ವಿಪ ಚುನಾವಣೆಗೆ ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡಿ: ಯಲಚವಾಡಿ ನಾಗರಾಜ್
ತುಮಕೂರು: ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ಒಕ್ಕಲಿಗರಿಗೆ ಪ್ರಾಧಾನ್ಯತೆ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ತುಮಕೂರು ಜಿಲ್ಲಾ ಒಕ್ಕಲಿಗ ಸಮುದಾಯ ಒಕ್ಕೂಟದ ಪ್ರಧಾನ ಸಂಚಾಲಕರಾದ ಆಡಿಟರ್ ಯಲಚವಾಡಿ ನಾಗರಾಜ್ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಒಕ್ಕಲಿಗರ ಕೊಡುಗೆ ಅಪಾರವಾಗಿದ್ದು, ಜಿಲ್ಲೆಯಲ್ಲಿ ಕೆ.ಲಕ್ಕಪ್ಪ, ಮಲ್ಲಣ್ಣ, ಮೂಡ್ಲಗಿರಿಗೌಡ, ಮಾಲಿ ಮರಿಯಪ್ಪ, ಹುಚ್ಚಮಾಸ್ತಿಗೌಡ್ರು, ಬಿ.ಬೈರಪ್ಪಾಜಿ, ವೈ.ಕೆ.ರಾಮಯ್ಯ, ತಮ್ಮಣ್ಣಗೌಡ, ಅಂದಾನಯ್ಯ, ರಾಮಕೃಷ್ಣಯ್ಯ, ವೀರಣ್ಣಗೌಡ, ರಂಗನಾಥಪ್ಪ ಸೇರಿದಂತೆ ಹಲವಾರು ಮಂದಿ ಒಕ್ಕಲಿಗ ಸಮುದಾಯದ ನಾಯಕರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಇವರ ನಂತರ ಒಕ್ಕಲಿಗರಿಗೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ, ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ 1800ಕ್ಕೂ ಹೆಚ್ಚು ಮಂದಿ ಒಕ್ಕಲಿಗ ಸಮುದಾಯದವರೇ ಗೆದ್ದಿದ್ದಾರೆ. ಅವರಿಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ, ಹೀಗಿರುವಾಗ ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡಿ ಟಿಕೇಟ್ ನೀಡಿದರೆ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಲು ಅವಕಾಶ ಸಿಕ್ಕಂತಾಗುತ್ತದೆ ಎಂದರು.
ಜಿಲ್ಲೆಯಲ್ಲಿ 40 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಶೇ.40 ರಷ್ಟು ಮತದಾರರಿದ್ದು, ಇಲ್ಲಿಯವರೆಗೂ ಒಕ್ಕಲಿಗರಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ, ಲಕ್ಕಪ್ಪನವರ ಅವಧಿಯಲ್ಲಿ ಜಿಲ್ಲೆಗೆ ಹೆಚ್.ಎಂ.ಟಿ. ಕಾರ್ಖಾನೆ ಬಂತು, ತುಮಕೂರು ಹಾಲಿನ ಡೈರಿ ಬಂತು, ತುರುವೇಕೆರೆಗೆ ಫ್ಯಾಕ್ಟರಿ ಬಂತು, ವೈ.ಕೆ.ರಾಮಯ್ಯ ಅವರು ಜಿಲ್ಲೆಯ ನೀರಾವರಿಗಾಗಿ ಹೋರಾಡಿ ಮಹಾನ್ ಕೊಡುಗೆಯನ್ನೇ ನೀಡಿದ್ದಾರೆ. ಇಂತಹ ಹಿನ್ನಲೆಯುಳ್ಳ ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಮುಂಬರುವ ವಿಧಾನ ಪರಿಷತ್‍ಗೆ ಟಿಕೇಟ್ ಕಲ್ಪಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ತಿಳಿಸಿದರು.
ಒಕ್ಕಲಿಗರು ಹಿಂದಿನಿಂದಲೂ ವಿಶಾಲ ಮನೋಭಾವ ಉಳ್ಳವರು. ಹಳ್ಳಿಗಳಲ್ಲಿ ತಮ್ಮ ಹೊಲ, ಗದ್ದೆ, ಮನೆಗೆ ಕಾಂಪೌಂಡ್‍ಗೆ ಗೋಡೆ ಕಟ್ಟಿಕೊಳ್ಳದೇ, ಜಾನುವಾರುಗಳು ಹಾಗೂ ಎಲ್ಲಾ ಸಮುದಾಯದವರಿಗೆ ಆಶ್ರಯ ಕಲ್ಪಿಸುತ್ತಾ ಬಂದಿದ್ದಾರೆ. ಸಮುದಾಯದ ಹಾಸ್ಟೆಲ್‍ಗಳಲ್ಲಿ, ವಿದ್ಯಾಸಂಸ್ಥೆಗಳಲ್ಲಿ, ಮಠಗಳಲ್ಲಿ ಎಲ್ಲಾ ವರ್ಗದವರೂ ಓದುತ್ತಿದ್ದಾರೆ. “ಒಕ್ಕಲಿಗ ಒಕ್ಕಿದರೆ ನಕ್ಕು ನಲಿವುದು ಜಗವೆಲ್ಲಾ, ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲಾ” ಎಂಬ ಕವಿವಾಣ ಯಂತೆ ಒಕ್ಕಲಿಗ ಸಮುದಾಯಕ್ಕೆ ಮುಂಬರುವ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಗೆ ಪ್ರಾತಿನಿಧ್ಯ ಕಲ್ಪಿಸಿದ್ದೇ ಆದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಒಕ್ಕಲಿಗರು ಅಸ್ತಿತ್ವ ಉಳಿಸಿಕೊಳ್ಳಲು ಇತರ ಸಮುದಾಯದವರಂತೆ ತಮಗಷ್ಟೇ ಸೀಮಿತರಾಗುವ ಅಗತ್ಯ ಎದುರಾಗಿದೆ. ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೂ ಸಾಮಾನ್ಯ ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಪ್ರಾತಿನಿಧ್ಯ ಕಲ್ಪಿಸಿದರೆ ಆಯಾ ಕ್ಷೇತ್ರಗಳು ಅಭಿವೃದ್ಧಿಗೆ ಮುನ್ನುಡಿ ಬರೆಯಲಿವೆ ಎಂದರು.
ವಿಧಾನ ಪರಿಷತ್‍ಗೆ ನಾನೂ ಆಕಾಂಕ್ಷಿ: 2003ರಿಂದಲೂ ನಾನು ವಿಧಾನ ಪರಿಷತ್‍ಗೆ ಆಕಾಂಕ್ಷಿಯಾಗಿದ್ದು, ಅಲ್ಲಿಂದಲೂ ಇಲ್ಲಿಯವರೆಗೂ ಅವಕಾಶ ವಂಚಿನಾಗಿ ಬಂದಿದ್ದೇನೆ. ಮುಂಬರುವ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಗೆ ಆಕಾಂಕ್ಷಿಯಾಗಿದ್ದು, ಈ ಭಾರಿ ಪಕ್ಷದಲ್ಲಿ ಒಕ್ಕಲಿಗ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಒಕ್ಕಲಿಗರಿಗೆ ಯಾರಿಗೇ ಟಿಕೇಟ್ ನೀಡಿದರೂ ಸಹ ನಮ್ಮ ವಿರೋಧವಿಲ್ಲ, ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದು, ಅವರ ನಿರ್ದೇಶನದಂತೆ ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕಲಿಗ ಸಮಾಜದ ಮುಖಂಡರಾದ ಕೆ.ಎಲ್.ದೇವಣ್ಣ, ದೊಡ್ಡಲಿಂಗಯ್ಯ, ಬೆಂಡುಂಡೆ ಜಯರಾಮ್, ಗೀತಾರಾಜಣ್ಣ, ಜಯಮ್ಮ, ಕೇಶವಮೂರ್ತಿ, ಬಿ.ಎಲ್.ವಿಶ್ವನಾಥ್, ರಾಮಲಿಂಗಯ್ಯ, ಬೆಟ್ಟಸ್ವಾಮಿ, ನಂಜೇಗೌಡ, ಹೊನ್ನಗಿರಿಗೌಡ, ಕುಮಾರ್, ಡಾ.ಪರಮೇಶ್ವರಪ್ಪ, ನಂಜಪ್ಪ, ಎನ್.ಮಂಜುನಾಥ್, ರಂಗಪ್ಪ, ಕೃಷ್ಣಯ್ಯ, ಲಕ್ಕೇಗೌಡ, ಗಿರೀಶ್, ಗೋವಿಂದಯ್ಯ, ರಾಜಣ್ಣ ಹೊನ್ನೇಗೌಡ ಮುಂತಾದವರು ಭಾಗವಹಿಸಿದ್ದರು.