ತುಮಕೂರು: ಆರ್‍ಎಸ್‍ಎಸ್ ಮತ್ತು ಬಿಜೆಪಿಯವರು ತಾಲಿಬಾನಿಗಳು ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಮಾಜಿ ಸಚಿವ ಎಸ್.ಶಿವಣ್ಣ ತೀವ್ರವಾಗಿ ಖಂಡಿಸಿದರು.
ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 1925ರಲ್ಲಿ ಆರ್‍ಎಸ್‍ಎಸ್ ಸ್ಥಾಪನೆಗೊಂಡಿದ್ದು, ಸ್ವಯಂ ಸೇವಕರು ದೇಶ ಭಕ್ತರಾಗಿ, ದೇಶ ಪ್ರೇಮಿಗಳಾಗಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಇಂತಹವರ ಬಗ್ಗೆ ಲಘುವಾಗಿ ಮಾತನಾಡುವ ಕಾಂಗ್ರೆಸ್‍ನ ಸಿದ್ದರಾಮಯ್ಯ ಮೀರ್‍ಸಾದಿಕ್, ಜಂಗ್ಲಿ ಎಂದು ಟೀಕಿಸಿದರು.
ಜೆಡಿಎಸ್‍ನಲ್ಲಿದ್ದಾಗ ಸಿದ್ದರಾಮಯ್ಯ ಕಾಂಗ್ರೆಸ್ಸಿಗರನ್ನು ಬಾಯಿಗೆ ಬಂದಂತೆ ಬೈಯ್ದುಕೊಂಡಿದ್ದು, ಕಾಂಗ್ರೆಸ್ ಸೇರಿ ಮುಖ್ಯಮಂತ್ರಿಯಾಗಿದ್ದ ಅವರು ಈಗ ಬಿಜೆಪಿಯವರನ್ನು ಟೀಕಿಸುತ್ತಿರುವುದು ಸರಿಯಲ್ಲ ಎಂದರು.
ಓಟಿಗೋಸ್ಕರ ಮುಸ್ಲೀಮರನ್ನು ಓಲೈಕೆ ಮಾಡುವ ಕಾಂಗ್ರೆಸ್ ಪಕ್ಷ ಹಿಂದೂ ಸಮಾಜವನ್ನು ಒಡೆಯಲು ಒಳಗೊಳಗೆ ಹುನ್ನಾರ ನಡೆಸುತ್ತಿದೆ, ದೇಶಕ್ಕೋಸ್ಕರ ಕೆಲಸ ಮಾಡುವ ಆರ್‍ಎಸ್‍ಎಸ್ ಮತ್ತು ಬಿಜೆಪಿಯವರನ್ನು ಟೀಕಿಸುವುದು ಸೂಕ್ತವಲ್ಲ ಎಂದರು.
ಆರ್‍ಎಸ್‍ಎಸ್ ಮತ್ತು ಬಿಜೆಪಿಯವರು ಚೀನಾ ಯುದ್ಧ, ಪಾಕಿಸ್ತಾನ ಯುದ್ಧ ನಡೆದಾಗ ಭಾರತೀಯ ಸೈನಿಕರಿಗೆ ಅನೇಕ ರೀತಿಯ ಸೇವೆ, ಸಹಾಯ ಮಾಡಿದ್ದಾರೆ. ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಅನೇಕ ರೀತಿಯ ಸಹಾಯ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್‍ನದ್ದು ಕೋವಿ ಸಂಸ್ಕøತಿ. ದೇಶ ದ್ರೋಹಿಗಳಿಗೆ ಸಹಾಯ ಮಾಡುತ್ತಾರೆ. ಘನತೆ, ಗೌರವ ಗೊತ್ತಿಲ್ಲದ ಸಿದ್ದರಾಮಯ್ಯ ದೇಶ ಭಕ್ತರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.
ಮಾಂಸಾಹಾರ ತಿಂದು ಹಿಂದೂ ದೇವಸ್ಥಾನಗಳಿಗೆ ಹೋಗುವ ಸಿದ್ದರಾಮಯ್ಯ ಹಂದಿ ತಿಂದು ಮಸೀದಿಗೆ ಹೋಗಿ ಬರಲಿ ಎಂದು ಸವಾಲು ಹಾಕಿದರು.
ಮಹಾತ್ಮಗಾಂಧಿ ಕಟ್ಟಿ ಬೆಳೆಸಿದ ಕಾಂಗ್ರೆಸ್ ಈಗ ಕಣ್ಮರೆಯಾಗಿದ್ದು, ಇಂದಿರಾಗಾಂಧಿ ಕಾಂಗ್ರೆಸ್ ಈಗ ಅಸ್ಥಿತ್ವದಲ್ಲಿದೆ ಇದು ದೇಶ ಭಕ್ತರ ಬಗ್ಗೆ ಹಗುರವಾಗಿ ಮಾತನಾಡಲು ಅವಕಾಶ ನೀಡಿದೆ ಎಂದು ಆರೋಪಿಸಿದರು.
ಮುಖಂಡರಾದ ಕೆ.ಪಿ.ಮಹೇಶ್, ಹರೀಶ್ ಸುದ್ದಿಗೋಷ್ಠಿಯಲ್ಲಿದ್ದರು.