರು ಒತ್ತಾಯಿಸಿದರು.
ತಾಲ್ಲೂಕು ಪಂಚಾಯತಿ ಆವರಣದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಸಭೆ ನಡೆಸಿ ಮಾತನಾಡಿದ ಅವರು, ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಹೊರಗಡೆಯಿಂದ ಔಷಧ ತರಲು ಹೇಳುತ್ತಿದ್ದಾರೆ, ಎಬಿಆರ್‍ಕೆ ಯೋಜನೆಯಡಿ ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸ್ಸು ಹೊಂದಿದ ರೋಗಿಗಳಿಗೆ ಹಣ ಕಟ್ಟಲು ಹೇಳುತ್ತಿದ್ದಾರೆ, ತಾಲ್ಲೂಕು ಆರೋಗ್ಯ ಅಧಿಕಾರಿಗಳು ಮತ್ತು ತಹಶೀಲ್ದಾರ್ ಅವರು ಈ ಬಗ್ಗೆ ಗಮನಹರಿಸಬೇಕು ಎಂದು ಸೂಚಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಎರಡು ಮೂರು ಸಾವಿರ ರೂಪಾಯಿ ಔಷಧಿಗಳನ್ನು ಬರೆದುಕೊಟ್ಟರೆ ರೈತರು ಎಲ್ಲಿಂದ ತಂದು ಕೊಡುತ್ತಾರೆ, ಎಬಿಆರ್‍ಕೆ ಯೋಜನೆಯಡಿ ದಾಖಲಾದವರಿಗೂ ಔಷಧ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ, ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಲಹೆ ನೀಡಿದ ಅವರು, ಗ್ರಾಮಾಂತರ ಕ್ಷೇತ್ರದಲ್ಲಿ ಸೋಂಕಿತರಿಗೆ ಔಷಧಗಳನ್ನು ವಿತರಿಸುತ್ತಿಲ್ಲ, ಔಷಧದ ಕೊರತೆ ಇರುವ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿಗಳು ಗಮನಕ್ಕೆ ತಂದಿದ್ದು, ಎರಡು ದಿನಕ್ಕೊಮ್ಮೆ ಆರು ಸಾವಿರ ಮಾತ್ರೆಗಳನ್ನು ವೈಯಕ್ತಿಕವಾಗಿ ಖರೀದಿಸಿ ನೀಡುವುದಾಗಿ ತಿಳಿಸಿದರು.
ಕೊರೋನಾ ಮುಕ್ತ ಕ್ಷೇತ್ರ: ಗ್ರಾಮಾಂತರ ಕ್ಷೇತ್ರವನ್ನು ಕೊರೋನಾ ಮುಕ್ತವಾಗಿಸಲು ಕಂದಾಯ, ಆರೋಗ್ಯ, ಪೊಲೀಸ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು, ಸ್ಯಾಚುರೇಷನ್ 94ಕ್ಕೂ ಹೆಚ್ಚಿದ್ದರೆ ಅವರಿಗೆ ಯಾವುದೇ ತೊಂದರೆ ಇಲ್ಲ ಅವರಲ್ಲಿ ಧೈರ್ಯತುಂಬಿ ಅವರನ್ನು ಕೇರ್ ಸೆಂಟರ್‍ಗೆ ಹೋಗಲು ಮನವೊಲಿಸಬೇಕು, ಹೋಂ ಐಸೋಲೇಷನ್‍ನಿಂದ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಸೋಂಕಿತರನ್ನು ಕೇರ್ ಸೆಂಟರ್‍ಗೆ ಕಳುಹಿಸುವ ಮೂಲಕ ಸೋಂಕು ಹರಡುವುದನ್ನು ನಿಯಂತ್ರಿಸಬಹುದು ಎಂದು ಹೇಳಿದರು.
ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ರೆಡ್‍ಕ್ರಾಸ್ ವತಿಯಿಂದ ಬೆಳಗುಂಬದಲ್ಲಿ, ವೈಯಕ್ತಿಕವಾಗಿ ಕೋಡಿಮುದ್ದನಹಳ್ಳಿಯಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗಿದ್ದು, ಮೂರನೇ ಅಲೆ ಎಚ್ಚರಿಕೆ ಹಿನ್ನೆಲೆಯಲ್ಲಿ ನೇರಳಾಪುರ, ಕಣಕುಪ್ಪೆ ವಸತಿ ಶಾಲೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲು ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಮೋಹನ್‍ಕುಮಾರ್ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಲೋಕೇಶ್ ಅವರಿಗೆ ಸೂಚನೆ ನೀಡಿದರು.
ಸೋಂಕಿತರನ್ನು ಕೋವಿಡ್ ಸೆಂಟರ್‍ಗೆ ಕಳುಹಿಸಿದರೆ ಗ್ರಾಮಾಂತರ ಕ್ಷೇತ್ರ ಅರ್ಧಗೆದ್ದಂತೆ, ಗ್ರಾಮಗಳಲ್ಲಿ ವಾರಕ್ಕೆ ಎರಡು ಬಾರಿ ಸ್ಯಾನಿಟೈಸ್ ಮಾಡಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕ್ರಮವಹಿಸಲು ಸ್ಯಾನಿಟೈಸ್ ಮಾಡಲು ಅಗತ್ಯ ಸಾಮಗ್ರಿ ಕೊರತೆ ಇದ್ದರೆ ವೈಯಕ್ತಿಕವಾಗಿ ಕೊಡಿಸುವುದಾಗಿ ತಿಳಿಸಿದ ಅವರು, ಸ್ಯಾನಿಟೈಸ್ ಮಾಡುವವರಿಗೆ ಅಗತ್ಯವಿರುವ ಪಿಪಿಇ ಕಿಟ್, ಪಿಡಿಒಗಳು ಫೇಸ್ ಶೀಲ್ಡ್ ಕಡ್ಡಾಯವಾಗಿ ಬಳಸಬೇಕು ಎಂದು ಸೂಚಿಸಿದರು.
ಕಠಿಣವಾಗಿ ನಿಯಮ ಪಾಲಿಸಿ: ಪೊಲೀಸ್ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಕಠಿಣವಾಗಿ ಪಾಲಿಸಬೇಕು, ಅನಗತ್ಯವಾಗಿ ಓಡಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಯಾವುದೇ ಶಿಫಾರಸ್ಸನ್ನು ಪರಿಗಣಿಸದೇ ನಿಯಮ ಪಾಲಿಸಬೇಕು ಎಂದ ಅವರು, ಹಾಲು ಉತ್ಪಾದಕರ ಸಂಘಗಳಲ್ಲಿ ಹಾಲು ಹಾಕಲು ಕ್ಯೂ ನಿಲ್ಲುತ್ತಿದ್ದು, ಸಾಮಾಜಿಕ ಅಂತರವನ್ನು ಕಾಪಾಡುತ್ತಿಲ್ಲ, ಸಾಮಾಜಿಕ ಅಂತರ ಕಾಪಾಡದೇ ಇದ್ದರೇ ಡೈರಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮಾಂತರ ಕ್ಷೇತ್ರದಲ್ಲಿರುವ ಕಾರ್ಖಾನೆಗಳು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದರೆ ಪ್ರಕರಣ ದಾಖಲಿಸಿ ಮುಚ್ಚಿಸಬೇಕು ಎಂದು ಹೇಳಿದ ಅವರು. ಪಡಿತರ ಅಂಗಡಿಗಳು ಪ್ರತಿದಿನ ನಿತ್ಯ ಅಂಗಡಿ ತೆರೆದು ನಿಯಮಾನುಸಾರ ಪಡಿತರ ವಿತರಣೆಗೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು ಕೊರೋನಾ ಹಾಟ್ ಸ್ಪಾಟ್‍ನಲ್ಲಿ ಸೋಂಕು ತಗ್ಗಿಸಲು ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮಾಂತರ ಕ್ಷೇತ್ರಕ್ಕಾಗಿಯೇ 4 ಆಂಬುಲೆನ್ಸ್ ಮತ್ತು ಸೋಂಕಿತರ ಅಂತ್ಯಸಂಸ್ಕಾರಕ್ಕೆ ಜೆಸಿಬಿ ವ್ಯವಸ್ಥೆ ಮಾಡಲಾಗಿದ್ದು, ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಜೆಸಿಬಿ ಬರದೇ ಹೋದರೆ ಅಥವಾ ಆಸ್ಪತ್ರೆಗೆ ಹೋಗಲು ಆಂಬುಲೆನ್ಸ್ ಅವಶ್ಯಕವಾದರೆ ಶಾಸಕರ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಅಂತ್ಯ ಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸಲು ಕ್ರಮವಹಿಸುವಂತೆ ಸೂಚಿಸಿದರು.
ಈ ಸಭೆಯಲ್ಲಿ ಡಿವೈಎಸ್ಪಿ ಶ್ರೀನಿವಾಸ್, ತಹಶೀಲ್ದಾರ್ ಮೋಹನ್‍ಕುಮಾರ್, ತಾಲ್ಲೂಕು ಕಾರ್ಯನಿರ್ವಾಹಕಾಧಿಕಾರಿ ಜೈಪಾಲ್, ತಾಲ್ಲೂಕು ಆರೋಗ್ಯಾಧಿಕಾರಿ ಲೋಕೇಶ್, ಸೇರಿದಂತೆ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಸಬ್‍ಇನ್‍ಸ್ಪೆಕ್ಟರ್‍ಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.