ತುಮಕೂರು:ಸಕ್ಕರೆ ಖಾಯಿಲೆಯಿಂದ ದೇಹದ ಇತರೆ ಆಂಗಾಂಗಗಳ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗುವಂತೆ ಸಿದ್ದಗಂಗಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಲಿನಿ ತಿಳಿಸಿದ್ದಾರೆ.
ನಗರದ 25ನೇ ವಾರ್ಡಿನ ಉದ್ಯಾನವನದಲ್ಲಿ ಸಿದ್ದಗಂಗಾ ಆಸ್ಪತ್ರೆಯವತಿಯಿಂದ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಮಧುಮೇಹ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು,ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಅವರು,ಸಕ್ಕರೆ ಖಾಯಿಲೆಯನ್ನು ಈ ಮೊದಲು ಶ್ರೀಮಂತರ ರೋಗ ಎನ್ನಲಾಗುತ್ತಿತ್ತು.
ಆದರೆ ವರ್ಷಗಳು ಕಳೆದಂತೆ ಎಲ್ಲಾ ವರ್ಗದ ಜನರು ಈ ರೋಗಕ್ಕೆ ತುತ್ತಾಗುತಿದ್ದಾರೆ.ವರ್ಷಕ್ಕೆ ಸುಮಾರು 77 ಮಿಲಿಯನ್ ಜನರು ಈ ರೋಗಕ್ಕೆ ತುತ್ತಾಗುತಿದ್ದು,ಭಾರತ ಮಧುಮೇಹ ರೋಗಿಗಳ ತವರೂರು ಎಂಬಂತಾಗಿದೆ.ದೈಹಿಕ ಚಟುವಟಿಕೆಯ ಜೊತೆಗೆ,ಧನಾತ್ಮಕ ಆಲೋಚನೆಗಳ ಮೂಲಕ ಸದಾ ಲವಲವಿಕೆಯಿಂದ ಇದ್ದರೆ,ಮಧುಮೇಹ ಇದ್ದರೂ ಆರೋಗ್ಯವಂತ ಜೀವನ ನಡೆಸಬಹು ದೆಂದರು.
ನವೆಂಬರ್ ತಿಂಗಳಲ್ಲಿ ಕನ್ನಡ ರಾಜೋತ್ಸವ ಇರುವಂತೆ,ಮಕ್ಕಳ ದಿನಾಚರಣೆ,ವಿಶ್ವ ಮಧುಮೇಹ ದಿನಾಚರಣೆಯೂ ಇದೆ.ಮಧುಮೇಹಕ್ಕೆ ಔಷಧಿಯಾಗಿರುವ ಇನ್ಸುಲಿನ್ ಕಂಡು ಹಿಡಿದವರಲ್ಲಿ ಒಬ್ಬರಾದ ಬ್ಯಾಂಟಿಂಗ್ ಅವರ ಜನ್ಮ ದಿನ ನವೆಂಬರ್ 14.ಹಾಗಾಗಿ ಇಂದು ವಿಶ್ವ ಮಧುಮೇಹ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.ಒಮ್ಮೆ ಸಕ್ಕರೆ ಖಾಯಿಲೆಗೆ ತುತ್ತಾದರೆ, ಗುಣಮುಖ ಎಂಬುದಿಲ್ಲ.ದಿನ ನಿತ್ಯ ವ್ಯಾಯಾಮ,ಆರೋಗ್ಯಕರ ಆಲೋಚನೆ,ನಗುಮುಖದ ಜೀವನದಿಂದ ಕಾಯಿಲೆ ಹೆಚ್ಚಾಗದಂತೆ ತಡೆಯಬಹುದು ಎಂದು ಡಾ.ಶಾಲಿನಿ ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ 25ನೇ ವಾರ್ಡಿನ ಪಾಲಿಕೆ ಸದಸ್ಯೆ ಮಂಜುಳ ಆದರ್ಶ ಮಾತನಾಡಿ,ವಾರ್ಡಿನ ಜನರ ಹಿತದೃಷ್ಟಿಯಿಂದ ಈ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.ಜನರು ಇದರ ಉಪಯೋಗ ಪಡೆದುಕೊಳ್ಳುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದರು.
ಈ ವೇಳೆ ಡಾ.ಪ್ರಭಾಕರ್,ಡಾ.ಆದರ್ಶ, ಡಾ.ಮಂಜುನಾಥ್ ಮತ್ತು ಸಿದ್ದಗಂಗಾ ಆಸ್ಪತ್ರೆಯ ಪಿ.ಆರ್.ಓ ಕಾಂತರಾಜು ಉಪಸ್ಥಿತರಿದ್ದರು.