ವರದಿ: ಸೈಯದ್ ಯೂಸುಫ್ ಉಲ್ಲಾ
ತುಮಕೂರು: ವೈಟ್ ಕಾಲರ್ ರಾಜಕಾರಣಿ ಎಂದೇ ಕರೆಸಿಕೊಂಡಿರುವ ಮಾಜಿ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತುಮಕೂರಿನಲ್ಲಿ ಹೋಟೆಲ್ ಗಳಿಗೆ ಭೇಟಿ ನೀಡುವುದೇ ಅಪರೂಪದಲ್ಲಿ ಅಪರೂಪ. ಆದರೂ ಒಂದು ಸಾಮಾನ್ಯ ಟೀ ಸ್ಟಾಲ್ ಗೆ ಭೇಟಿ ನೀಡಿ ಟೀ ಸೇವಿಸುವುದು ಅಂದರೆ ಮಹತ್ವದ ಸುದ್ದಿಯೇ ಹೌದು.
ಡಾ.ಜಿ.ಪರಮೇಶ್ವರ್ ತುಮಕೂರು ನಗರದ ಸದಾಶಿವ ನಗರದಲ್ಲಿರುವ ಟಿಪ್ಪು ತಾಜ್ ಟೀ ಸ್ಟಾಲ್ ಗೆ ಭೇಟಿ ನೀಡಿ ಚಹ ಸೇವಿಸಿದ್ದಾರೆ. ಸಾಮಾನ್ಯ ಅಭಿಮಾನಿಯೊಬ್ಬರ ಆಹ್ವಾನದ ಮೇರೆಗೆ ಟೀ ಅಂಗಡಿಗೆ ಹೋಗಿ ಟೀ ಸೇವಿಸಿದ್ದು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
ಸದಾಶಿವನಗರದಲ್ಲಿರುವ ಟಿಪ್ಪು ತಾಜ್ ಟೀ ಸ್ಟಾಲ್ ಎಂದರೆ ಎಲ್ಲರಿಗೂ ಚಿರಪರಿಚಿತ. ಅಂಗಡಿ ಮಾಲಿಕ ಶಬ್ಬೀರ್ ಅಹಮದ್ ಚಹಾವನ್ನು ರುಚಿಕಟ್ಟಾಗಿ ಮಾಡುತ್ತಾರೆಂಬುದು ಹಲವರ ಅಭಿಪ್ರಾಯ. ಇದೇ ಕಾರಣಕ್ಕೆ ಅಲ್ಲಿಗೆ ಹುಡುಕಿಕೊಂಡು ಚಹಾ ಸೇವಿಸಿ ಬರುವವರು ನೂರಾರು ಮಂದಿ.
ಶಬ್ಬೀರ್ ಡಾ.ಜಿ.ಪರಮೇಶ್ವರ್ ಅವರ ಕಟ್ಟಾ ಅಭಿಮಾನಿ. ಅದೇ ಕಾರಣಕ್ಕೆ ಪರಮೇಶ್ವರ್ ಗೆ ಆಹ್ವಾನ ನೀಡುತ್ತಿದ್ದಂತೆಯೇ ಅಭಿಮಾನಿಯ ಮಾತಿಗೆ ಮನ್ನಣೆ ನೀಡಿ ಟಿಪ್ಪು ತಾಜ್ ಟೀ ಸ್ಟಾಲ್ ಗೆ ಭೇಟಿ ನೀಡುತ್ತಾರೆ. ಅಭಿಮಾನಿಯೊಂದಿಗೆ ಮಾತನಾಡುತ್ತಾರೆ. ವ್ಯಾಪಾರ ಹೇಗಿದೆ ಎಂದು ಕೇಳುತ್ತಾರೆ. ಅಷ್ಟೇ ಅಲ್ಲ ಶಬ್ಬೀರ್ ಕೊಟ್ಟ ಚಹಾವನ್ನು ಸೇವಿಸಿ ಹೋಗಿರುವುದು ಶಬ್ಬೀರ್ ಮತ್ತು ಆತನ ಸ್ನೇಹಿತರ ವಲಯದಲ್ಲಿ ಅಭಿಮಾನವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಡಾ.ಜಿ.ಪರಮೇಶ್ವರ್ ಯಾವ ಕಾರ್ಯಕರ್ತರ ಮನೆಗೂ ಹೋಗುವುದಿಲ್ಲ. ಅಂಥಾದ್ದರಲ್ಲಿ ಒಬ್ಬ ಸಾಮಾನ್ಯ ಅಭಿಮಾನಿಯೊಬ್ಬರ ಆಹ್ವಾನ ಮನ್ನಿಸಿ ಟೀ ಸ್ಟಾಲ್ ಗೆ ಹೋಗಿ ಚಹಾ ಸೇವಿಸಿರುವುದು ಪರಮೇಶ್ವರ್ ಸಾಮಾನ್ಯರ ಮಾತಿಗೂ ಸ್ಪಂದಿಸುತ್ತಾರೆಂಬ ಸಂದೇಶ ರವಾನೆಯಾಗಿದೆ.
ಟೀ ಸ್ಟಾಲ್ ಗೆ ಡಾ.ಜಿ.ಪರಮೇಶ್ವರ್ ಬಂದು ಹೋಗಿರುವ ವಿಷಯವನ್ನು ಶಬ್ಬೀರ್ ಮತ್ತು ಅವರ ಸ್ನೇಹಿತರು ಅತ್ಯಂತ ಖುಷಿಯಿಂದ ಹಂಚಿಕೊಳ್ಳುತ್ತಾರೆ. ಟೀ ಸ್ಟಾಲ್ ಗೆ ಭೇಟಿ ನೀಡಿರುವುದು ಇದೀಗ ತುಮಕೂರಿನಲ್ಲಿ ಚರ್ಚೆಯ ವಿಷಯವಾಗಿದೆ.
ಟೀ ಸ್ಟಾಲ್ ಗೆ ಭೇಟಿ ನೀಡಿ ಆಭಿಮಾನಿ ಶಬ್ಬೀರ್ ಅವರೊಂದಿಗೆ ವ್ಯವಹಾರದ ಮಾಹಿತಿ ಪಡೆದುಕೊಂಡ ನಂತರ ಡಾ.ಜಿ.ಪರಮೇಶ್ವರ್ ಅವರನ್ನು ಶಬ್ಬೀರ್ ಅಹಮದ್ ಮತ್ತು ಅವರ ಸ್ನೇಹಿತರು ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ರಿಜ್ವಾನ್ ಪಾಷಾ, ಫೈಝಲ್, ರಫೀಕ್ ಪಾಷಾ, ಮುಕ್ತಿಯಾರ್ ಮತ್ತಿತರರು ಇದ್ದರು.