ತುಮಕೂರು: ಕೋವಿಡ್-19 ಸೋಂಕು ಜಾಗತಿಕವಾಗಿ ಹರಡಲು ಆರಂಭವಾದಾಗಿನಿಂದ ಜನರು ಅನೇಕ ದುಷ್ಪರಿಣಮಗಳಿಗೆ ತುತ್ತಾಗಿದ್ದಾರೆ.
ಪೋಷಕರನ್ನು, ಅಣ್ಣ-ತಮ್ಮಂದಿರನ್ನು, ಮಡದಿ ಮಕ್ಕಳನ್ನು, ಸ್ನೇಹಿತರನ್ನು ಸೇರಿದಂತೆ ಜೀವನಾಧಾರವಾಗಿದ್ದವರನ್ನು ಕಳೆದುಕೊಂಡ ಜನರು ಮಾನಸಿಕವಾಗಿ ನೊಂದು ಬಳಲುತ್ತಿರುವುದನ್ನು ಕಂಡರೆ ಮನಸ್ಸು ಭಾರವಾಗುತ್ತದೆ.
ಮೃತಪಟ್ಟವರ ಕುಟುಂಬದವರು ತಮ್ಮ ನೋವನ್ನು ವ್ಯಕ್ತಪಡಿಸುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ, ಮತ್ತು ನಮ್ಮ ಸುತ್ತಮುತ್ತಲಲ್ಲಿ ಕಂಡು ನಾವೆಲ್ಲರೂ ಕಂಬನಿ ಮಿಡಿದಿದ್ದೇವೆ.
ಅದರಲ್ಲೂ ತಂದೆ-ತಾಯಿ ಮೃತಪಟ್ಟು ಅನಾಥವಾಗಿರುವ ಮಕ್ಕಳ ಗೋಳಾಟ ಮತ್ತು ಅವರ ಭವಿಷ್ಯ ನೆನೆಸಿಕೊಂಡರೆ ಇನ್ನಿಲ್ಲದ ನೋವು ನಮ್ಮನ್ನಾವರಿಸುತ್ತದೆ.
ಆದ್ದರಿಂದ ಅಂತಹ ಅನಾಥ ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ತುಮಕೂರು ನಗರದಲ್ಲಿ ಹಾಗೂ ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿನಿಂದ ತಂದೆ-ತಾಯಿ ಮೃತಪಟ್ಟು ಅನಾಥವಾಗಿರುವ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಆರಂಭಿಸಿ ಇಂಜಿನಿಯರಿಂಗ್ ಪದವಿಯವರೆಗೆ ಹೆಚ್.ಎಂ.ಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ನೀಡುವುದಾಗಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಹೆಚ್.ಎಂ.ಎಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕರೂ ಆದ ಡಾ.ರಫೀಕ್ ಅಹ್ಮದ್ ರವರು ಈ ಮೂಲಕ ತಿಳಿಸಿರುತ್ತಾರೆ.